ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಕಾರ್ಮಿಕ ಸಂಘಟನೆ: ಹಕ್ಕೊತ್ತಾಯ ಮಂಡನೆ

Update: 2023-06-01 16:35 GMT

ಬೆಂಗಳೂರು, ಜೂ.1: ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿಯ(ಎಐಸಿಸಿಟಿಯು) ಪದಾಧಿಕಾರಿಗಳು ಗುರುವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕಾರ್ಮಿಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. 

ಡಿಸೆಂಬರ್ 2021ರಲ್ಲಿ ಕೆಲಸದಿಂದ ವಜಾಗೊಂಡ ಐಟಿಐ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಜಾರಿಗೊಳಿಸಬೇಕು. ಪೌರಕಾರ್ಮಿಕರನ್ನು ಖಾಯಂಗೊಳಿಸಲು, ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ವಾಹನ ಚಾಲಕರು ಮತ್ತು ಸಹಾಯಕರನ್ನು ನೇರ ಪಾವತಿ ಸಂಭಾವನೆ ಅಡಿ ತರಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು.

ನಗರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಬೇಕು. ಕನಿಷ್ಠ ವೇತನ ಪರೀಷ್ಕರಣೆಯನ್ನು 5 ವರ್ಷಕ್ಕೆ ಬದಲು 3 ವರ್ಷಕ್ಕೊಮ್ಮೆ ಪರೀಷ್ಕರಣೆ ಮಾಡಬೇಕು. ಗಾಮೆರ್ಂಟ್ಸ್ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಬೇಕು, ಬಳ್ಳಾರಿಯ ಗಣಿ ಕಾರ್ಮಿಕರನ್ನು ಪುನರ್ವಸತಿಗೊಳಿಸಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು.

ಹಿಂದಿನ ಬಿಜೆಪಿ ಸರಕಾರವು ದುರಾಡಳಿತ ನಡೆಸಿ ಎಲ್ಲೆಡೆ ಆಶಾಂತಿಯನ್ನುಂಟು ಮಾಡಿತ್ತು. ಜನರನ್ನು ತೀವ್ರತರವಾದ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿತ್ತು. ಅಲ್ಲದೆ ಕಾರ್ಮಿಕ ವರ್ಗದ ಹಕ್ಕುಗಳ ಮೇಲೆ ಆಕ್ರಮಣವನ್ನು ಮಾಡಿತ್ತು. ಆಗ ಎಐಸಿಸಿಟಿಯು ವತಿಯಿಂದ ಕಾರ್ಮಿಕರ ಪರ ನಡೆಸಿದ್ದ ಹಲವಾರು ಹೋರಾಟಗಳಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷದಲ್ಲಿದ್ದು, ಹೋರಾಟಗಳಿಗೆ ಬೆಂಬಲ ಸೂಚಿಸಿದ್ದರು. 

Similar News