ಮೃತದೇಹಗಳ ಮೇಲೆ ಅತ್ಯಾಚಾರ: ಶಿಕ್ಷೆ ವಿಧಿಸಲು ಕಾನೂನು ರೂಪಿಸಿ; ಕೇಂದ್ರಕ್ಕೆ ಹೈಕೋರ್ಟ್ ಶಿಫಾರಸು

Update: 2023-06-01 12:23 GMT

ಬೆಂಗಳೂರು, ಮೇ 31: ಮೃತದೇಹಗಳ ಮೇಲೆ ಲೈಂಗಿಕ ಕ್ರಿಯೆ ನಡೆಸುವ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕಾಗಿ ‘ಐಪಿಸಿ’ಯ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವುದು ಅಥವಾ ಹೊಸ ನಿಬಂಧನೆಗಳನ್ನು ಜಾರಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.    

ಕೊಲೆ ಮತ್ತು ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತುಮಕೂರು ಜಿಲ್ಲೆಯ ಗುಲ್ಲಿಗೇನಹಳ್ಳಿಯ ರಂಗರಾಜು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಶಿಫಾರಸು ಮಾಡಿದೆ. 

ಯುವತಿಯೊಬ್ಬರನ್ನು ಹತ್ಯೆ ಮಾಡಿ ಅತ್ಯಾಚಾರ ಎಸಗಿದ್ದ ಆರೋಪಿಗೆ ಕೊಲೆ(ಸೆಕ್ಷನ್ 302)ರ ಅಡಿ ಪ್ರಕರಣದಲ್ಲಿ ಮಾತ್ರ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಆದರೆ, ಮೃತದೇಹದ ಮೇಲೆ ಅತ್ಯಾಚಾರ(ಸೆಕ್ಷನ್ 376)ಎಸಗಿದ ಆರೋಪದಲ್ಲಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲದ ಪರಿಣಾಮ ಖುಲಾಸೆಗೊಳಿಸುವಂತಾಗಿದೆ. ಹೀಗಾಗಿ, ಮೃತದೇಹಗಳ ಮೇಲೆ ಅತ್ಯಾಚಾರ ಎಸಗುವವರಿಗೆ ಶಿಕ್ಷೆ ವಿಧಿಸುವುದಕ್ಕಾಗಿ ಐಪಿಸಿ ಸೆಕ್ಷನ್ಗಳಿಗೆ ಅಗತ್ಯ ತಿದ್ದುಪಡಿ ಅಥವಾ ಹೊಸ ನಿಬಂಧನೆಗಳನ್ನು ಸೇರ್ಪಡೆ ಮಾಡಬೇಕೆಂದು ನ್ಯಾಯಪೀಠ ಶಿಫಾರಸು ಮಾಡಿದೆ.

ಕೆನಡಾ, ಯುಕೆ, ನ್ಯೂಝಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳ ಉದಾಹರಣೆಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಆ ದೇಶಗಳಲ್ಲಿ ಮೃತದೇಹಗಳ ವಿರುದ್ಧದ ಅಪರಾಧವು ಶಿಕ್ಷಾರ್ಹವಾಗಿದೆ. ಅಂತಹ ನಿಬಂಧನೆಗಳನ್ನು ಭಾರತದಲ್ಲಿಯೂ ಪರಿಚಯಿಸಬೇಕು ಎಂದು ನ್ಯಾಯಪೀಠ ಶಿಫಾರಸು ಮಾಡಿದೆ. ಮುಂದಿನ ಆರು ತಿಂಗಳಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದೆ. 

ಪ್ರಕರಣವೇನು?: ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಗುಲ್ಲಿಗೇನಹಳ್ಳಿಯ ವಿದ್ಯಾರ್ಥಿನಿಯನ್ನು ಅದೇ ಗ್ರಾಮದ ಅರ್ಜಿದಾರ ಅಪರಾಧಿ ಕತ್ತು ಸೀಳಿ ಕೊಲೆ ಮಾಡಿದ್ದ. ಇದಾದ ಬಳಿಕ ಮೃತದೇಹವನ್ನು ಅತ್ಯಾಚಾರ ಮಾಡಿದ್ದ. ಈ ಸಂಬಂಧ ಸಂತ್ರಸ್ತೆಯ ಸಹೋದರ ನೀಡಿದ ದೂರು ಪರಿಗಣಿಸಿ ಘಟನೆ ನಡೆದ ಏಳು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು. 

ಅಲ್ಲದೆ, ವಿಚಾರಣಾ ನ್ಯಾಯಾಲಯ ಆರೋಪಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ, ಅತ್ಯಾಚಾರ ಆರೋಪದಲ್ಲಿ 10 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿದ್ದ ಅಪರಾಧಿ ಮೃತದೇಹವನ್ನು ವ್ಯಕ್ತಿಯನ್ನಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಮೃತದೇಹವನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದು ಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೊಲೆ ಆರೋಪದಲ್ಲಿ ವಿಧಿಸಿರುವ ಶಿಕ್ಷೆಯನ್ನು ಎತ್ತಿ ಹಿಡಿರುವ ಹೈಕೋರ್ಟ್, ಅತ್ಯಾಚಾರ ಆರೋಪದ ಶಿಕ್ಷೆಯನ್ನು ರದ್ದುಪಡಿಸಿ ಆದೇಶಿಸಿದೆ.

Similar News