​ಕಾಂಗ್ರೆಸ್ ಗ್ಯಾರಂಟಿಗೆ ನಿಯಮ ಯಾಕೆ: ವೇದವ್ಯಾಸ ಕಾಮತ್ ಪ್ರಶ್ನೆ

Update: 2023-05-29 15:27 GMT

ಮಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ‘ಗ್ಯಾರಂಟಿ’ಯು ಗೊಂದಲಕ್ಕೆ ಕಾರಣವಾಗಿದೆ. ‘ಗ್ಯಾರಂಟಿ’ಯನ್ನು ಜಾರಿ ಮಾಡಲು ಕಾಂಗ್ರೆಸ್ ಪರದಾಡುತ್ತಿದೆ. ಸರಕಾರ ಬಂದು 10 ದಿನವಾದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಗೊಂದಲ ಸೃಷ್ಟಿಸಿ ಗ್ಯಾರಂಟಿಗೆ ನಿಯಮ ತರಲು ಹೊರಟಿದೆ. ಚುನಾವಣಾ ಪೂರ್ವದಲ್ಲಿ ಉಲ್ಲೇಖ ಮಾಡದ ಷರತ್ತುಗಳು ಈಗ ಯಾಕೆ ವಿಧಿಸಲಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ದ್ವೇಷದ ರಾಜಕಾರಣಕ್ಕೆ ಮುಂದಾಗಿವೆ. ಅದಲ್ಲದೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ. ಈಗಾಗಲೇ ಕೇಂದ್ರ ಸರಕಾರದಿಂದ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಕಾಂಗ್ರೆಸ್ ಈಗ ಕೇವಲ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಿ ಜನರ ದಾರಿತಪ್ಪಿಸುತ್ತಿದೆ. ಹೀಗಾಗಿ ಕೇಂದ್ರದ ಪಾಲಿನ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯ ಸರಕಾರದಿಂದಲೇ ತಲಾ 10 ಕೆಜಿ ಅಕ್ಕಿ ವಿತರಿಸಲಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯ 20 ಸಾವಿರ ಕೋ.ರೂ. ಮೊತ್ತದ ಅನುದಾನವನ್ನು ತಡೆಹಿಡಿಯುವ ಮೂಲಕ ರಾಜಕೀಯ ಹಗೆತನ ಸಾಧಿಸುತ್ತಿವೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸತ್ಯಸಾರಮಣಿ ದೈವದ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞೆ ಸ್ವೀಕರಿಸಿರುವುದನ್ನು ವಿರೋಧಿಸಿದ ಸಿಎಂ ಸಿದ್ದರಾಮಯ್ಯ ತುಳುನಾಡಿನ ದೈವ, ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಕಾಮತ್ ದೂರಿದರು.

ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಸ್ಥಗಿತಗೊಳಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಸುಮಾರು 500ಕ್ಕೂ ಅಧಿಕ ಬಸ್‌ಗಳು ಈ ಭಾಗದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಸಾವಿರಾರು ಕುಟುಂಬಗಳು ಈ ಸೇವೆಯಲ್ಲಿ ಜೀವನ ನಿರ್ವಹಿಸುತ್ತಿವೆ. ಖಾಸಗಿ ಬಸ್‌ಗಳನ್ನು ಸ್ಥಗಿತ ಮಾಡಿದರೆ ಅಷ್ಟೂ ಬಸ್‌ಗಳನ್ನು ಸರಕಾರ ಎಲ್ಲಿಂದ ತರಲಿದೆ ? ಈ ಬಗ್ಗೆ ಅನಗತ್ಯ ಗೊಂದಲ ಉಂಟು ಮಾಡಬಾರದು ಎಂದು ಶಾಸಕ ಕಾಮತ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಪೂರ್ಣಿಮಾ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಪಕ್ಷದ ಮುಖಂಡರಾದ ನಿತಿನ್ ಕುಮಾರ್, ರವಿಶಂಕರ ಮಿಜಾರು, ಪ್ರೇಮಾನಂದ ಶೆಟ್ಟಿ, ರೂಪಾ ಬಂಗೇರ, ಸುರೇಂದ್ರ ಜಪ್ಪಿನಮೊಗರು ಉಪಸ್ಥಿತರಿದ್ದರು. 

Similar News