ನಿಮ್ಮಿಂದ ರಾಜ್ಯದ ಸರ್ವ ಜನಾಂಗದ ಶಾಂತಿಯ ತೋಟ ಸದಾ ನಳನಳಿಸುತ್ತಾ ಇರಲಿ: ಸಿದ್ದರಾಮಯ್ಯ

ಶಾಲಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಿಂದ ವಿದ್ಯಾರ್ಥಿಗಳಿಗೆ ಪತ್ರ

Update: 2023-05-31 06:36 GMT

ನನ್ನ ಪ್ರೀತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ,

ರಜಾದಿನಗಳನ್ನು ತಂದೆ-ತಾಯಿ, ಗೆಳೆಯ-ಗೆಳತಿಯರ ಜೊತೆ ಆನಂದದಿಂದ ಕಳೆದ ನಿಮ್ಮನ್ನು ಶಾಲೆಗಳು ಕೈಬೀಸಿ ಕರೆಯುತ್ತಿವೆ. ಕಳೆದ ಎರಡು –ಮೂರು  ವರ್ಷಗಳಲ್ಲಿ ಕೊರೋನ ರೋಗದಿಂದಾಗಿ ನೀವೆಲ್ಲ ವಿದ್ಯಾರ್ಥಿ ಜೀವನವನ್ನು ಸಂಪೂರ್ಣ ಅನುಭವಿಸಲಾಗದೆ ಅನೇಕ ಬಗೆಯ ಸಂಕಟ-ಸಂಕಷ್ಟಕ್ಕೆ ಈಡಾಗಿದ್ದೀರಿ ಎನ್ನುವುದು ಗೊತ್ತು. ಈಗ ನಾವು ಆ ರೋಗವನ್ನು ಗೆದ್ದಿದ್ದೇವೆ, ಆರೋಗ್ಯದ ಪಾಠವನ್ನು ಪ್ರಕೃತಿಯಿಂದ ಒಂದಷ್ಟು ಕಲಿತಿದ್ದೇವೆ.  ರಾಜ್ಯದ ಈ ಬಾರಿಯ ಶೈಕ್ಷಣಿಕ ವರ್ಷ ಇಂತಹ ಬದಲಾವಣೆಯ ತಂಗಾಳಿಯೊಂದಿಗೆ ಪ್ರಾರಂಭವಾಗಿದೆ, ಜ್ಞಾನ ದೇಗುಲಕ್ಕೆ ನಿಮಗೆಲ್ಲರಿಗೂ ಸ್ವಾಗತ ಮತ್ತು ಶುಭಾಶಯಗಳು. ಕೈಮುಗಿದು ಒಳಗೆ ಬನ್ನಿ.

ಶಾಲೆಗಳೆಂದರೆ ಬರೀ ಕಲ್ಲು ಕಟ್ಟಡಗಳಲ್ಲ ಅದೊಂದು ಜ್ಞಾನ ದೇಗುಲ. ಹೆತ್ತ ತಂದೆ-ತಾಯಿಗಳಂತೆ ಕಲಿಸುವ ಗುರುಗುಳು ಕೂಡಾ ವಿದ್ಯಾರ್ಥಿಗಳ ಪಾಲಿನ ದೇವರು. ಈ ಶ್ರದ್ಧೆ ಮತ್ತು ಗೌರವ ಸದಾ ನಿಮ್ಮಲ್ಲಿರಲಿ. “ಪ್ರತಿಯೊಬ್ಬರು ಹುಟ್ಟಿದಾಗ ವಿಶ್ವಮಾನವ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ” ಎಂದು ರಾಷ್ಟ್ರಕವಿ ಕುವೆಂಪು ಎಚ್ಚರಿಸಿದ್ದರು. ಪರೀಕ್ಷೆ-ಫಲಿತಾಂಶ ಎಲ್ಲವೂ ಮುಖ್ಯವಾದರೂ ಶಿಕ್ಷಣ ಎಂದರೆ ಅಷ್ಟೇ ಅಲ್ಲ. ಶಿಕ್ಷಣ ಎನ್ನವುದು ನಮ್ಮಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಅರಿವು ಮೂಡಿಸಬೇಕು, ಸತ್ಯ ಹೇಳುವ ಧೈರ್ಯವನ್ನು, ನ್ಯಾಯದ ಮಾರ್ಗದಲ್ಲಿ ಮುನ್ನಡೆಯುವ ಶಕ್ತಿಯನ್ನು ನೀಡಬೇಕು. ಅಂತಹ ಶಿಕ್ಷಣ ನಿಮ್ಮ ಪಾಲಿಗೆ ಒದಗಿಬಂದು ನೀವೆಲ್ಲರೂ ಮಹಾಮಾನವರಾಗಿ ಎಂದು ಹಾರೈಸುತ್ತೇನೆ.

ನಾನು ಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದ ವ್ಯಕ್ತಿ. ಈಗ ನಿಮಗೆ ಇರುವ ಕಲಿಕೆಯ ಅವಕಾಶ ನನ್ನಂತಹವನಿಗೆ ಇರಲಿಲ್ಲ, ಒಂದನೇ ತರಗತಿಯಿಂದಲೇ ಶಾಲೆಗೆ ಹೋಗಲಾಗದೆ ಮರಳ ಮೇಲೆ ಕೈಬೆರಳಗಳನ್ನೊತ್ತಿ ಅಕ್ಷರಾಭ್ಯಾಸ ಮಾಡಿ ನಾಲ್ಕನೇ ತರಗತಿಗೆ ನೇರವಾಗಿ ಸೇರಿದವನು ನಾನು. ಅಲ್ಲಿಂದ ಕಾನೂನು ವ್ಯಾಸಂಗ ಮುಗಿಸುವ ವರೆಗೆ ನನ್ನ ವಿದ್ಯಾರ್ಥಿ ಜೀವನ ಹೂವಿನ ಹಾದಿಯಾಗಿರಲಿಲ್ಲ. ಅಮಾಯಕರಾಗಿದ್ದ ಹೆತ್ತವರ ವಿರೋಧ, ಶೋಷಕರ ಅಡ್ಡಗಾಲು, ಹಣಕಾಸಿನ ಸಮಸ್ಯೆಗಳ ಜೊತೆ ಹೋರಾಡುತ್ತಲೇ ನಾನು ಬಂದವನು. ಕಠಿಣ ಶ್ರಮ ಮತ್ತು ಕಲಿಕೆಯ ಮೇಲೆ ಆಸಕ್ತಿ-ಶ್ರದ್ದೆಗಳಿದ್ದರೆ ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ಬಾಲಕ ಕೂಡಾ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯೂ ಆಗಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ. ಇದೇರೀತಿ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಿಗೇರಬೇಕೆಂದು ನನ್ನ ಕನಸು.

ಇದೇ ಉದ್ದೇಶದಿಂದ ಕಳೆದ ಬಾರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನದ ಬಿಸಿ ಊಟ, ಕ್ಷೀರಭಾಗ್ಯ, ವಿದ್ಯಾಸಿರಿ, ವಿದ್ಯಾರ್ಥಿ ವೇತನ ಶೂ ಮತ್ತು ಸಾಕ್ಸ್ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದ್ದೆ. ವಿದ್ಯಾರ್ಥಿಯಾಗಿ ನಾನು  ಅನುಭವಿಸಿದ ಕಷ್ಟ-ಕೋಟಳೆಗಳು, ಹಣಕಾಸಿನ ಮುಗ್ಗಟ್ಟುಗಳು ನನ್ನ ರಾಜ್ಯದ ಮಕ್ಕಳಿಗೆ ಬರಬಾರದೆನ್ನುವ ಆಶಯದಿಂದ ನನ್ನ ಅನುಭವದ ಆಧಾರದಲ್ಲಿ ಈ ಯೋಜನೆಗಳನ್ನು ರೂಪಿಸಿದ್ದೆ. ಇವುಗಳಿಗೆ ಎದುರಾಗಿರುವ ಸಣ್ಣಪುಟ್ಟ ಅಡ್ಡಿ-ಆತಂಕಗಳನ್ನು ನಿವಾರಿಸಿ ಪುನರ್ ಚಾಲನೆ ನೀಡಲಾಗುವುದು.

ನೀವು ಪಡೆಯುವ ಶಿಕ್ಷಣ ನಿಮ್ಮನ್ನು ತಂದೆ-ತಾಯಿ ಹೆಮ್ಮೆ ಪಡುವಂತಹ ಮಕ್ಕಳನ್ನಾಗಿ ಮತ್ತು ಸಮಾಜ ಪ್ರೀತಿಸುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲಿ. ಮುಂದಿನ ಜನಾಂಗವಾಗಿರುವ ನಿಮ್ಮಿಂದ ರಾಜ್ಯದ ಸರ್ವಜನಾಂಗದ ಶಾಂತಿಯ ತೋಟ ಸದಾ ನಳನಳಿಸುತ್ತಾ ಇರಲಿ.

ನಿಮಗೆಲ್ಲರಿಗೂ ಹೊಸ ಶೈಕ್ಷಣಿಕ ವರ್ಷಕ್ಕೆ ಮತ್ತೊಮ್ಮೆ ಸ್ವಾಗತ ಮತ್ತು ಶುಭಾಶಯಗಳು

ನಿಮ್ಮೆಲ್ಲರ ಪ್ರೀತಿಯ ಮುಖ್ಯಮಂತ್ರಿ

ಸಿದ್ದರಾಮಯ್ಯ

Similar News