ಬೆಂಗಳೂರು; ಅಪಘಾತದಲ್ಲಿ ಗಾಯಗೊಂಡು ಮೆದಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ

Update: 2023-06-02 13:49 GMT

ಬೆಂಗಳೂರು, ಜೂ.2: ಅಪಘಾತಕ್ಕೀಡಾಗಿದ್ದ 27 ವರ್ಷದ ರೋಹಿತ್ ಮೆದಳು ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗದಾನ ಮಾಡುವ ನಿರ್ಧಾರ ಕೈಗೊಳ್ಳುವ ಮೂಲಕ ರೋಹಿತ್ ಕುಟುಂಬವು ಹಲವು ಜೀವಗಳನ್ನು ಉಳಿಸಿ ಮಾದರಿಯಾಗಿದೆ. 

ಮೇ 21ರಂದು ಕೆಲಸದಿಂದ ವಾಪಸ್ ಆಗುತ್ತಿದ್ದಾಗ ರೋಹಿತ್ ಬಸವೇಶ್ವರ ನಗರದ ಸೊಣ್ಣೆಗೋರನಹಳ್ಳಿ ಬಳಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನಲೆಯಲ್ಲಿ ರಾತ್ರಿ 10.30ರ ವೇಳೆಗೆ ವಿಜಯನಗರ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ವಿಜಯನಗರ ಆಸ್ಪತ್ರೆಯಲ್ಲಿ ರೋಹಿತ್ ಅವರಿಗೆ ಅಹೋರಾತ್ರಿ ಚಿಕಿತ್ಸೆ ನೀಡಲಾಯಿತು. ಮೇ 24 ರಂದು ಸಂಕೀರ್ಣದಾಯಕವಾದ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಯಿತು. ಹೆಚ್ಚಿನ ಆರೈಕೆಗಾಗಿ ಮೇ 28 ರಂದು ಟ್ರಸ್ಟ್ ವೆಲ್ ಆಸ್ಪತ್ರೆಗೆ ರೋಗಿಯನ್ನು ಸ್ಥಳಾಂತರಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ರೋಹಿತ್ ಅವರ ಮೆದುಳು ಜೀವಕೋಶಗಳು ನಿಷ್ಕ್ರೀಯಗೊಂಡಿವೆ ಎಂದು ಮೇ 30 ರಂದು ಘೋಷಿಸಲಾಯಿತು.

ತೀವ್ರ ನೋವಿನ ಸಂದರ್ಭದಲ್ಲೂ ರೋಹಿತ್ ಅವರ ಅಂಗಾಂಗಳನ್ನು ದಾನ ಮಾಡಲು ಸಮ್ಮತಿಸುವ ಮೂಲಕ ಅವರ ಕುಟುಂಬ ಮಾದರಿ ನಿರ್ಧಾರ ಕೈಗೊಂಡಿತು. ರೋಹಿತ್ ಅವರ ಯಕೃತ್, ಮೂತ್ರಪಿಂಡ, ಹೃದಯದ ಕವಾಟಗಳು, ಅಕ್ಷಿಪಟಲವನ್ನು ಅಂಗಾಂಗ ವಿಫಲತೆ ಸಮಸ್ಯೆಯಿರುವವರಿಗೆ ಕಸಿ ಮಾಡಲಾಯಿತು. 

ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಚ್.ವಿ.ಮಧುಸೂದನ್ ಮಾತನಾಡಿ, ರೋಹಿತ್ ಕುಟುಂಬ ನಿಸ್ವಾರ್ಥತೆಯ ಮೂಲಕ ಅಂಗಾಂಗ ದಾನ ಮಾಡಿದೆ. ಜೀವ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಜೀವ ಉಳಿಸುವ ಉದಾತ್ತ ಜವಾಬ್ದಾರಿ ದೊರೆತಿರುವುದು ನಮಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳಿದ್ದಾರೆ.

Similar News