ಪಠ್ಯ ಪುಸ್ತಕ ಪರಿಷ್ಕರಣೆಗೆ ತಕ್ಷಣವೇ ಸಮಿತಿ ರಚಿಸಲು ‘ಸಮಾನ ಮನಸ್ಕರ ಒಕ್ಕೂಟ’ದಿಂದ ಸಿಎಂಗೆ ಮನವಿ

Update: 2023-05-29 15:34 GMT

ಬೆಂಗಳೂರು, ಮೇ 29: ‘ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲು ಕೂಡಲೇ ಒಂದು ತಜ್ಞರ ಸಮಿತಿಯನ್ನು ರಚಿಸಬೇಕು’ ಎಂದು ಸಮಾನ ಮನಸ್ಕರ ಒಕ್ಕೂಟದ ಮುಖಂಡರಾದ ಡಾ. ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಪ್ರೊ.ರವಿವರ್ಮಕುಮಾರ್, ಪ್ರೊ.ನಿರಂಜನಾರಾಧ್ಯ, ಡಾ.ವಸುಂಧರ ಭೂಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ ಹಿರಿಯ ಸಾಹಿತಿ, ಕಲಾವಿದರು, ‘ಬಿಜೆಪಿ ಸರಕಾರವು ಶಿಕ್ಷಣವನ್ನು ಸಂಪೂರ್ಣ ರಾಜಕಾರಣಕ್ಕೆ ಬಳಸಿಕೊಂಡು, ಗೊಂದಲವನ್ನು ಸೃಷ್ಟಿಸಿತ್ತು. ಈಗಾಗಲೇ ಮುದ್ರಣವಾಗಿ ಶಾಲೆಗಳಿಗೆ ತಲುಪಿರುವ ಕಲುಷಿತ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬಾರದು. ಬದಲಾದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ಈ ಪುಸ್ತಕಗಳಿಂದ ತೆಗೆದು ಹಾಕಿ ವಿತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘13,352 ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯು ಮುಗಿದಿದ್ದು, ಮುಂದಿನ ಒಂದು ವಾರದೊಳಗಾಗಿ ಈ ಶಿಕ್ಷಕರು ಶಾಲೆಯಲ್ಲಿರುವಂತೆ ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು. ಪೌಷ್ಟಿಕಾಂಶದ ದೃಷ್ಟಿಯಿಂದ ಅಂಗನವಾಡಿಯಿಂದ ಹತ್ತನೆ ತರಗತಿಯ ಎಲ್ಲ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆಯನ್ನು ವಿತರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.

ಶಿಕ್ಷಣದಲ್ಲಿ ಹಿಂದುತ್ವ ಸಿದ್ಧಾಂತಗಳನ್ನು ಬಲವಂತವಾಗಿ ಹೇರಲು ತಂದಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ವಿಧಾನಸಭೆಯ ಮೊದಲ ಅಧಿವೇಶನದಲ್ಲೇ ತಿರಸ್ಕರಿಸುವ ನಿರ್ಧಾರವನ್ನು ಕೈಗೊಳ್ಳಬೇಕು. ಖಾಸಗಿ ಸ್ವಾಯತ್ತ ವಿವಿಗಳನ್ನು ಅಣಬೆಗಳಂತೆ ತೆರೆಯಲು ಅವಕಾಶಗಳನ್ನು ನೀಡಬಾರದು. ಸಂವಿಧಾನದಲ್ಲಿ ನಂಬಿಕೆಯುಳ್ಳವರನ್ನು ವಿವಿಗಳ ಕುಲಪತಿ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

‘ಪ್ರೌಢಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ, ಬೈಸಿಕಲ್ ವಿತರಣೆ ಯೋಜನೆಯನ್ನು ಮುಂದುವರಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಡಿಇಆರ್‍ಎಯನ್ನು ಸಕ್ರಿಯಗೊಳಿಸಬೇಕು. ರದ್ದಾಗಿರುವ ವಿದ್ಯಾರ್ಥಿವೇತನ ಯೋಜನೆ ಮರುಜಾರಿಯಾಗಬೇಕು. ಎನ್‍ಇಪಿ ಹಿಂಪಡೆಯಬೇಕು. ಸಮ ಸಮಾಜಕ್ಕಾಗಿ ಸಮಾನ ಶಿಕ್ಷಣ ಆಶಯವನ್ನು ಸಾಕಾರಗೊಳಿಸಬೇಕು ಎಂದು ಕೋರಲಾಗಿದೆ.

ವಿವಿಧ ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಹೊಸ ಪ್ರತಿಭಾವಂತರಿಗೆ ಅವಕಾಶ ನೀಡಬೇಕು. ಗ್ರಂಥಾಲಯ ಇಲಾಖೆಯಲ್ಲಿ ಮೂರು ವರ್ಷಗಳಿಂದ ಪುಸ್ತಕ ಖರೀದಿ ಆಗಿಲ್ಲ. ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಬೇಕು. ಹೆಣ್ಣುಮಕ್ಕಳ ದೌರ್ಜನ್ಯ ಅಧ್ಯಯನ ಸಮಿತಿಯ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಕಸಾಪ ಸ್ವಾಯತ್ತತೆ ರಕ್ಷಣೆ ಮಾಡಲು ಮಸೂದೆ ಮಂಡಿಸಬೇಕು. ಹಿಜಾಬ್ ವಿವಾದದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತ ಸರಕಾರಿ ಆದೇಶವನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಡಾ.ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ, ಡಾ.ಜಾಫೆಟ್, ರುದ್ರಪ್ಪ ಹನಗವಾಡಿ, ಪ್ರೊ.ಎಲ್.ಎನ್.ಮುಕುಂದರಾಜ್, ಕೆ.ಶರೀಫಾ, ಕೆ.ಎಸ್.ವಿಮಲಾ, ಡಾ.ಲೀಲಾ ಸಂಪಿಗೆ, ಶ್ರೀಪಾದಭಟ್, ಎ.ಕೆ.ಕರುಣಾಕರ, ಎಚ್.ಆರ್.ಜಯರಾಮ್, ಬಿ.ಎ.ನರಸಿಂಹನ್, ಕೆ.ಸುದೀಶ್, ಡಾ.ಗಿರೀಶ್ ಮೂಡ್, ದಿನೇಶ್ ಅಮೀನ್ ಮಟ್ಟು, ಸುರೇಂದ್ರ ರಾವ್, ಜಿ.ಶರಣಪ್ಪ, ರಾಜೇಂದ್ರ ಸಿಂಗ್ ಬಾಬು, ಎನ್. ಹನುಮೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News