ವಿವಿಗಳು ವೈಜ್ಞಾನಿಕ ಮನೋಭಾವ ಬೆಳೆಸಬೇಕು: ಸಿಎಂ ಸಿದ್ದರಾಮಯ್ಯ ಸಲಹೆ

Update: 2023-06-01 16:01 GMT

ಬೆಂಗಳೂರು, ಜೂ.1: ವಿಶ್ವ ವಿದ್ಯಾನಿಲಯಗಳು ಸಾಮಾಜಿಕ ಚಿಂತನೆ ಅಳವಡಿಸಿಕೊಳ್ಳದೆ ಸಮಾಜವನ್ನು ವಿಭಜಿಸುವ ರೀತಿಯಲ್ಲಿ ವರ್ತಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಕುಲಪತಿಗಳ ನಿಯೋಗದ ಜತೆ ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿ ನಿಜವಾದ ಉದ್ದೇಶಗಳಿಂದ ವಿಮುಖ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸುಮಾರು 45 ನಿಮಿಷಗಳ ಕಾಲ ಅವರು ಚರ್ಚಿಸಿದರು.

ಸಾಮಾಜಿಕ ಮೌಲ್ಯ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವವಿದ್ಯಾನಿಲಯಗಳು ತುಡಿಯಬೇಕು. ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿವಿಗಳಿಗೆ ಇದೆ. ಆದರೆ, ತಮ್ಮ ನಿಜವಾದ ಉದ್ದೇಶಗಳಿಂದ ವಿವಿಗಳು ವಿಮುಖವಾಗಿ ಪ್ರತಿಗಾಮಿ ಆದರೆ ವಿದ್ಯಾರ್ಥಿಗಳ ಮತ್ತು ದೇಶದ ಭವಿಷ್ಯವೂ ಕರಾಳ ಆಗುತ್ತದೆ. ನಮ್ಮ ಸರಕಾರ ಉನ್ನತ ಶಿಕ್ಷಣವನ್ನು ವೈಜ್ಞಾನಿಕ ತಳಹದಿಯಲ್ಲಿ ಬಲಪಡಿಸಲು ಬದ್ದವಾಗಿದೆ. ಇದಕ್ಕೆ ಹೊರತಾದದ್ದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ನಿಯೋಗದಲ್ಲಿ ಮಡಿಕೇರಿ ವಿವಿಯ ಪ್ರೊ.ಅಶೋಕ್ ಆಲೂರು, ಕೊಪ್ಪಳ ವಿವಿಯ ಡಾ.ಬಿ.ಕೆ.ರವಿ, ಬಾಗಲಕೋಟೆ ವಿವಿಯ ಪ್ರೊ.ದೇಶಪಾಂಡೆ, ಹಾವೇರಿ ವಿವಿಯ ಡಾ.ಜಂಗಮಶೆಟ್ಟಿ, ಬೀದರ್ ವಿವಿಯ ಪ್ರೊ.ಬಿರಾದಾರ್, ಹಾಸನ ವಿವಿಯ ಪ್ರೊ.ತಾರಾನಾಥ್, ಚಾಮರಾಜನಗರ ವಿವಿಯ ಕುಲಪತಿ ಪ್ರೊ.ಗಂಗಾಧರ್ ಇದ್ದರು.

Similar News