ಗುಂಡು, ತುಂಡು, ಸಿಗರೇಟ್ ಕೈಯಲ್ಲಿದ್ದರೆ ಬುದ್ದಿ ಓಡುವ ಜನ ಮಾತ್ರ ಬುದ್ದಿಜೀವಿಗಳಾ?: ಸಿ.ಟಿ ರವಿ

Update: 2023-06-01 11:28 GMT

ಬೆಂಗಳೂರು: ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಆಗ್ರಹಿಸಿ ಇತ್ತೀಚೆಗೆ ಸಮಾನ ಮನಸ್ಕರ ಒಕ್ಕೂಟದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಗುಂಡು-ತುಂಡು, ಸಿಗರೆಟ್ ಕೈಯಲ್ಲಿ ಇದ್ದರೆ ಮಾತ್ರ ಬುದ್ದಿ ಓಡುವ ಜನ ಅವರು. ಅವರು ಮಾತ್ರ ಬುದ್ದಿಜೀವಿಗಳಾ?'' ಎಂದು ಪ್ರಶ್ನೆ ಮಾಡಿದರು.  

ಇನ್ನು ಮುಂದುವರಿದು ''ಈ ಬುದ್ದಿಜೀವಿಗಳು ಯಾರು? ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತದ ಬಗ್ಗೆ ದಾಸ್ಯದ ಚಿಂತನೆಯಲ್ಲೇ ಇದ್ದ ನಮ್ಮ ಸಂಸ್ಕೃತಿಗಳ ವಿರುದ್ಧ ಇದ್ದವರು. ದಾಸ್ಯದಲ್ಲೆ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು'' ಎಂದು ದೂರಿದರು.

''ಕುಟುಂಬ ಒಂದು ಸಂಸ್ಥೆ, ರಾಜ್ಯ ಇರಬಾರದು ಎನ್ನುವ ಚಿಂತನೆ ಕಾರ್ಲ್ ಮಾರ್ಕ್ಸ್ ದಾಗಿತ್ತು. ಅವರ ಚಿಂತನೆಯಲ್ಲಿರುವ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಎನ್ನುವ ಇವರು ಯಾರು? ಇವರು ದೇಶ ಲೂಟಿ ಮಾಡಿದ ದಾಳಿಕೋರರು. ನಮ್ಮ ಸಂಸ್ಕೃತಿ ನಾಶ ಮಾಡಿದವರು‌'' ಎಂದು ಆಕ್ರೋಶ ವ್ಯಕ್ತಪಡಿಸಿದರು. 

Similar News