ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ 6 ಡಯಾಲಿಸಿಸ್ ಯಂತ್ರದ ವ್ಯವಸ್ಥೆ: ಅಶೋಕ್ ಕುಮಾರ್ ರೈ

Update: 2023-06-02 16:16 GMT

ಪುತ್ತೂರು: ಕಿಡ್ನಿ ವೈಫಲ್ಯದ ಕಾರಣದಿಂದ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಸುಸೂತ್ರವಾಗಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ 6 ಡಯಾಲಿಸಿಸಿ ಯಂತ್ರವು ಕಾರ್ಯಾಚರಣೆ ನಡೆಸುತ್ತಿದ್ದು, ಮುಂದಿನ ವಾರದ ಒಳಗಾಗಿ ಇನ್ನು ಹೆಚ್ಚುವರಿಯಾಗಿ 6 ಡಯಾಲಿಸಿಸಿ ಯಂತ್ರವನ್ನು ಸ್ಥಳೀಯ ರೋಟರಿ ಸಂಸ್ಥೆಗಳ ಸಹಕಾರದಲ್ಲಿ ವ್ಯವಸ್ಥೆಗೊಳಿಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದರು. 

ಅವರು ಶುಕ್ರವಾರ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್ ಕೇಂದ್ರ, ಆಸ್ಪತ್ರೆಯ ವಾರ್ಡ್ ಇನ್ನಿತರ ಸ್ಥಳಗಳಿಗೆ ತೆರಳಿ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ಸಭೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 6 ಡಯಾಲಿಸಿಸ್ ಮೆಷಿನ್ ಕಾರ್ಯಾಚರಿಸುತ್ತಿದೆ. ಆದರೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ 6 ಯಂತ್ರಗಳು ಬೇಕಾಗಿದೆ. ಕಡಬದಲ್ಲಿ ಮೂರು ಮೆಷಿನ್ ಇದ್ದು ಸರಿಯಾಗಿ ಕಾರ್ಯಾಚರಿಸಿದಲ್ಲಿ ಪುತ್ತೂರು ಆಸ್ಪತ್ರೆಯಲ್ಲಿ ಒತ್ತಡ ಕಡಿಮೆಯಾಗಲಿದೆ. ಈಗಾಗಲೇ ಪುತ್ತೂರು ಡಯಾಲಿಸಿಸ್ ಕೇಂದ್ರದಲ್ಲಿ ದಿನವಹಿ 30 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಒಟ್ಟು 60 ಮಂದಿ ರೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ. 70 ಮಂದಿ ರೋಗಿಗಳು ಸರದಿಯಲ್ಲಿ ಕಾಯುತ್ತಿದ್ದಾರೆ. ಮುಂದಿನ ವಾರದಲ್ಲಿ 6 ಯಂತ್ರವನ್ನು ರೋಟರಿ ಸಂಸ್ಥೆಯು ನೀಡಲಿದೆ. ಇದರಿಂದಾಗಿ ಚಿಕಿತ್ಸೆಯ ಒತ್ತಡ ಕಡಿಮೆಯಾಗಲಿದೆ. ಉಳಿದಂತೆ ಮೂರು ಡಯಾಲಿಸಿಸ್ ಯಂತ್ರ ಹೆಚ್ಚುವರಿಯಾಗಿ ಬೇಕಾಗಿದೆ. ಇದನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಉಳಿದಂತೆ ಆಸ್ಪತ್ರೆಗೆ ಅನಸ್ತೇಸಿಯಾ ವರ್ಕಿಂಗ್ ಘಟಕ, ಮಾಡ್ಯುಲರ್ ಒಟಿಯ ಅಗತ್ಯತೆ ಇದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ ಶಾಲೆಗಳಲ್ಲಿ ಗೌರವ ಶಿಕ್ಷಕಿ ಯರನ್ನು ನೇಮಕ ಮಾಡಿದ ರೀತಿಯಲ್ಲಿ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆಸ್ಪತ್ರೆಗೆ ತಾತ್ಕಾಲಿಕ ಸಿಬ್ಬಂದಿಗಳ ನೇಮಕದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಚರ್ಚಿಸಿ ಸಿಬ್ಬಂದಿಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಮೆಡಿಕಲ್ ಕಾಲೇಜು ಪ್ರಸ್ತಾವನೆ ಮುಂದುವರಿಕೆ

ಕಳೆದ ಅವಧಿಯಲ್ಲಿ ರಾಜ್ಯದಲ್ಲಿ 6 ಸರಕಾರಿ ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಲಾಗಿದ್ದು, ಇದಕ್ಕೆ ರೂ. 4600 ಕೋಟಿ ವೆಚ್ಚವಾಗಲಿದೆ. ಪುತ್ತೂರಿನಲ್ಲಿ ಈಗಾಗಲೇ ಸರಕಾರಿ ಮೆಡಿಕಲ್ ಕಾಲೇಜಿಗೆ 40 ಎಕರೆ ಜಮೀನು ಮಂಜೂರಾಗಿರುವ ಕಾರಣ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರುಗೊಳ್ಳಲಿದೆ. ಆದರೆ ಈ ಕುರಿತಾದ ಪ್ರಸ್ತಾವನೆಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಈ ತನಕ ಆಗಿರಲಿಲ್ಲ. ಮೆಡಿಕಲ್ ಕಾಲೇಜ್‍ಗೆ ಸಂಬಂಧಿಸಿದ ಕಡತ ತಾಲೂಕು ಕಚೇರಿಯಲ್ಲೇ ಉಳಿದುಕೊಂಡಿತ್ತು. ನಾನು ಶಾಸಕನಾಗಿ ಆಯ್ಕೆಯಾದ ತಕ್ಷಣ ಇದನ್ನು ಗಮನಿಸಿ ತಾಲೂಕು ಕಚೇರಿಯಲ್ಲಿದ್ದ ಕಡತ ಎ.ಸಿ.ಯವರ ಮೂಲಕ ಜಿಲ್ಲಾಧಿಕಾರಿಯವರಿಗೆ ಕಳುಹಿಸಿದ್ದೆ. ಬಳಿಕ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಅಲ್ಲಿಂದ ಕಡತವನ್ನು ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಕಚೇರಿಗೆ ತಲುಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರು ತಮ್ಮ ಬಜೆಟ್‍ನಲ್ಲಿ ಇದನ್ನು ಮಂಜೂರು ಮಾಡಬಹುದು ಇಲ್ಲವೇ ಸಂಪುಟ ಸಭೆಯಲ್ಲೂ ಮಂಜೂರುಗೊಳಿಸಲು ಅವಕಾಶವಿದೆ ಎಂದರು. 

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸ ಬೇಕಿದ್ದಲ್ಲಿ 300 ಬೆಡ್‍ಗಳ ಆಸ್ಪತ್ರೆ ಇರಬೇಕಾಗಿದೆ.  ಈಗಿನ ಆಸ್ಪತ್ರೆಯ ಜಾಗದಲ್ಲಿ 300 ಬೆಡ್‍ಗಳ ಹೊಸ ಆಸ್ಪತ್ರೆ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಹಾಲಿ ಕಟ್ಟಡ ಕೆಡವಿದರೆ ಇಲ್ಲಿರುವ ರೋಗಿಗಳಿಗೆ ಸಮಸ್ಯಯಾಗುವ ಸಂಭವವಿದೆ. ಈ ನಿಟ್ಟಿನಲ್ಲಿ ಇಲ್ಲಿನ 100 ಬೆಡ್‍ನ ಆಸ್ಪತ್ರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಈಗಾಗಲೇ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ 200 ಬೆಡ್‍ಗಳ ಹೊಸ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಅಲ್ಲಿನ ಆಸ್ಪತ್ರೆಯ ಜೊತೆಗೆ  ಇಲ್ಲಿರುವ 100 ಬೆಡ್‍ಗಳ ಆಸ್ಪತ್ರೆಯನ್ನು ಪೂರಕವಾಗಿ ಬಳಸಿಕೊಳ್ಳಬಹುದು. ಮೆಡಿಕಲ್ ಕಾಲೇಜು ಮತ್ತು ಸರಕಾರಿ ಆಸ್ಪತ್ರೆ ಗಳೆರಡನ್ನೂ ಒಂದೇ ಕ್ಯಾಂಪಸ್‍ನಲ್ಲಿ ನಿರ್ಮಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. 

ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಆಸ್ಪತ್ರೆಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Similar News