ಸಸಿಹಿತ್ಲು: ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಶಿಪ್ ಗೆ ಚಾಲನೆ

Update: 2023-06-01 17:26 GMT

ಮುಲ್ಕಿ: ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಅಂತರಾಷ್ಟ್ರೀಯ ವೇದಿಕೆ ಕಲ್ಪಿಸುವ ಧ್ಯೇಯೋದ್ದೇಶದಿಂದ ಪ್ರಾರಂಭಗೊಂಡ ಮಂತ್ರ ಸರ್ಫ್ ಕ್ಲಬ್ ವತಿಯಿಂದ ಸಸಿಹಿತ್ಲುವಿನ ಮುಂಡಾ ಕಡಲ ಕಿನಾರೆಯಲ್ಲಿ ಸರ್ಫಿಂಗ್ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ರಾಷ್ಟ್ರೀಯ ಸರ್ಫಿಂಗ್ ಕ್ರೀಡೆಗೆ ಚಾಲನೆ ನೀಡಲಾಯಿತು

ಕದಿಕೆ ಮೊಗವೀರ ಸಭಾದ ಕಿಶೋರ್ ಗುರಿಕಾರ ಸಮುದ್ರ ಪೂಜೆ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಾಣಿಕ್ಯ ಎನ್  ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ಸಸಿಹಿತ್ಲು ಮುಂಡಾ ಬೀಚ್ ನಲ್ಲಿ ಸರ್ಫಿಂಗ್ ನಡೆಯು ತ್ತಿರುವುದು  ಹೆಮ್ಮೆಯ ವಿಷಯ, ಕರ್ನಾಟಕದಲ್ಲೇ ಸಸಿಹಿತ್ಲು ಸರ್ಫಿಂಗ್ ಗೆ ಉತ್ತಮ ಪ್ರದೇಶವಾಗಿದೆ, ಭಾರತದಲ್ಲಿ ಸರ್ಪಿಂಗ್ ಪ್ರಾರಂಭಿಸಿದ್ದು ಮಂಗಳೂರಿನಲ್ಲಿಯೇ ಇದು ನಮಗೆ ಹೆಮ್ಮೆ, ಒಲಪಿಂಕ್ ನಲ್ಲೂ ಸರ್ಫಿಂಗ್ ಸೇರಿಸುವ ಪ್ರಯತ್ನ ನಡೆಯುತಿದೆ, ಮಂಗಳೂರಿನ ಸರ್ಪಿಂಗ್ ಕ್ರೀಡಾ ಪಟುಗಳಿಗೆ ಅನುಕೂಲವಾಗಲೆಂದು ಮಂತ್ರ ಸರ್ಪ್ ಕ್ಲಬ್ ಪ್ರಾರಂಭಿಸಲಾಗಿದ್ದು ನಿರಂತರವಾಗಿ ನಡೆಯಲಿ ಎಂದರು.

ಈ ಸಂದರ್ಭ ಉದ್ಯಮಿ ಧನಂಜಯ ಶೆಟ್ಟಿ, ಸರ್ಫಿಂಗ್ ಫೆಡರೇಷನ್ ಉಪಾಧ್ಯಕ್ಷ ರಾಮ್ ಮೋಹನ್ ಪರಾಂಜಪೆ, ಕೋಶಾಧಿಕಾರಿ ನವಾಜ್ ಜಬ್ಬರ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ನಿರ್ದೇಶಕ ಗೌರವ್ ಹೆಗ್ಡೆ, ಉದ್ಯಮಿ ಉದಯ ಶೆಟ್ಟಿ ಪಡುಬಿದ್ರೆ,ನವೀನ್ ಶೆಟ್ಟಿ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.

ಜೂನ್ 1ರಿಂದ ಜೂನ್ 3ರರ ವರೆಗೆ ನಡೆಯುವ ಸರ್ಫಿಂಗ್ ಚಾಂಪಿಯನ್ಶಿಪ್ ಮುಂಜಾನೆ 7ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನ 12:30ರ ವರೆಗೆ ನಡೆಯಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಿತ ವಿವಿಧ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಪರ್ಧೆ ನಡೆಯಲಿದ್ದು ರಾಷ್ಟ್ರಮಟ್ಟದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.

ದೇಶದ 30ಕ್ಕೂ ಅಧಿಕ ಸರ್ಫ್ ಕ್ಲಬ್ ಗಳಿಂದ ಸುಮಾರು 75ಕ್ಕೂ ಅಧಿಕ ಸ್ಪರ್ದಾಳುಗಳ ನೊಂದಾವಣೆ ಈಗಾಗಲೇ ನಡೆದಿದೆ. ಮುಂಗಾರು ಆಗಮನದ ಮೊದಲು ಬೀಸುವ ಬಿರುಗಾಳಿಯಲ್ಲಿ ಏಳುವ ಅಲೆಗಳನ್ನು ಉಪಯೋಗಿಸಿ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ. ಎಂದು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷ ರಾಮ್ಮೋಹನ್ ಪರಾಂಜಪೆ ತಿಳಿಸಿದ್ದಾರೆ.

16ರ ಕೆಳಗಿನ ಬಾಲಕ, ಬಾಲಿಕೆಯರ ಎರಡು ವಿಭಾಗ ಮತ್ತು ಓಪನ್ ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಭಾಗವಹಿಸಲಿದ್ದಾರೆ. ಸ್ಪರ್ಧೆಗಳಲ್ಲಿ ಅಗ್ರ ಸ್ಥಾನ ಕಾಯ್ಡುಕೊಂಡ ಸ್ಪರ್ದಾಳುಗಳಿಗೆ ಚೆನೈನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ.ಮುಂದಿನ ಇಂಡಿಯನ್ ಓಪನ್ ಸ್ಪರ್ಧೆಗಳು ಪೋಂಡಿಚೇರಿ, ಚೆನೈನ ಮಹಾಬಲಿಪುರಂ ನಲ್ಲಿ ನಡೆಯಲಿದೆ.

Similar News