ದಲಿತರು ಮತ್ತು ಉದ್ಯಮಶೀಲತೆ

Update: 2023-05-30 05:03 GMT

ಇಂದಿಗೂ ನಾಗರಿಕ ಸಮಾಜದ ಬಹುಪಾಲು - ಆರ್ಥಿಕ ಉದ್ಯಮಗಳು ದಲಿತೇತರ ಸಮುದಾಯಗಳ ಹಿಡಿತದಲ್ಲಿವೆ. ಕಾರಣ ದಲಿತ ಸಮುದಾಯದ ಜನರಲ್ಲಿ ಉದ್ಯಮಶೀಲತೆಯ ಕುರಿತು ಅರಿವು, ಉದ್ಯಶೀಲತೆಯ ಮಹತ್ವ, ಜಾಗೃತಿ ಇಲ್ಲದಿರುವುದು ಒಂದೆಡೆಯಾದರೆ, ಸರಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿಯ ಕೊರತೆ, ಹಣಕಾಸು ನೆರವು, ಬ್ಯಾಂಕ್ ಸಾಲ, ಇತ್ಯಾದಿ ವಿಷಯಗಳ ಕುರಿತು ಸರಿಯಾದ ತಿಳುವಳಿಕೆ, ಮಾರ್ಗದರ್ಶನ ಇಲ್ಲದಿರುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಉದ್ಯಮಶೀಲತೆಯಿಂದ ಬಹುದೂರ ಉಳಿಯಲು ಪ್ರಮುಖ ಕಾರಣವಾಗಿರುತ್ತದೆ.



ಉದ್ಯಮಶೀಲತೆ ಇಂದು ಜಗತ್ತಿನ ಬೇಡಿಕೆಯ ಹಾಗೂ ಅವಶ್ಯಕ ವಾಗಿರುವ ಅತ್ಯಂತ ಕ್ಷೇತ್ರ. ಒಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಉದ್ಯಮಶೀಲತೆ ಪ್ರಮುಖ ಪಾತ್ರವನ್ನು ಹೊಂದಿರುತ್ತದೆ. ಅದೇ ರೀತಿ ಜನಾಂಗದ, ಸಮುದಾಯದ, ಅಭಿವೃದ್ಧಿಯಲ್ಲಿಯೂ ಉದ್ಯಮ ಶೀಲತೆ ಅವಲಂಬಿತವಾಗಿರುವುದನ್ನು ನಿರ್ಲಕ್ಷಿಸಲಾಗದು. ಆದರೆ ಉದ್ಯಮಶೀಲತೆಯಿಂದ ಬಹುದೂರ ಉಳಿದು ಹೋಗಿರುವ ತಳಸಮುದಾಯ ಗಳು ಇನ್ನೂ ಆ ಕುರಿತು ಚಿಂತಿಸುವ ಮಟ್ಟಕ್ಕೂ ವಿಕಸನಗೊಂಡಿಲ್ಲದಿರುವುದು ಬೇಸರದ ವಿದ್ಯಮಾನ. ಇಂದಿಗೂ ನಾಗರಿಕ ಸಮಾಜದ ಬಹುಪಾಲು - ಆರ್ಥಿಕ ಉದ್ಯಮಗಳು ದಲಿತೇತರ ಸಮುದಾಯಗಳ ಹಿಡಿತದಲ್ಲಿವೆ. ಕಾರಣ ದಲಿತ ಸಮುದಾಯದ ಜನರಲ್ಲಿ ಉದ್ಯಮಶೀಲತೆಯ ಕುರಿತು ಅರಿವು, ಉದ್ಯಶೀಲತೆಯ ಮಹತ್ವ, ಜಾಗೃತಿ ಇಲ್ಲದಿರುವುದು ಒಂದೆಡೆಯಾದರೆ, ಸರಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿಯ ಕೊರತೆ, ಹಣಕಾಸು ನೆರವು, ಬ್ಯಾಂಕ್ ಸಾಲ, ಇತ್ಯಾದಿ ವಿಷಯಗಳ ಕುರಿತು ಸರಿಯಾದ ತಿಳುವಳಿಕೆ, ಮಾರ್ಗದರ್ಶನ ಇಲ್ಲದಿರುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಉದ್ಯಮಶೀಲತೆಯಿಂದ ಬಹುದೂರ ಉಳಿಯಲು ಪ್ರಮುಖ ಕಾರಣವಾಗಿರುತ್ತದೆ.

ಈ ನಿಟ್ಟಿನಲ್ಲಿ ಸರಕಾರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಲ್ಲಿ ಉದ್ಯಮಶೀಲತೆಗೆ ಒತ್ತುನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ತಾಂಡ ಅಭಿವದ್ಧಿ ನಿಗಮದ ಮೂಲಕ ಶೋಷಿತ ಜನರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಸ್ವಯಂ ಉದ್ಯೋಗ ಯೋಜನೆ, ಉದ್ಯಮಶೀಲತಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನಾವು ನೆನಪಿಸಿಕೊಳ್ಳಲೇಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾವಂತ ಯುವ ಜನರು ಇಂದಿಗೂ ಉದ್ಯಮಶೀಲತೆಯತ್ತ ಗಮನಹರಿಸಿಲ್ಲ. ಸರಕಾರಿ ಕೆಲಸಕ್ಕಾಗಿಯೇ ಕಾದು ಕುಳಿತುಕೊಂಡಿರುವುದು ಬೇಸರದ ಸಂಗತಿ. ಇದರಿಂದಾಗಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಚಾರ. ಈ ನಿಟ್ಟಿನಲ್ಲಿ ಪ್ರತೀ ಸರಕಾರಗಳು ಸ್ವಯಂ ಉದ್ಯೋಗಕ್ಕೆ ಒತ್ತು ನೀಡುತ್ತಾ ಬಂದಿದ್ದರೂ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಒಂದೆರಡು ಗುರಿಗಳನ್ನು ನಿಗದಿಪಡಿಸಿದ್ದರಿಂದ, ಹಣಕಾಸು ನೆರವು ಪಡೆಯಲು ಕನಿಷ್ಠ ನಾಲೈದು ವರ್ಷಗಳ ಕಾಲ ಓಡಾಡುವಂತಾಗಿದೆ. ದಲಿತ ಸಮುದಾಯಕ್ಕೆ ಬೇರೆಯವರ ಆಟೊದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ತನಗೆ ಸ್ವಂತದ್ದೊಂದು ಆಟೊ ಖರೀದಿಸಿ ದುಡಿಯಬೇಕೆಂಬ ಆಸೆ ಚಿಗುರುವುದೇ ಇಲ್ಲ. ಕಾರಣ ನನ್ನಿಂದ ಸಾಧ್ಯವಿಲ್ಲ ಎಂಬ ಮನಸ್ಸು ಆತನನ್ನು ಆವರಿಸಿರುತ್ತದೆ.

ಹೆಚ್ಚಿನ ಕುಲಕಸುಬುಗಳು ಉದ್ಯಮ ರೂಪವನ್ನು ಪಡೆದುಕೊಂಡಿವೆ. ಚಪ್ಪಲಿ ತಯಾರಿಕೆ, ಬುಟ್ಟಿ ತಯಾರಿಕೆ, ಕೈಮಗ್ಗಗಳು, ಬೆಳ್ಳಿ ಕಸೂತಿ, ಚಿನ್ನಾಭರಣ ಗಳು, ಪೀಠೋಪಕರಣಗಳು ಇಂದು ಬೃಹತ್ ವಾಣಿಜ್ಯ ಉದ್ಯಮಗಳಾಗಿ ಬೆಳೆದು ನಿಂತಿವೆ. ಮನೆಯಲ್ಲಿ ಮಾಡುವ ಇಡ್ಲಿ, ನೀರುದೋಸೆ, ಆಪಾ, ನೈಯಪ್ಪ, ಸೇವಿಗೆಇಂದು ಮಂಗಳೂರು ನಗರದಲ್ಲಿ, ಮನೆಯಲ್ಲಿ ತಯಾರಿಸುವ ಆಹಾರೋತ್ಪನ್ನ ಉದ್ಯಮಗಳಾಗಿವೆ. ಆದರೆ ವಿದ್ಯಾವಂತ ದಲಿತರು ಸರಕಾರದ ಕೆಲಸವನ್ನೇ ನೆಚ್ಚಿಕೊಂಡಿರುವುದು, ಉದಶೀಲತೆಯ ಅರಿವಿಲ್ಲದಿರುವುದರ ದ್ಯೋತಕ.

ಈ ನಿಟ್ಟಿನಲ್ಲಿ ದಲಿತ ಸಮುದಾಯದ ವಿದ್ಯಾವಂತ ಯುವಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು. ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಪಡೆದುಕೊಳ್ಳಲು ಅಗತ್ಯ ಮಾಹಿತಿಗಳನ್ನು ಕಲೆ ಹಾಕಬೇಕು. ಸರಕಾರದಿಂದ ಜರುಗುವ ಉದ್ಯಮಶೀಲತಾ ಜಾಗೃತಾ ಕಾರ್ಯಕ್ರಮಗಳಲ್ಲಿ, ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರಗಳಲ್ಲಿ ಹಾಗೂ ವಿವಿಧ ವೃತ್ತಿಗೆ ಸಂಬಂಧಿಸಿದ ಉದ್ಯಮಶೀಲತಾ ಕೌಶಲ್ಯಾಭಿಭಿವೃದ್ಧಿ ತರಬೇತಿಯಲ್ಲಿ ಭಾಗವಹಿಸಬೇಕು. ಹೆಚ್ಚಿನ ತರಬೇತಿಗಳನ್ನು ಉಚಿತವಾಗಿ ಸರಕಾರ ವಿವಿಧ ಇಲಾಖೆಗಳ ಮೂಲಕ ಜಾರಿಗೆ ತಂದಿವೆ. ಆದರೂ ಈ ತರಬೇತಿಗಳಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ಪ್ರಯೋಜನ ಪಡೆಯಲು ಮುಂದೆ ಬರುತ್ತಿಲ್ಲ. ಇದು ದುಃಖಕರ ಸಂಗತಿ.

1. ಕನಸು ಕಂಡದ್ದನ್ನು ಸಾಕಾರಗೊಳಿಸಲು ಸಿದ್ಧರಾಗೋಣ

ನಮ್ಮಲ್ಲಿ ಹೆಚ್ಚಿನವರು ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಉದ್ಯೋಗ ಕೈಗೊಳ್ಳುವ ಕನಸು ಕಂಡಿರುತ್ತಾರೆ. ಇನ್ನು ಕೆಲವರು ತಮಗೆ ಆಸಕ್ತಿಯಿರುವ ಅಥವಾ ಚಾಲ್ತಿಯಲ್ಲಿರುವ ವ್ಯವಹಾರಗಳ ಕುರಿತು ಯೋಚಿಸಿರುತ್ತಾರೆ. ಆದರೆ ನಮ್ಮ ಚಿಂತನೆ, ಕನಸುಗಳನ್ನು ಕಾರ್ಯಗತಗೊಳಿಸಲು ಚಿಕ್ಕ ಪ್ರಯತ್ನ ಗಳನ್ನಾದರೂ ಮಾಡಬೇಕು. ಆ ಮೂಲಕ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗುವುದು.

2. ನಮ್ಮನ್ನು ನಾವು ಅರಿತುಕೊಳ್ಳುವುದು
ನಮ್ಮ ವೈಯಕ್ತಿಕ ಕನಸು ಈಡೇರಲು ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಗಳನ್ನು ಮೊದಲು ತಿಳಿದುಕೊಳ್ಳಬೇಕು. ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮಲ್ಲಿರುವ ಸಾಮರ್ಥ್ಯವನ್ನು ಗುರಿ ಮುಟ್ಟಲು ಹಾಗೂ ಕನಸಿನ ಯೋಜನೆಯನ್ನು ಸಾಕಾರಗೊಳಿಸಲು ಬಳಸಿಕೊಳ್ಳಬೇಕು.

3. ನಮ್ಮ ಸುತ್ತಲಿನ ಪರಿಸರದಲ್ಲಿ ಉದ್ಯಮಗಳಿಗೆ ಇರುವ ಅವಕಾಶವನ್ನು ಕಂಡುಕೊಳ್ಳುವುದು
ನಮ್ಮ ಪರಿಸರದಲ್ಲಿರುವ ಉದ್ಯಮ, ವ್ಯವಹಾರಗಳನ್ನು ಅವಲೋಕಿಸಬೇಕು. ನಮ್ಮ ಸುತ್ತಲಿನ ಪರಿಸರಕ್ಕೆ ಅವಶ್ಯಕವಾಗಿರುವ ಉದ್ಯಮವನ್ನು ಗುರುತಿಸಿ ಕೊಂಡು, ಅದಕ್ಕೆ ಅವಶ್ಯಕವಾದ ಮಾಹಿತಿಗಳನ್ನು ಕಲೆ ಹಾಕಬೇಕು. ಉದಾ ಹರಣೆಗೆ: ನಮ್ಮ ಪರಿಸರದಲ್ಲಿ ಟೈಲರಿಂಗ್ ಶಾಪ್ ಇಲ್ಲ, ಇಸ್ತ್ರಿ ಅಂಗಡಿ, ಹಾಲಿನ ಬೂತ್, ಸ್ಟೇಶನರಿ ಅಂಗಡಿ ಯಾವುದು ಅವಶ್ಯಕತೆ ಇದೆ ಎಂಬುದನ್ನು ಗುರುತಿಸ ಬೇಕು. ಆ ಯೋಜನೆಯನ್ನು ಪ್ರಾರಂಭಿಸಲು ಬೇಕಾದ ಭೂಮಿ, ಕಟ್ಟಡ, ಯಂತ್ರೋಪಕರಣಗಳು, ಪೀಠೋಪಕರಣಗಳು, ವಿದ್ಯುಚ್ಛಕ್ತಿ, ನೀರು, ರಸ್ತೆ ಮಾರುಕಟ್ಟೆಯಲ್ಲಿ ಸಿಗಬಹುದಾದ ಕಚ್ಚಾಸಾಮಗ್ರಿಗಳು ಇತ್ಯಾದಿ ಎಲ್ಲವನ್ನು ಪರಿಶೀಲಿಸುವುದು ಅತ್ಯಂತ ಅವಶ್ಯಕವಾಗಿದೆ.

4. ಸ್ಫೂರ್ತಿ/ ಪ್ರೇರಣೆ
ಉದ್ಯಮದಲ್ಲಿ ಯಶಸ್ಸು ಹೊಂದಲು ಯಾವುದೇ ಸುಲಭವಾದ ಮಾರ್ಗ ಇಲ್ಲ ಹಾಗೂ ಖಚಿತ ಸೂತ್ರಗಳಿಲ್ಲ. ಆದರೆ ಯಶಸ್ವಿ ಉದ್ಯಮಶೀಲರು ತಮ್ಮ ಕಠಿಣ ಪರಿಶ್ರಮ, ಅಪಾರ ಆಸಕ್ತಿಯೊಂದಿಗೆ ಗುರಿ ಮುಟ್ಟುವ ಹುಮ್ಮನಸ್ಸು ಮತ್ತು ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಉದ್ಯಮವನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಅಲ್ಲದೆ ಅವಕಾಶಗಳನ್ನು ತಮ್ಮೆಡೆಗೆ ಸೆಳೆಯುವಂತೆ ಮಾಡಿಕೊಳ್ಳುತ್ತಾರೆ. ಇಂತಹ ಯಶಸ್ಸಿಗೆ ಧೀರೂಭಾಯಿ ಅಂಬಾನಿಯವರು ಉತ್ತಮ ನಿದರ್ಶನ. ಧೀರೂಭಾಯಿ ಅಂಬಾನಿ ಅವರು ಚಿಕ್ಕವರಿದ್ದಾಗ ವಾರಾಂತ್ಯದಲ್ಲಿ ಗಿರ್ನಾರ್‌ನಲ್ಲಿ ಬರುವ ಯಾತ್ರಿಕರಿಗೆ ಪಕೋಡಾಗಳನ್ನು ಮಾರಾಟ ಮಾಡಿ ಉಪಜೀವನ ನಡೆಸುತ್ತಿದ್ದರು. ಅವರು ತಮ್ಮ 16ನೇ ವಯಸ್ಸಿನಲ್ಲಿ ಯೆಮನ್ ದೇಶದ ಆಡ್ಯಾನ್‌ಗೆ ತೆರಳಿದರು. ಅಲ್ಲಿ ಅವರು ಕೆಲವು ತಿಂಗಳಿಗೆ 300 ರೂ. ವೇತನಕ್ಕೆ ದುಡಿಯಲು ಆರಂಭಿಸಿದರು.

ಎರಡು ವರ್ಷಗಳ ನಂತರ ಶೆಲ್ ಮಾರಾಟದ ಉದ್ಯಮವನ್ನು ಆರಂಭಿಸಿದರು.ವಿದೇಶದಿಂದ ಮರಳಿ ಬಂದು ಮುಂಬೈನಲ್ಲಿ 'ರಿಲಯನ್ಸ್ ಕಮರ್ಶಿಯಲ್ ಕಾರ್ಪೊರೇಷನ್' ಹೆಸರಿನಲ್ಲಿ ಸಣ್ಣ ಪ್ರಮಾಣದ ಉದ್ಯಮವನ್ನು ಪ್ರಾರಂಭಿ ಸಿದರು. ಈ ಕಂಪೆನಿಯ ಕಚೇರಿಯ ಸ್ಥಳವಾಕಾಶ ಕೇವಲ 350 ಚದರ ಅಡಿ. ಧೀರೂಭಾಯಿ ಅಂಬಾನಿಯವರ ಕುಟುಂಬ ಒಂದು ಮಲಗುವ ಕೋಣೆಯಿರುವ ಸಣ್ಣ ಮನೆಯಲ್ಲಿ ವಾಸಿಸುತ್ತಿತ್ತು. 1960 ದಶಕದಲ್ಲಿ ಅಂಬಾನಿ ಅವರ ಕಂಪೆನಿಯ ಸಂಪತ್ತು ಒಂದು ಮಿಲಿಯನ್ ರೂ.ಗಳಷ್ಟು ಬೃಹದಾಕಾರವಾಗಿ ಬೆಳೆಯಿತು. ಅಂಬಾನಿ ಅವರು ವಿಶ್ವದ ಸುಪ್ರಸಿದ್ಧ ಯೇಲ್ ಅಥವಾ ಆಕ್ಸ್‌ಫರ್ಡ್‌ಗಳಂಥ ವಿಶ್ವವಿದ್ಯಾಲಯಗಳ ಪದವಿಗಳನ್ನೇ ಪಡೆಯದವರು. ಅವರು ದೇಶವೇ ಬೆರಗಾಗುವಂಥ ಸಾಧನೆಯನ್ನು ಮಾಡಿದರು. ಅತ್ಯಾಧುನಿಕ ಉದ್ಯಮವನ್ನು ಭಾರತದಲ್ಲಿಯೇ ಸ್ಥಾಪಿಸಿ, ವಿಶ್ವವೇ ಅಚ್ಚರಿ ಪಡುವಂತಹ ಯಶಸ್ವಿ ಉದ್ಯಮಶೀಲರಾಗಿ, ಇತರರಿಗೆ ಮಾದರಿಯಾದರು

Similar News