ತುಂಬೆಯಲ್ಲಿ ನೀರಿನ ಮಟ್ಟ ಇಳಿಮುಖ; ಎಎಂಆರ್ ಡ್ಯಾಂ ನಿಂದ ನೀರು ಪೂರೈಕೆ

Update: 2023-06-01 17:09 GMT

ಮಂಗಳೂರು : ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಮುಖವಾದ್ದರಿಂದ, ಪಕ್ಕದಲ್ಲಿರುವ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ ಜೂ.1ರ ಸಂಜೆ ನೀರು ಹರಿಸಲು ನಿರ್ಧಾರಿಸಲಾಗಿದೆ ಎಂದು ಮಹಾ ನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ತುಂಬೆ ಡ್ಯಾಂನಲ್ಲಿ 2.26 ಮೀಟರ್ ನೀರು ಇದ್ದು, ಎಎಂಆರ್ ಡ್ಯಾಂನಲ್ಲಿ 18.33 ಮೀಟರ್ ನೀರು ಸಂಗ್ರಹವಾಗಿದೆ. ಕುಮಾರಧಾರ ಹಾಗೂ ನೇತ್ರಾವತಿ ನದಿ ನೀರಿನ ಮೂಲಕ ಒಳ ಅರಿವು ಪ್ರಾರಂಭವಾಗಿರು ವುದರಿಂದ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಿದೆ. ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ  ನಡೆಯುತ್ತಿದ್ದ, ನೀರಿನ ರೇಷನಿಂಗ್ ಯಥಾಸ್ಥಿತಿ ಮುಂದುವರಿಯಲಿದೆ.

ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ-ಬೆಂದೂರ್‌ವೆಲ್, ಪಣಂಬೂರು 1000 ಎಂ.ಎಂ ವ್ಯಾಸದ ಮುಖ್ಯ ಕೊಳವೆಯನ್ನು ಅಡ್ಯಾರು ಕಟ್ಟೆಯ ಬಳಿ ಬಲಪಡಿಸುವ ಕಾಮಗಾರಿ ಹಾಗೂ ಕೊಟ್ಟಾರ ಚೌಕಿ ಬಳಿ ಕೆಯುಐಡಿಎಫ್‌ಸಿ ವತಿಯಿಂದ 900 ಎಂ.ಎಂ ವ್ಯಾಸದ ಕೊಳವೆ ಮರುಜೋಡಣೆ ಕಾಮಗಾರಿಯನ್ನು ಜೂ.2ರಿಂದ ಜೂ.4ರವರೆಗೆ ನಡೆಸಲಿರುವುದರಿಂದ ಈ ಸಮಯದಲ್ಲಿ ನೀರು ಪೂರೈಕೆ ಸಂಪೂರ್ಣ ನಿಲುಗಡೆಗೊಳಿಸಲಾಗುವುದೆಂದು ಮೇ 30ರಂದು ಈಗಾಗಲೇ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಆದೇಶವನ್ನು ಹಿಂಪಡೆಯಲಾಗಿದೆ. ಅದುದರಿಂದ ಜೂ.2 ಮತ್ತು 3ರಂದು ಮನಪಾ ವ್ಯಾಪ್ತಿಯಲ್ಲಿ ಈ ಹಿಂದಿನಂತೆ ನೀರಿನ ಪೂರೈಕೆ ಇರುತ್ತದೆ ಹಾಗೂ ಕಾಮಗಾರಿಯನ್ನು ಜೂ.4ರಿಂದ ಜೂ.5ರವರೆಗೆ ನಡೆಸಲು ಉದ್ದೇಶಿಸಲಾಗಿದೆ.

ಜೂ.4ರ ಬೆಳಗ್ಗೆ 6ರಿಂದ ಜೂ.6ರ ಬೆಳಗ್ಗೆ 6ರವರೆಗೆ ಬೆಂದೂರ್‌ವೆಲ್ ಲೋ ಲೇವೆಲ್ ಪ್ರದೇಶಗಳಾದ ಪಿ.ಪಿ.ಎಸ್, ಲೇಡಿಹಿಲ್, ಸೂಟರ್‌ಪೇಟೆ, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ್‌ಬೈಲ್, ಕದ್ರಿ, ನಾಗೂರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ ಕಾನ, ಬಾಳಾ, ಕುಳಾಯಿ, ಮುಕ್ಕ, ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ತಿಳಿಸಿದೆ.

Similar News