ಹಜ್‌ಯಾತ್ರೆ- 2023 | ಜೂ.7ರಂದು ಯಾತ್ರಾರ್ಥಿಗಳ ಮೊದಲ ವಿಮಾನ ಹಾರಾಟ: ಸಚಿವ ಝಮೀರ್ ಅಹ್ಮದ್ ಖಾನ್

Update: 2023-06-02 15:04 GMT

ಬೆಂಗಳೂರು, ಜೂ.2: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ರಾಜ್ಯ ಸಮಿತಿಯ ಮೂಲಕ ತೆರಳಲಿರುವ ಯಾತ್ರಾರ್ಥಿಗಳ ಮೊದಲ ವಿಮಾನವು ಜೂ.7ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಹಾರಾಟ ಮಾಡಲಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ ಯಾತ್ರಿಗಳ ನಿರ್ಗಮನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಸಿದ್ಧತೆಗಳ ಕುರಿತು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರೊಂದಿಗೆ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಸ್ಟಮ್ಸ್ ಹಾಗೂ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಜ್ ಭವನದ ಆವರಣದಲ್ಲಿ ಜೂ.6ರಂದು ಸಂಜೆ ವಿಮಾನಯಾನದ ಉದ್ಘಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಚಿವರು, ಶಾಸಕರು, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಜೂ.7ರಂದು ಐದು ವಿಮಾನಗಳು ಹಾಗೂ ಉಳಿದ ದಿನಗಳಲ್ಲಿ ಮೂರು ವಿಮಾನಗಳು ಹಾರಾಟ ಮಾಡಲಿವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಹಜ್ ಯಾತ್ರಾರ್ಥಿಗಳ ಪ್ರಯಾಣಕ್ಕೆ ವಿಸ್ತಾರಾ ಏರ್‌ಲೈನ್ಸ್ ವಿಮಾನಗಳನ್ನು ನಿಗದಿ ಮಾಡಿದೆ. ಇದರಲ್ಲಿ ಒಮ್ಮೆಗೆ 180 ಯಾತ್ರಾರ್ಥಿಗಳು ಮಾತ್ರ ಪ್ರಯಾಣಿಸಲು ಸಾಧ್ಯ. ಯಾತ್ರಾರ್ಥಿಗಳ ಲಗೇಜ್ ಪ್ರಮಾಣ ಹೆಚ್ಚಾಗಿರುವ ಕಾರಣದಿಂದಾಗಿ ಯಾತ್ರಾರ್ಥಿಗಳ ಸಂಖ್ಯೆಯನ್ನು ಒಂದು ವಿಮಾನಕ್ಕೆ ಗರಿಷ್ಠ 150ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಯಾತ್ರಾರ್ಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮಗ್ರವಾಗಿ ಮಾಡಲು ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿಯವರಿಗೆ ಸೂಚನೆ ನೀಡಲಾಗಿದೆ. ಹಜ್ ಸಮಿತಿ ವತಿಯಿಂದ ಯಾತ್ರಾರ್ಥಿಗಳಿಗೆ ಹಜ್ ಭವನದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

4.5 ಲಕ್ಷ ಜನರಿಗೆ ಅನ್ನಸಂತರ್ಪಣೆ: ಯಾತ್ರಾರ್ಥಿಗಳಿಗೆ ಬೀಳ್ಕೊಡಲು ದೂರದ ಸ್ಥಳಗಳಿಂದ ಆಗಮಿಸುವಂತಹ ಸಂಬಂಧಿಕರಿಗೆ ಹಜ್ ಸಮಿತಿ ವತಿಯಿಂದ ಊಟದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆದುದರಿಂದ, ವೈಯಕ್ತಿಕವಾಗಿ ಪ್ರತಿ ದಿನ 30 ಸಾವಿರ ಮಂದಿಯಂತೆ 15 ದಿನಗಳಲ್ಲಿ 4.5 ಲಕ್ಷ ಜನರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡುವುದಾಗಿ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ತಾತ್ಕಾಲಿಕ ಹಜ್ ಟರ್ಮಿನಲ್: ಯಾತ್ರಾರ್ಥಿಕರು ಹಜ್ ಭವನದಿಂದ ನಿರ್ಗಮಿಸಿದ ನಂತರ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ತಾತ್ಕಾಲಿಕ ಹಜ್ ಟರ್ಮಿನಲ್‌ನಲ್ಲಿ ವಲಸೆ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಿ ನಂತರ ತಮ್ಮ ವಿಮಾನಗಳನ್ನು ಹತ್ತುತ್ತಾರೆ. ಈ ಬಾರಿಯಿಂದ ಹಜ್ ಸಮಿತಿಯಿಂದ ಯಾತ್ರಾರ್ಥಿಗಳಿಗೆ ಯಾವುದೆ ವಿದೇಶಿ ವಿನಿಮಯವನ್ನು ನೀಡಲಾಗುತ್ತಿಲ್ಲ. ಅಗತ್ಯ ಮೊತ್ತದ ವಿದೇಶಿ ವಿನಿಮಯವನ್ನು ಪಡೆಯಲು ಹಜ್ ಭವನದಲ್ಲಿ ವಿಶೇಷ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೌಂಟರ್ ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಸೇರಿದಂತೆ ಹಜ್ ಸಮಿತಿಯ ಸದಸ್ಯರು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Similar News