ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಿ.ದಯಾನಂದ ನೇಮಕ

ಡಾ.ಎಂ.ಎ.ಸಲೀಂ ಸಿಐಡಿ ಡಿಜಿಪಿಯಾಗಿ ವರ್ಗಾವಣೆ

Update: 2023-05-30 17:37 GMT

ಬೆಂಗಳೂರು: ರಾಜ್ಯ ಸರಕಾರ ಪೊಲೀಸ್ ಇಲಾಖೆಯ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಬೆಂಗಳೂರು ನೂತನ ಪೊಲೀಸ್ ಆಯುಕ್ತರನ್ನಾಗಿ ಬಿ.ದಯಾನಂದ್ ಅವರನ್ನು ನೇಮಿಸಿದೆ. ಜತೆಗೆ, ಎಂ.ಎ.ಸಲೀಂ ಅವರನ್ನು ಭಡ್ತಿ ನೀಡಿ ‘ಸಿಐಡಿ’ ಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಆಗಿ ಸಿ.ಎಚ್.ಪ್ರತಾಪ್ ರೆಡ್ಡಿ ಅವರನ್ನು ನೇಮಕಮಾಡಲಾಗಿದೆ. ಕೆ.ವಿ.ಶರತ್ ಚಂದ್ರ ಅವರನ್ನು ಗುಪ್ತಚರ ಎಡಿಜಿಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇದಕ್ಕೂಮುನ್ನ ಸಿ.ಎಚ್.ಪ್ರತಾಪ್ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಾಗಿಯೂ, ಎಂ.ಎ.ಸಲೀಂ ಬೆಂಗಳೂರು ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿಯೂ, ಬಿ.ದಯಾನಂದ್ ಅವರು ಗುಪ್ತಚರ ವಿಭಾಗದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದೇ ರೀತಿ, ಕೆ.ವಿ.ಶರತ್‍ಚಂದ್ರ ಸಿಐಡಿ ಎಡಿಜಿಪಿಯಾಗಿದ್ದರು. ಭದ್ರತಾ ವಿಭಾಗದ ಡಿಜಿಪಿ ಹುದ್ದೆಗೆ ಸಿಐಡಿ ಡಿಜಿಪಿ ಕೇಡರ್ ಹುದ್ದೆಯ ಸ್ಥಾನಮಾನ ಮತ್ತು ಜವಾಬ್ದಾರಿಯನ್ನು ವಹಿಸಲಾಗಿದೆ.

ಯಾರು ಬಿ.ದಯಾನಂದ?
ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾದ ಬಿ.ದಯಾನಂದ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರು. 1994ನೆ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾದ ಇವರು ಈ ಹಿಂದೆ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ, ಬೆಂಗಳೂರಿನಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಸಂಚಾರ ವಿಭಾಗದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿದ್ದರು.

Similar News