ಧ್ರುವೀಕರಣದ ದಿನಗಳಲ್ಲಿ ಪ್ರೀತಿ

Update: 2023-06-01 05:27 GMT

ಭಾರತದಲ್ಲಿ ಅಂತರ್ ಧರ್ಮೀಯ ಮದುವೆಗಳ ಕುರಿತಾಗಿ ಸಾಮಾಜಿಕ ಅಸಹಿಷ್ಣುತೆಯಿದೆ ನಿಜ ಆದರೆ ಟ್ರೋಲ್ ಸೇನೆ ಬಿಂಬಿಸುವ ಮಟ್ಟಕ್ಕೆ ಈ ಅಸಹಿಷ್ಣುತೆಯಿಲ್ಲ. ಹಾಗಾದರೆ ಈ ಅಸಹಿಷ್ಣುತೆ, ಅಪರಿಮಿತ ದ್ವೇಷ ಹುಟ್ಟುವುದಾದರೂ ಎಲ್ಲಿ? ಹಳೆಯ ಎಲೀಟ್ಗಳನ್ನು ಸ್ಥಳಾಂತರಿಸಿ ಹಣ, ಅಧಿಕಾರ ಅನುಭವಿಸಬೇಕೆಂಬ ಹೆಬ್ಬಯಕೆಯಲ್ಲಿರುವ ಭಾರತದ ಹೊಸ ಪವರ್ ಎಲೀಟ್ಗಳೇ ಈ ದ್ವೇಷ ಬಿತ್ತುತ್ತಿರುವವರು. ಇವರು ದ್ವೇಷ ಸಾಮೂಹಿಕವಾದುದೆಂದು ವಾದಿಸುತ್ತಾರಷ್ಟೆ.

‘ಕೇರಳ ಸ್ಟೋರಿ’ಯಂತಹ ಚಲನಚಿತ್ರ ನೋಡಿ ನಾಡಿನ ಕೆಲ ಜನ ಉದ್ವೇಗಕ್ಕೆ ಒಳಗಾಗಿದ್ದಾರೆ. ಪ್ರಖ್ಯಾತ ಇಸ್ರೇಲಿ ನಿರ್ದೇಶಕ ನಡಾವ್ ಲಾಪಿಡ್ ‘ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಸುಳ್ಳು ಪ್ರಚಾರಕ್ಕೆಂದು ಮಾಡಿದ ಅಶ್ಲೀಲ ಚಿತ್ರವೆಂದು ತೆಗಳಿದ್ದರೂ, ಚಿತ್ರ ಸಾವಿರಾರು ಕೋಟಿ ರೂ. ಲಾಭವನ್ನಂತೂ ಮಾಡಿದೆ. ಇಂತಹ ಪ್ರೊಪಗಾಂಡ ಚಿತ್ರಗಳ ನಡುವೆ ನಲವತ್ತೈದು ಸೆಕೆಂಡುಗಳ ಜಾಹೀರಾತೊಂದು ನಮ್ಮ ಟಿವಿ ಪರದೆಗಳ ಮೇಲೆ ಕಾಣಿಸಿಕೊಂಡು ಮಾಯವಾಗಿದೆ. ಪತ್ರಕರ್ತರನ್ನು, ಶಿಕ್ಷಣ ತಜ್ಞರನ್ನು ಸಮ್ಮನಾಗಿಸಿದ ನಂತರ, ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಮೇಲೆ ವಿಷ ಕಾರಿದ ನಂತರ, ಸಾಮಾಜಿಕವಾಗಿ ಬದ್ಧ, ಪಾರದರ್ಶಕ ನ್ಯೂಸ್ ಚಾನೆಲ್ಗಳ ಮೇಲೆ ಆಕ್ರಮಣ ನಡೆಸಿದ ನಂತರ, ಬಾಲಿವುಡ್ ಚಿತ್ರಗಳನ್ನು ಗುರಿಯಾಗಿಸಿದ ನಂತರ, ಟ್ರೋಲ್ ಸೇನೆಯ ಕಣ್ಣು ಬಿದ್ದದ್ದು ಈ ಪುಟ್ಟ ಜಾಹೀರಾತಿನ ಮೇಲೆ.

ಟ್ರೋಲ್ ಸೇನೆ ರೊಚ್ಚಿಗೆದ್ದು ಆ ನಲವತ್ತೈದು ಸೆಕೆಂಡುಗಳ ಜಾಹೀರಾತನ್ನು ಬ್ಯಾನ್ ಮಾಡಿಸುವವರೆಗೆ ಪಟ್ಟು ಹಿಡಿದದ್ದು ಏತಕ್ಕೆ? ಆ ಜಾಹೀರಾತಿನಲ್ಲಿ ಅಂತಹ ಅಪಮಾನಕಾರಿಯಾದುದು, ಆಕ್ಷೇಪಾರ್ಹವಾದುದೇನಿತ್ತು? ಆ ಜಾಹೀರಾತು ಯಾವುದು?

ಖ್ಯಾತ ಆಭರಣ ಸಂಸ್ಥೆಯೊಂದರ ಜಾಹೀರಾತಿನಲ್ಲಿ ಈ ಸಣ್ಣ ಕತೆಯಿತ್ತು. ಮುಸ್ಲಿಮ್ ಮನೆಯೊಂದರಲ್ಲಿ ಸಡಗರ, ಹಬ್ಬದ ವಾತಾವರಣ. ಸಂಭ್ರಮ, ಹರುಷಕ್ಕೆ ಮಿತಿಯಿಲ್ಲದ ಮುಸ್ಲಿಮ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಿಂದೂ ಸೊಸೆಗೆ ಸೀಮಂತ ನಡೆಯುತ್ತಿದೆ! ನವ ವಿವಾಹಿತ ಹೆಣ್ಣುಮಗಳ ಬದುಕಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸುವ ಮದುವೆಯ ಆ ಆರಂಭಿಕ ದಿನಗಳಲ್ಲಿ, ಅತ್ತೆ ಮತ್ತು ಗಂಡ ಆತ್ಮೀಯತೆ ಹಾಗೂ ಸೈರಣೆಯಿಂದ ನಡೆದುಕೊಂಡ ಉದಾಹರಣೆಗಳೇ ಇಲ್ಲದ ದೇಶದಲ್ಲಿ ಮುಸ್ಲಿಮ್ ಮನೆತನವೊಂದು ಹಿಂದೂ ವಧುವನ್ನು ಸ್ವೀಕರಿಸಿ, ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸುವುದನ್ನು ಈ ಜಾಹೀರಾತಿನಲ್ಲಿ ತೋರಿಸಲಾಗಿದೆ. 

‘‘ಅತ್ತೆ ನಿಮ್ಮ ಮನೆಗಳಲ್ಲಿ ಸೀಮಂತ ಮಾಡುವ ಸಂಪ್ರದಾಯವಿಲ್ಲ ಆಲ್ವಾ?’’ ಎಂಬ ಸೊಸೆಯ ಪ್ರಶ್ನೆಗೆ ‘‘ಮಗಳನ್ನು ಖುಷಿಯಾಗಿಡುವ ಸಂಪ್ರದಾಯ ಎಲ್ಲಾ ಮನೆಗಳಲ್ಲಿದೆ’’ ಎನ್ನುವ ಅತ್ತೆ ಸೊಸೆಗೆ ನೆಕ್ಲೆಸ್ ಒಂದನ್ನು ತೊಡಿಸುತ್ತಾಳೆ. ಪ್ರೀತಿಗೆ ಧರ್ಮ ಸಂಪ್ರದಾಯಗಳ ಸರಹದ್ದುಗಳಿಲ್ಲವೆಂದು ಸೂಚಿಸುತ್ತಾ, ಧಾರ್ಮಿಕ ಭಿನ್ನತೆಗಳ ನಡುವೆಯೂ ನಾವು ಐಕ್ಯತೆಯಿಂದ ಕೆಲಸ ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬ ಮಾತುಗಳೊಂದಿದೆ ಜಾಹೀರಾತು ಕೊನೆಯಾಗುತ್ತದೆ.

ಕೋಮು ಪ್ರವೃತ್ತಿಯೇ ಹುಟ್ಟುಗುಣವಾದ ಟ್ರೋಲ್ ಸೇನೆ ಈ ಸೆಕ್ಯುಲರ್ ಜಾಹೀರಾತಿನ ಮೇಲೆ ಮುಗಿಬಿತ್ತು. ಮತ್ತದೇ ‘ಲವ್ ಜಿಹಾದ್’ ಆರೋಪ. ಹಿಂದೂ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಮದುವೆಯಾಗಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರವಿದು ಎಂಬ ಆಪಾದನೆ. ಇಂತಹ ಮದುವೆಗಳು ಕುಟುಂಬಕ್ಕೆ ಸೀಮಿತವಾದ ವಿಚಾರವಲ್ಲ, ಇದು ಇಡೀ ಸಮುದಾಯದ, ಧರ್ಮದ, ಅಳಿವು-ಉಳಿವಿನ ಪ್ರಶ್ನೆ ಎಂಬ ವಾದ. ಜಾಹೀರಾತು ನೈತಿಕ ಗಡಿಯನ್ನು ಮೀರಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ, ತಕ್ಷಣ ಬ್ಯಾನ್ ಮಾಡಿ ಎಂಬ ತೀವ್ರ ತಾಕೀತು. ರಾಜಕೀಯ ಲಾಭಕ್ಕಾಗಿ ದಶಕಗಳಿಂದ ಪೋಷಿಸಿಕೊಂಡು ಬಂದ ಕೋಮು ದಳ್ಳುರಿಯಿದು. ಇತ್ತೀಚಿನ ದಿನಗಳಲ್ಲಿ ವ್ಯಾಪಿಸುತ್ತಿರುವ ಅಸಹಿಷ್ಣುತೆಗೆ ರಾಜಕೀಯದ ಹೊರತಾಗಿ ಯಾವುದೇ ನೆಲೆಗಳಿಲ್ಲ. ಹೀಗೆ ಧಾರ್ಮಿಕ, ಜಾತಿ ಅಸಹಿಷ್ಣುತೆಗೆ, ನಿರಂತರ ಕಿರುಕುಳಕ್ಕೆ ಕಮರಿಹೋದ ಪ್ರೇಮಿಗಳ, ಯುವ ಜೋಡಿಗಳ ಲೆಕ್ಕವಿಡಲು ಮರೆತ ದೇಶ ನಮ್ಮದು.

ನಮ್ಮ ಸಮಾಜದಲ್ಲಿ ಧಾರ್ಮಿಕ ಉನ್ಮಾದದಾಚೆಗಿರುವ ಜನರ ಊಹೆಗಳು ಕೂಡ ಹಾಗೆಯೇ ಇವೆ. ವ್ಯಕ್ತಿಗಳ ನಡುವಿರುವ ವರ್ಗ, ಶಿಕ್ಷಣ, ನಡವಳಿಕೆ, ಮನೋಧರ್ಮ, ಗುಣ ಸಾಮ್ಯತೆಗಳಿಂದ ಹುಟ್ಟುವ ಸಹಜ ಆಕರ್ಷಣೆ, ಹೊಂದಾಣಿಕೆಯ ಮುಂದೆ ಹಿಂದೂ-ಮುಸ್ಲಿಮ್ ಧರ್ಮಭೇದದ ಗೆಲುವಾಗುತ್ತದೆ ಎಂಬ ಊಹೆ ನಮ್ಮ ಸಮಾಜದಲ್ಲಿ ದಟ್ಟವಾಗಿವೆ. ಹಿಂದೂ ಮಹಿಳೆಯೊಬ್ಬಳು ಮುಸ್ಲಿಮ್ ಯುವಕನನ್ನು ಮದುವೆಯಾದರೆ ಎದುರಿಸಬೇಕಾದ ಸಾಮಾಜಿಕ ಕ್ರೋಧ ಮೇಲಿನ ಊಹೆಯಿಂದಲೇ ಜನಿಸುತ್ತದೆ ಎಂದರೆ ತಪ್ಪಲ್ಲ.

ವಧುವಿನ ಮತಾಂತರಕ್ಕೆಂದೇ ಮದುವೆ ಏರ್ಪಾಡಾದರೆ ಅಂತಹ ಮದುವೆಗಳ ವಿರುದ್ಧ ಏಳುವ ಪ್ರತಿಭಟನೆಗೆ, ಆಕ್ಷೇಪಣೆಗೆ ಅರ್ಥವಿದೆ. ಆದರೆ ಅಂತರ್ಧರ್ಮೀಯ ವಿವಾಹಗಳೆಲ್ಲವೂ ಮತಾಂತರಕ್ಕೇ ಆಗುತ್ತವೆಂಬುದು ಸತ್ಯಕ್ಕೆ ದೂರವಾದುದು. ಈ ಜಾಹೀರಾತಿನಲ್ಲಿ ಕಾಣುವ ವಧು, ಮದುವೆಯ ನಂತರವೂ ತನ್ನ ಹಿಂದೂ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾಳೆ. ಮುಸ್ಲಿಮ್ ಮನೆಯೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಯುತ್ತಿದೆ! ತಕರಾರು ತೆಗೆದ ಟ್ರೋಲ್ ಸೇನೆ ಈ ಎರಡು ಅಂಶಗಳಿಂದಲೇ ತಣ್ಣಗಾಗಬೇಕಿತ್ತು. ಆದರೆ ಅಂತರ್ ಜಾತಿ/ಧರ್ಮೀಯ ವಿವಾಹಗಳನ್ನೇ ಸಂಪ್ರದಾಯ/ಸಮಾಜ ಬಾಹಿರವೆಂದು ನಂಬಿರುವ ಸಮಾಜದಲ್ಲಿ ಬದುಕುವ ನಮಗೆ ಇದು ಎಂದಿಗೂ ಒಪ್ಪಿತವಾಗದು. ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತ ಧರ್ಮದೊಳಗಿನ ಅಂತರ್ಜಾತಿ ವಿವಾಹವನ್ನೇ ಸಹಿಸದ ಸಮಾಜ ಅಂತರ್ ಧರ್ಮೀಯ ವಿವಾಹವನ್ನು ಒಪ್ಪೀತೆ?

ಎಲ್ಲಕ್ಕಿಂತ ಮಿಗಿಲಾಗಿ ಈ ಜಾಹೀರಾತು ಅಂತರ ಧರ್ಮೀಯ ಮದುವೆಯನ್ನು, ಸೌಹಾರ್ದವನ್ನು ವಿಜೃಂಭಿಸುವ ಜೊತೆಗೆ ಪ್ರೇಮ ವಿವಾಹಕ್ಕೂ ಮನ್ನಣೆ ನೀಡುವುದು ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳಲಾಗದ ವಿಷಯ. ಅಂತರ ಜಾತಿ/ಧರ್ಮೀಯ ವಿವಾಹಗಳು ಸಾಮಾನ್ಯವಾಗಿ ಪ್ರೇಮ ವಿವಾಹಗಳೇ ಆಗಿರುತ್ತವೆ. ಪ್ರೇಮ ವಿವಾಹವೆಂದರೆ ವ್ಯಕ್ತಿಗತ ನಿರ್ಧಾರ, ವಿಶಿಷ್ಟ ಅಸ್ಮಿತೆ, ಸ್ವತಂತ್ರ ಗಂಡು ಅದಕ್ಕಿಂತ ಹೆಚ್ಚಾಗಿ ಹೆಣ್ಣಿನ ಆಶಯ.

ಜಾಹೀರಾತಿನಲ್ಲಿ ಕಾಣುವ ಸಮಾನತಾ ಭಾವದಲ್ಲಿರುವ ಕುಟುಂಬ ವ್ಯಕ್ತಿಗತ ನಿರ್ಧಾರ, ಅಸ್ಮಿತೆ, ಹೆಣ್ಣಿನ ಒತ್ತಾಸೆಗಳನ್ನು ಒಪ್ಪಬಹುದೇ ಹೊರತು ಉಸಿರುಗಟ್ಟಿಸುವ ಸಂಪ್ರದಾಯವಾದದ ನೇಣಿನ ಕುಣಿಕೆಯಲ್ಲಿ ಬಿಗಿದುಕೊಂಡಿರುವ ಸಮಾಜವನ್ನು ಒಪ್ಪಲಾರದು. ಮತ್ತೊಂದೆಡೆ ಸಂಪ್ರದಾಯವಾದಿಗಳು ಜಾಹೀರಾತು ಎತ್ತಿಹಿಡಿಯುವ ಎಲ್ಲೆ ಮೀರಿದ ಒಲವು, ಆಯ್ಕೆ ಸ್ವಾತಂತ್ರ್ಯ, ಸಬಲಗೊಂಡ ಹೆಣ್ಣನ್ನು ಎಂದಿಗೂ ಆಲಂಗಿಸಲಾರರು. ಲವ್ ಜಿಹಾದ್ ಆರೋಪದ ನೆಪದಲ್ಲಿ ನಡೆಯುವ ದಾಳಿಗಳು, ವ್ಯಕ್ತಿಯ ಆಯ್ಕೆ ಸ್ವಾತಂತ್ರ್ಯವನ್ನು ಮೊಟುಕುಗೊಳಿಸುವ, ಪ್ರೇಮಿಗಳಲ್ಲಿ ಆತಂಕ ಮೂಡಿಸಿ ಧರ್ಮ/ಜಾತಿ ಕಾಯ್ದುಕೊಳ್ಳುವ, ಹೆಣ್ಣನ್ನು ಪುರುಷ ಪ್ರಾಧಾನ್ಯ ಸಂಪ್ರದಾಯವೆಂಬ ಗೂಟಕ್ಕೆ ಮತ್ತೆ ಕಟ್ಟಿಹಾಕುವ ಪ್ರಯತ್ನಗಳು ಮಾತ್ರ.

ಹಳ್ಳಿಗಳು ಪಟ್ಟಣವಾಗುತ್ತಿದಂತೆ, ನಗರಗಳು ಮಹಾನಗರಗಳಾಗಿ ಬೆಳೆದಂತೆ, ನಮ್ಮ ದೇಶದ ಹಳೆಯ ಸಂಪ್ರದಾಯಗಳು ಮಾಸಿ, ಸಂಪ್ರದಾಯವಾದಿಗಳು ಸಾಧಿಸಿದ್ದ ಸಮುದಾಯದ ಮೇಲಿನ ಹಿಡಿತ ವೇಗವಾಗಿ ಕ್ಷೀಣಿಸುತ್ತಿದೆ. ಇಂದಿನ ಭಾರತೀಯ ಸಾಮಾಜಿಕ ವಾಸ್ತವ ನಿರಂತರ ಬದಲಾಗುತ್ತಿದೆ. ನಾವು ಪ್ರತಿದಿನ ಬಳಸುವ ಮೆಟ್ರೋ, ಬಸ್ಸು, ಕೆಲಸ ಮಾಡುವ ಜಾಗಗಳು, ಹೋಟೆಲ್ಗಳು, ಶಿಕ್ಷಣ ಸಂಸ್ಥೆಗಳು, ಶಾಪಿಂಗ್ ಮಾಲ್ಗಳೆಲ್ಲಾ ಅಂತರ ಜಾತಿ, ಅಂತರ ಧರ್ಮೀಯರನ್ನು ಮುಖಾಮುಖಿಯಾಗಿಸುತ್ತವೆ. ಮುಖಾಮುಖಿ ಸಂವಾದದ ಜೊತೆಗೆ ವರ್ಚುಯಲ್ ಸಂವಹನ ಮಾಧ್ಯಮಗಳು ಹೆಚ್ಚಿನ ಮಾತುಕತೆಗೆ ಅನುಕೂಲ ಮಾಡಿಕೊಡುತ್ತವೆ. ಹಲವು ಬಾರಿ ಈ ಮಾತುಕತೆಗಳು, ಗಂಭೀರ ಚರ್ಚೆಗಳಾಗಿ, ವಿವಾದ ಮನಸ್ತಾಪಗಳಲ್ಲಿ ಕೊನೆಯಾದರೆ, ಕೆಲ ಬಾರಿ ಪ್ರೀತಿ ಚಿಗುರೊಡೆಯುತ್ತದೆ. ಹೀಗೆ ಹುಟ್ಟಿದ ಪ್ರೀತಿಗೆ ಧರ್ಮ, ಜಾತಿಗಳ ಹಂಗಿರುವುದಿಲ್ಲ, ಸಂಪ್ರದಾಯವಾದಿಗಳ ಭಯವಿರುವುದಿಲ್ಲ. ಜಗತ್ತಿನ ಯಾವ ಸಮಾಜಕ್ಕೂ ವ್ಯಕ್ತಿಗಳ ಭಾವನಾತ್ಮಕ ಬದುಕಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿಲ್ಲ. ಜಾಹೀರಾತು, ಚಲನಚಿತ್ರಗಳು ಕೂಡ ಹಿರಿಯರು ನಿಶ್ಚಯಿಸಿದ ಮದುವೆಗಳ ಬಗ್ಗೆ ಪ್ರತಿಪ್ರವಾಹ ಹುಟ್ಟಿಹಾಕಿವೆ.

ಇದರ ಜೊತೆಗೆ ಮಹಾನಗರಗಳಲ್ಲಿ ನೆಲೆಸಿರುವ ಹಿಂದಿನ ಪೀಳಿಗೆಯವರು ಕೂಡ ತಮ್ಮ ಮೊಂಡುತನವನ್ನ ಬಿಟ್ಟಿದ್ದಾರೆ. ಸಾಕಷ್ಟು ಕಡೆಯಲ್ಲಿ ಮೊದಲಿದ್ದ ಸಾಮಾಜಿಕ ಬಹಿಷ್ಕಾರ, ಅಸಮ್ಮತಿ, ಅಸಹನೆ ನಿಧಾನವಾಗಿ ಒಪ್ಪಿಗೆ, ಕ್ಷಮೆ, ಅನುಕೂಲತೆ, ಸಾಮರಸ್ಯವಾಗಿ ಬದಲಾಗಿದೆ. ಮೊಮ್ಮಕ್ಕಳ ಮುದ್ದು ನಗು ನೋಡಿದ ಮೇಲಂತೂ ಹಳಬರ ಹಠ, ಅಹಂಕಾರ ಕರಗಿ ಹೋಗುತ್ತದೆ. ಒಂದು ಹಂತ ದಾಟಿದ ನಂತರ ತಮ್ಮ ಅಭಿಪ್ರಾಯವನ್ನು ವಯಸ್ಸಿಗೆ ಬಂದ ಮಕ್ಕಳ ಮೇಲೆ ಹೇರಲಾಗುವುದಿಲ್ಲ, ಅವರು ಒಪ್ಪಿದ ಸಂಗಾತಿಯನ್ನು ನಿರಾಕರಿಸಲಾಗುವುದಿಲ್ಲ ಎಂದು ಅರಿತಿದ್ದಾರೆ. 

ಸಮಾಜದಲ್ಲಾಗುತ್ತಿರುವ ಮೇಲಿನ ಬದಲಾವಣೆಗಳನ್ನು ಅಲ್ಲಗಳೆಯುವುದು ಒಂದೆಡೆ ಮೂರ್ಖತನದ ಪ್ರತೀಕವಾದರೆ ಮತ್ತೊಂದೆಡೆ ಸಂಪ್ರದಾಯ, ಕಟ್ಟಳೆಗಳೇ ಪ್ರೀತಿಗಿಂತ ಮಿಗಿಲಾದವು ಎಂಬ ಮೂಲಭೂತವಾದಿಗಳ ಬೊಬ್ಬೆ ಬದಲಾಯಿಸಲಾಗದ ಹೃದಯಹೀನ ಮತಾಂಧರನ್ನು ಪ್ರತಿಫಲಿಸುತ್ತದೆ. ನಂಬಿದ ಟೊಳ್ಳು ಸಿದ್ಧಾಂತಗಳಿಗೆ ಜೋತು ಬೀಳುವ ಮತಾಂಧತೆ ಹವ್ಯಾಸಿ ಹಗೆ ಬಿತ್ತುವವರಲ್ಲಿ ಸರ್ವೇ ಸಾಮಾನ್ಯವಾದರೂ ಹಗೆತನ ಭಾರತದ ಬಹುಪಾಲು ಪ್ರಜೆಗಳ ಗುಣವಲ್ಲ.

ಭಾರತದಲ್ಲಿ ಅಂತರ್ ಧರ್ಮೀಯ ಮದುವೆಗಳ ಕುರಿತಾಗಿ ಸಾಮಾಜಿಕ ಅಸಹಿಷ್ಣುತೆಯಿದೆ ನಿಜ ಆದರೆ ಟ್ರೋಲ್ ಸೇನೆ ಬಿಂಬಿಸುವ ಮಟ್ಟಕ್ಕೆ ಈ ಅಸಹಿಷ್ಣುತೆಯಿಲ್ಲ. ಹಾಗಾದರೆ ಈ ಅಸಹಿಷ್ಣುತೆ, ಅಪರಿಮಿತ ದ್ವೇಷ ಹುಟ್ಟುವುದಾದರೂ ಎಲ್ಲಿ? ಹಳೆಯ ಎಲೀಟ್ಗಳನ್ನು ಸ್ಥಳಾಂತರಿಸಿ ಹಣ, ಅಧಿಕಾರ ಅನುಭವಿಸಬೇಕೆಂಬ ಹೆಬ್ಬಯಕೆಯಲ್ಲಿರುವ ಭಾರತದ ಹೊಸ ಪವರ್ ಎಲೀಟ್ಗಳೇ ಈ ದ್ವೇಷ ಬಿತ್ತುತ್ತಿರುವವರು. ಇವರು ದ್ವೇಷ ಸಾಮೂಹಿಕವಾದುದೆಂದು ವಾದಿಸುತ್ತಾರಷ್ಟೆ. ಜನ ಸಮೂಹ ನಮ್ಮೊಡನೆ ಇದೆಯೆಂದು ಪದೇ ಪದೇ ಹೇಳುತ್ತಾ ಜನರನ್ನು ಪ್ರಚೋದಿಸಿ ಸಾಮಾಜಿಕ ಹಾಗೂ ರಾಜಕೀಯ ಲಾಭ ತಮ್ಮದಾಗಿಸಿಕೊಳ್ಳುತ್ತಾರೆ. ಸಂಕುಚಿತ ಪಂಥೀಯ ನೋಟವನ್ನು ಜನಾಭಿಪ್ರಾಯವೆಂದು ಹೇಳಿಬಿಡುತ್ತಾರೆ. ದ್ವೇಷದ ಹಿಂದೆ ಕಾರ್ಪೊರೇಟ್ ಹಿತಾಸಕ್ತಿಗಳು ಕೂಡ ಕೆಲಸ ಮಾಡುತ್ತವೆ ಎಂಬುದನ್ನು ಬಿಡಿಸಿಹೇಳಬೇಕಿಲ್ಲ.

 ಧ್ರುವೀಕರಣದ ಕಾಲದಲ್ಲಿ ಇಂತಹ ಜಾಹೀರಾತಿನ ಪ್ರಸಾರಕ್ಕೆ ಮುಂದಾದ ಆಭರಣ ಕಂಪೆನಿಯ ಧೈರ್ಯ ಮೆಚ್ಚುವಂಥದ್ದು. ಜಾಹೀರಾತು ಸೌಹಾರ್ದ ಮತ್ತು ಪ್ರೀತಿಗೆ ಆದ್ಯತೆ ನೀಡಿತ್ತು. ಆದರೆ ಹಸಿದ ತೋಳಗಳಂತೆ ಬಯಲಿಗಿಳಿದ ಸೋಶಿಯಲ್ ಮೀಡಿಯಾಗಳು ಕೆಲವೇ ದಿನಗಳಲ್ಲಿ ಜಾಹೀರಾತನ್ನು ಬ್ಯಾನ್ ಮಾಡಿಸಿದ್ದವು. ಪ್ರಭುತ್ವದ ಮೌನ ನಿರೀಕ್ಷಿತ ಪ್ರತಿಕ್ರಿಯೇ ಆಗಿತ್ತು. 

ಇಲ್ಲಿ ಬರಿಯ ಸೌಹಾರ್ದಕ್ಕಷ್ಟೇ ಅಲ್ಲದೆ ಲಿಂಗ ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಬೇಕಿದೆ. ಸಹಜ ಸಾಮಾಜಿಕ ಬದಲಾವಣೆಗಳನ್ನು ಭಾರತೀಯರು ವಿರೋಧಿಸುತ್ತಾರೆ, ಎಲ್ಲಾ ಹಿಂದೂಗಳು ಮುಸ್ಲಿಮ್ ದ್ವೇಷಿಗಳು ಎಂಬ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಜನಸಾಮಾನ್ಯರು ಒಟ್ಟಿಗೆ, ಸಾಮರಸ್ಯದಿಂದ ಬದುಕುವ ಕನಸು ಕಾಣುತ್ತಾರೆ. ಆದರೆ ದ್ವೇಷ ಉಗುಳುವ ಟ್ರೋಲ್ ಸೇನೆ ಮತ್ತು ಆ ಸಂದೇಶವನ್ನು ಮೂಲೆ ಮೂಲೆಗೆ ಕಳುಹಿಸುವ ಮಂತಾಂಧರ ಹಿಂಡು ಭಾರತದ ಮುಖಛಾಯೆಯನ್ನು ಬದಲಿಸಿಯೇ ತೀರುವ ಪಣ ತೊಟ್ಟಿದೆ.

Similar News