ಬಿಜೆಪಿ 15 ಲಕ್ಷ ರೂ. ಕೊಡುವ ಗ್ಯಾರಂಟಿ ನೀಡಿರಲಿಲ್ಲ: ನಳಿನ್ ಕುಮಾರ್ ಕಟೀಲ್

Update: 2023-06-01 13:37 GMT

ಮಂಗಳೂರು: ವಿದೇಶದಲ್ಲಿರುವ ಕಪ್ಪು ಹಣ ಬಂದರೆ ಪ್ರತಿಯೊಬ್ಬರ ಅಕೌಂಟ್ಗೆ ತಲಾ 15 ಲಕ್ಷ ರೂ. ಹಾಕ್ತೇವೆ ಎಂದು ಹಿಂದೆ ಬಿಜೆಪಿ ಹೇಳಿತ್ತು. ಆದರೆ ಜನರಿಗೆ ಗ್ಯಾರಂಟಿ ಕಾರ್ಡ್ ಕೊಟ್ಟಿರಲಿಲ್ಲ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ಭರವಸೆ ನೀಡಿದ್ದರೂ, ಅವರು ಅದನ್ನು ಕೊಡಲಿಲ್ಲ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಾ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಸೌಲಭ್ಯಗಳನ್ನು ಯಾರಿಗೆಲ್ಲ ಕೊಡಲಾಗುವುದು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದರು.

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿಯನ್ನು ಕೂಡಲೇ ಷರತ್ತು ರಹಿತವಾಗಿ ಜಾರಿಗೊಳಿಸದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ಮಾರ್ಗಸೂಚಿಯ ಬಗ್ಗೆ ಮಾತನಾಡುತ್ತಿದೆ. ಆದರೆ ಚುನಾವಣಾ ಪೂರ್ವದಲ್ಲಿ ಯೋಜನೆಯ ಬಗ್ಗೆ ಯಾವುದೇ ಷರತ್ತು ಇರಲಿಲ್ಲ ಎಂದು ಹೇಳಿದರು.

ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಯ ಸವಲತ್ತು ‘ನನಗೂ ಇದೆ,ನಿಮಗೂ ಇದೆ’, ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಅಧಿಕಾರ ವಹಿಸಿಕೊಂಡು 24 ಗಂಟೆಗಳಲ್ಲಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು 20 ದಿನಗಳಾದರೂ ಯಾವುದೇ ಕ್ರಮಕೈಗೊಂಡಿಲ್ಲ. ಕಾಂಗ್ರೆಸ್ ಜನರಿಗೆ ವಂಚನೆ ಮಾಡಿದೆ. ಸುಳ್ಳು ಹೇಳಿ ಅಧಿಕಾರ ಪಡೆದಿದೆ. ಅಂದರೆ ಸುಳ್ಳುಗಾರರ ಪಕ್ಷವಾಗಿದೆ ಕಾಂಗ್ರೆಸ್. ಜನರನ್ನು ಗೊಂದಲದಲ್ಲಿ ಸಿಲುಕಿಸಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಅಡ್ಡದಾರಿ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳನ್ನು ಆರ್ಥಿಕವಾಗಿ ಜಾರಿಗೊಳಿಸುವುದು ಕಷ್ಟ ಎನ್ನುವುದು ಅವರಿಗೆ ಮನವರಿಕೆಯಾಗಿದೆ. ಆರ್ಥಿಕ ಇಲಾಖೆಯು ಈಗಾಗಲೇ ಸೂಚನೆ ನೀಡಿದೆ ಎಂದರು.

ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಮನೆಮನೆಗಳಲ್ಲಿ , ಬೀದಿಗಳಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಬಿಜೆಪಿ ಜನಪರ ಪಕ್ಷವಾಗಿದೆ. ಕಾಂಗ್ರೆಸ್ ಜನರಿಗೆ ಮೋಸ ಮಾಡಿದರೆ ಬಿಜೆಪಿ ಸುಮ್ಮನಿರುವುದಿಲ್ಲ. ಜನರ ಪರ ಹೋರಾಟ ಮುಂದುವರಿಸಲಿದೆ ಎಂದು ನಳಿನ್ ಕುಮಾರ್ ಹೇಳಿದರು.

38,661.96 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 9 ವರ್ಷಗಳಲ್ಲಿ 38,661.96 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನಗೊಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

3,289.25 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು, 465.68 ಕೋಟಿ ರೂ ವೆಚ್ಚದಲ್ಲಿ ಸಾಗರಮಾಲ ಯೋಜನೆಯಡಿ ಅಭಿವೃದ್ಧಿ, ನವಮಂಗಳೂರು ಬಂದರು ಅಭಿವೃದ್ಧಿಗೆ 1,081 ಕೋಟಿ ರೂ, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ 997.20 ಕೋಟಿ ರೂ., ಎನ್ಎಂಪಿಆರ್ಸಿಎಲ್ ಪೋರ್ಟ್ ರಸ್ತೆ ನಿರ್ವಹಣೆಗೆ 39.53 ಕೋಟಿ ರೂ, ಪಿಎಂ ಗ್ರಾಮ ಸಡಕ್ ರಸ್ತೆ ಹಾಗೂ ಏಳು ಸೇತುವೆಗೆ 246.77 ಕೋಟಿ ರೂ., ರೈಲ್ವೇ ಯೋಜನೆಗಳಿಗೆ 699.09 ಕೋಟಿ ರೂ, ಎಂಆರ್ಪಿಎಲ್ ಅಭಿವೃದ್ಧಿಗೆ 2,506 ಕೋಟಿ ರೂ, ಎಂಆರ್ಪಿಎಲ್ 4ನೇ ಹಂತದ ಅಭಿವೃದ್ಧಿಗೆ 15,000 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಮಂಗಳೂರು ಸಬ್ಡಿವಿಜನ್ 1,036.07 ಕೋಟಿ ರೂ, ಸಿಆರ್ಎಫ್ ನಿಧಿಯಿಂದ ರಸ್ತೆ ಅಭಿವೃದ್ಧಿಗೆ 132 ಕೋಟಿ ರೂ., ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 246.77 ಕೋಟಿ ರೂ. ವೆಚ್ಚದ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಭಾರೀ ಬದಲಾವಣೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ದೇಶದಲ್ಲಿ ಭಾರೀ ಬದಲಾವಣೆ ಆಗಿದೆ. ದೇಶದಲ್ಲಿ ಪರಿವರ್ತನೆಯುಗ ಆರಂಭವಾಗಿದೆ. ಜಗತ್ತು ಭಾರತದ ಕಡೆ ನೋಡುವಂತಾಗಿದೆ. ನಾಲ್ಕು ರೀತಿಯಲ್ಲಿ ಭಾರತ ಪರಿವರ್ತನೆ ಆಗಿದೆ. ಅಭಿವೃದ್ಧಿಶೀಲ, ಸಾಂಸ್ಕೃತಿಕ, ಸ್ವಾಭಿಮಾನಿ ಮತ್ತು ಸ್ವಾವಲಂಭಿ ಭಾರತವಾಗಿ ದೇಶ ಬದಲಾಗಿದೆ ಎಂದರು.

ಒಂದು ಕಾಲಘಟದಲ್ಲಿದ್ದ ಪರಿವಾರವಾದಿ, ಕುಟುಂಬವಾದ ಇವೆಲ್ಲವನ್ನು ಮೀರಿ ವಿಕಾಸವಾದಕ್ಕೆ ದೇಶದಲ್ಲಿ ಒತ್ತು ನೀಡಲಾಗಿದೆ. ಜಗತ್ತಿನ ಗುರುವಾಗಿ ಭಾರತ ಗಮನ ಸೆಳೆದಿದೆ. ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಮಾಜಿ ವಿಪ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಮುಖಂಡರುಗಳಾದ ರವಿಶಂಕರ ಮಿಜಾರು, ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

Similar News