ಮಂಗಳೂರು: ಪೊಲೀಸ್ ಠಾಣೆ ಗಳಲ್ಲಿ ಸಂತ್ರಸ್ತರ ದೂರು ಸ್ವೀಕರಿಸಲು ನಿರಾಕರಣೆ ಸಲ್ಲದು: ಎಸ್.ಪಿ

Update: 2023-06-02 10:45 GMT

ಮಂಗಳೂರು,ಜೂ.2; ಪೊಲೀಸ್ ಠಾಣೆ ಗಳಲ್ಲಿ ದೂರು ನೀಡಲು ಬರುವ ಸಂತ್ರಸ್ತರಿಗೆ ನಿಮ್ಮ ಮೇಲೆ ಪ್ರತಿದೂರು ನೀಡಬಹುದು. ಆ ಕಾರಣದಿಂದ ದೂರು ನೀಡಬೇಡಿ, ಎಫ್ ಐಆರ್ ಬೇಡ ಎಂದು ದೂರುದಾರರ ದೂರು ಸ್ವೀಕರಿಸದೆ ಇರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ  ಎಸ್ ಪಿ ಕಚೇರಿ ಸಭಾಂಗಣ ದಲ್ಲಿಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯ ಅಧ್ಯಕ್ಷತೆ  ವಹಿಸಿ ಅವರು ಮಾತನಾಡುತ್ತಿದ್ದರು.

ಬೆಳ್ತಂಗಡಿ ತಾಲೂಕಿನಲ್ಲಿ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆದ ಕಾರಣ ಆತ  ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದ ಸಂದರ್ಭದಲ್ಲಿ ನಿನ್ನ ಮೇಲೆ ಪ್ರತಿ ದೂರು ನೀಡಬಹುದು ಆದ್ದರಿಂದ ಎಫ್ ಐಆರ್  ಬೇಡ ಎಂದು ಪೊಲೀಸರು ಹೇಳಿದ್ದಾರೆ ಎಂದು ಸಭೆಯಲ್ಲಿ ಶೇಖರ ಲಾಯಿಲಾ ಎಸ್ ಪಿ ಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ ಪಿ,  ಪೊಲೀಸ್ ಠಾಣೆಗೆ ದೂರು ನೀಡಲು ಬರುವ ಯಾವುದೇ ವ್ಯಕ್ತಿಯ  ದೂರನ್ನು ಸ್ವೀಕರಿಸಲಾಗುವುದು ಎಂದರು.

ಸಭೆಯಲ್ಲಿ ಪೊಲೀಸ್ ಇಲಾಖೆಯ ಹೊರತಾಗಿ ಇತರ ಇಲಾಖೆ ಗಳಿಗೆ ಸಂಬಂಧಿಸಿದಂತೆ ಬರುವ ದೂರುಗಳ ಬಗ್ಗೆ ಪೊಲೀಸ್ ಇಲಾಖೆ ನೇರವಾಗಿ ಕ್ರಮ ಕೈ ಗೊಳ್ಳಲು ಸಾಧ್ಯವಾಗುವುದಿಲ್ಲ .ಆಯಾ ಇಲಾಖೆ ಗಳು ಸಮಸ್ಯೆ ಬಗೆಹರಿಸಲು ಅಧಿಕಾರ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ  ಸಂಬಂಧಿಸಿದಂತೆ ನೇರವಾಗಿ ಬಂದಿರುವ ದೂರುಗಳ ಬಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಸ್ಯೆ ಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವುದು ಸೂಕ್ತ. ಉಳಿದ ಸಮಸ್ಯೆ ಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಆಯಾ ಇಲಾಖೆಗೆ ರವಾನಿಸುವ ಕೆಲಸವನ್ನು ಮಾತ್ರ ಪೊಲೀಸ್ ಇಲಾಖೆ ಮಾಡಬಹುದು.ಆದುದರಿಂದ ಪರಿಶಿಷ್ಟ ಜಾತಿ,ಪಂಗಡದ ಸದಸ್ಯರು ಆಯಾ ಇಲಾಖೆಗೆ  ಸಂಬಂಧಿಸಿದಂತೆ ದೂರಗಳನ್ನು ಆಯಾ ಇಲಾಖೆಗೆ ನೀಡಿ ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸುವುದು ಸೂಕ್ತ ಎಂದರು.

ಸಭೆಯಲ್ಲಿ ಡಿವೈಎಸ್ಪಿ ವೇಣುಗೋಪಾಲ, ಡಾ.ಗಾನಾ ಪಿ.ಕುಮಾರ್  ಉಪಸ್ಥಿತರಿದ್ದರು.

Similar News