ಸೋಮೇಶ್ವರ ಬೀಚ್ ನಲ್ಲಿ ಅನೈತಿಕ ಪೊಲೀಸ್ ಗಿರಿ: ಏಳು ಮಂದಿ ಸೆರೆ

Update: 2023-06-02 18:06 GMT

ಉಳ್ಳಾಲ: ಸೋಮೇಶ್ವರ ಬೀಚ್ ನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಭವಿಶ್ ಬಸ್ತಿಪಡ್ಪು ಮತ್ತು ಜೀತು ತಲಪಾಡಿ ಎಂಬವರನ್ನು ಉಳ್ಳಾಲ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದು, ಬಂಧನದ ಸಂಖ್ಯೆ ‌ಏಳಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಯತೀಶ್ ಬಸ್ತಿಪಡ್ಪು, ಸಚಿನ್ ತಲಪಾಡಿ, ಸುಹಾನ್ ತಲಪಾಡಿ ,ಅಖಿಲ್ ತಲಪಾಡಿ ಹಾಗೂ ಇನ್ನೋರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರಕ್ಕೆ ಗುರುವಾರ ಸಂಜೆ ವೇಳೆ  ಕೇರಳ ಮೂಲದ ಆರು ಮಂದಿ  ವಿಹಾರಕ್ಕೆಂದು‌  ಬಂದಿದ್ದರು. ಇವರಲ್ಲಿ ಮೂವರು ಯುವತಿಯರ ಜತೆ ಇದ್ದ ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಸಂಶಯದ ಮೇಲೆ ತಂಡವೊಂದು ಇವರನ್ನು ಹಿಂಬಾಲಿಸಿ ಹಲ್ಲೆ ನಡೆಸಿತ್ತು. ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ವಿಹಾರ ನಡೆಸುತ್ತಿರುವ ಸಂದರ್ಭ ತಂಡ ಈ ಕೃತ್ಯ ಎಸಗಿದ್ದು  ಇದರಿಂದ ಮೂವರು  ಯುವಕರು ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಮಿಷನರ್ ಆಸ್ಪತ್ರೆಗೆ ಭೇಟಿ

ಉಳ್ಳಾಲ: ಸೋಮೇಶ್ವರದಲ್ಲಿ ಗುರುವಾರ ರಾತ್ರಿ ನಡೆದ ಅನೈತಿಕ ಪೊಲೀಸ್‌ ಗಿರಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ಪಡೆದ ಕಮಿಷನರ್ ಕುಲದೀಪ್‌ ಜೈನ್ ಗುರುವಾರ ರಾತ್ರಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆದರು.

ಘಟನೆಯ ಕಾರಣವನ್ನು ಅರಿತ ಅವರು ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಪ್ಪಿತಸ್ಥರನ್ನು  ಬಂಧಿಸಿ  ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಇದೇ ವೇಳೆ ಅವರು ಸೂಚಿಸಿದರು.

Similar News