ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ದುರಂತದ ಮರು ತನಿಖೆ: ಸಚಿವ ದಿನೇಶ್ ಗುಂಡೂರಾವ್

"ಕೋವಿಡ್ ಕಾಲದ ಭ್ರಷ್ಟಾಚಾರ ಆರೋಪದ ಬಗ್ಗೆಯೂ ತನಿಖೆ"

Update: 2023-05-31 05:35 GMT

ಬೆಂಗಳೂರು, ಮೇ 31: ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಹಾಗೂ ಕೋವಿಡ್ ವೇಳೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಮರುಜೀವ ಬಂದಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನೂತನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಾಮರಾಜ ನಗರದ ಆಕ್ಸಿಜನ್ ದುರಂತದ ಬಗ್ಗೆ ಪೂರ್ಣ ತನಿಖೆ ನಡೆದಿಲ್ಲ. ಹಾಗಾಗಿ, ಮರು ತನಿಖೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

 ಈ ಆಕ್ಸಿಜನ್ ದುರಂತಕ್ಕೆ ಯಾರು ಕಾರಣ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಹಾಗಾಗಿ ಯಾರಿಂದ ಲೋಪದೋಷ ಆಗಿದೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯದಿಂದ ಪ್ರಕರಣದ ಕುರಿತು ತೀರ್ಪು ಬಂದಿದೆ. ಆದರೆ, ಇಲಾಖೆಯಿಂದ ಸರಿಯಾದ ತನಿಖೆ ನಡೆದಿಲ್ಲ. ಹೀಗಾಗಿ, ಮರುತನಿಖೆ ನಡೆಸಲು ಸೂಚಿಸಿರುವುದಾಗಿ ಹೇಳಿದರು.

ಆರೋಗ್ಯ ಇಲಾಖೆಯಲ್ಲಿನ ಅಕ್ರಮ ಆರೋಪದ ಬಗ್ಗೆ ತನಿಖೆ: ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಕೇಳಿಬಂದಿರುವ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸಲು ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಉಪಕರಣಗಳ ಖರೀದಿ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಲು ಚಿಂತನೆ ನಡೆಸಲಾಗುವುದು. ಮೊದಲು ಮಾಹಿತಿ ಸಂಗ್ರಹ ಮಾಡುತ್ತೇನೆ. ಅಕ್ರಮ ನಡೆದಿರುವುದು ಮನದಟ್ಟಾದರೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಆಕ್ಸಿಜನ್ ದುರಂತವೇನು?: ಕೋವಿಡ್ 2ನೇ ಅಲೆ ತೀವ್ರವಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ 36 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದರು. ಆಕ್ಸಿಜನ್​ ದುರಂತಕ್ಕೆ ಅಂದಿನ ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತು. ಆದರೆ, ಸರ್ಕಾರ ದುರಂತಕ್ಕೆ ಯಾರನ್ನೂ ಹೊಣೆ ಮಾಡಿರಲಿಲ್ಲ. ಘಟನೆ ನಡೆದು ವರ್ಷವೇ ಕಳೆದರೂ ನ್ಯಾಯಾಂಗ ತನಿಖಾ ವರದಿ ಇನ್ನೂ ಬಹಿರಂಗಪಡಿಸಿಲ್ಲ.

Similar News