ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಯೋಜನೆಗಳು ಬರಬೇಕು: ಡಿ.ಕೆ. ಶಿವಕುಮಾರ್

Update: 2023-05-30 18:15 GMT

ಬೆಂಗಳೂರು: ಕೇಂದ್ರ ಸರಕಾರದಿಂದ ಹೆಚ್ಚಿನ ನೀರಾವರಿ ಯೋಜನೆಗಳು ಕರ್ನಾಟಕಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ಉಪಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಲ ವಿವಾದ ಪರಿಹಾರ, ಬಾಕಿ ಯೋಜನೆಗಳ ಪೂರ್ಣ, ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ, ಕೇಂದ್ರದಿಂದ ಅನುದಾನ ತರುವುದು, ಉದ್ಯೋಗ ಸೃಷ್ಟಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು ಎಂದು ಹೇಳಿದರು.

ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರೂ. ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು.ಆದರೆ, ಗುತ್ತಿಗೆ ಹಂಚಿಕೆ, ಹಣ ಪಾವತಿ ಕೆಲಸಕ್ಕೆ ಅಧಿಕಾರಿಗಳ ಶ್ರಮ ವಿನಿಯೋಗ ಆಗಬಾರದು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ ಇದ್ದು, ಮಾನವೀಯತೆ ಇರಲಿ ಎಂದರು.

ಇನ್ನೂ, ನೀರಾವರಿ ಇಲಾಖೆಯ ಭ್ರಷ್ಟಾಚಾರ ಕುರಿತು ಹಿಂದಿನ ಆಡಳಿತ ಪಕ್ಷದ ಶಾಸಕರು ಆಡಿರುವ ಮಾತುಗಳು ನನ್ನ ಕಿವಿಯಲ್ಲಿದೆ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ವಿಶ್ವನಾಥ ಆಡಿರುವ ಮಾತು ಸಹ ಒಂದೊಂದು ಕಿವಿಯಲ್ಲಿದೆ. ನಾನು ಕಿವಿಯಲ್ಲಿ ಕೇಳಿದರೂ, ಕಣ್ಣಲ್ಲಿ ನೋಡಬೇಕು. ಆ ಮುತ್ತು ರತ್ನಗಳ ಬಗ್ಗೆ ಗೊತ್ತಿದೆ. ನಾನು ತನಿಖೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ನಂತರ ಮಾತನಾಡುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಆರ್ಥಿಕ ಪರಿಸ್ಥಿತಿಯ ಅರಿವಿದೆ. ಗರಿಷ್ಠ ಕೇಂದ್ರ ಸಹಾಯ ಅನುದಾನದ ಯೋಜನೆಗೆ ಆದ್ಯತೆ ನೀಡಬೇಕು. ರಾಜ್ಯದ ಸಂಸದರ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಎಲ್ಲ ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಲು ಯತ್ನಿಸುವಂತೆ ಸೂಚನೆ ನೀಡಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಯೋಜನೆಯಾಗಿ ಘೋಷಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಭೂ ಸ್ವಾಧೀನಕ್ಕೆ ಆದ್ಯತೆ ಹಾಗೂ ಸಮಸ್ಯೆಗೆ ಪರಿಹಾರ ನೀಡಬೇಕು. ಗುಣಮಟ್ಟ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಏಜೆನ್ಸಿ ಮೂಲಕ ಗುಣಮಟ್ಟ ಪರಿಶೀಲನೆ ಮಾಡುತ್ತೇವೆ ಎಂದ ಅವರು, ಮಂಜೂರಾತಿ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಲಿದ್ದೇವೆ. ಮೇಕೆ ದಾಟು ಯೋಜನೆ, ಮಹದಾಯಿ ಯೋಜನೆ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಡಚಣೆಗೆ ಪರಿಹಾರ ಏನಿದೆ ಎಂಬ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ಸಚಿವರು ಹೇಳಿದರು.

Similar News