ಶಿವರಾಮಕಾರಂತ ಬಡಾವಣೆಗಾಗಿ ವಕ್ಫ್ ಭೂಮಿ ಸ್ವಾಧೀನ | ಭೂ ಪರಿಹಾರ ಅಥವಾ ಪರ್ಯಾಯ ಜಮೀನು ನೀಡಲು ಶಾಫಿ ಸಅದಿ ಮನವಿ

Update: 2023-06-02 16:53 GMT

ಬೆಂಗಳೂರು, ಜೂ.2: ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ ಅಪರ ಯಲಹಂಕ ತಾಲೂಕಿನ ಮೇಡಿ ಅಗ್ರಹಾರ ಗ್ರಾಮದ ವಿವಿಧ ಸರ್ವೆ ನಂಬರ್‍ಗಳಲ್ಲಿ 229 ಎಕರೆ 29 ಗುಂಟೆ ಜಮೀನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ.ಕೆ.ಶಿವರಾಮ ಕಾರಂತ ಬಡಾವಣೆಗಾಗಿ ಸ್ವಾಧೀನವಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

ಈ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡಗೆ ಪತ್ರ ಬರೆದಿರುವ ಅವರು, ಭೂ ಸ್ವಾಧೀನಾಧಿಕಾರಿಗಳು ಸಂಪೂರ್ಣ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಕ್ಫ್ ಸಂಸ್ಥೆಯಾದ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಝ್ರತ್ ಹಮೀದ್ ಶಾ ಮತ್ತು ಹಝ್ರತ್ ಮುಹೀಬ್ ಷಾ ಖಾದ್ರಿ ದರ್ಗಾ ಮತ್ತು ರಾಜ್ಯ ವಕ್ಫ್ ಮಂಡಳಿಯೊಂದಿಗೆ ಸಮಾಲೋಚಿಸದೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಮೇಡಿ ಅಗ್ರಹಾರ ಗ್ರಾಮದ ಸಂಪೂರ್ಣ ವಿಸ್ತೀರ್ಣ 358 ಎಕರೆ 11 ಗುಂಟೆ ಜಮೀನು ಹಝ್ರತ್ ಹಮೀದ್ ಶಾ ದರ್ಗಾಗೆ ಸೇರಿದ ಮುಸ್ಲಿಂ ಮುಜುರಾಯಿ ದೇವಾಲಯದ ಇನಾಂತಿ ಜಮೀನಾಗಿದೆ. 1973ರಲ್ಲಿ ರಾಜ್ಯ ಸರಕಾರದ ಆದೇಶದಂತೆ ಮುಸ್ಲಿಂ ಮುಜುರಾಯಿ ಸ್ವತ್ತುಗಳನ್ನು ರಾಜ್ಯ ವಕ್ಫ್ ಮಂಡಳಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ ಎಂದು ಶಾಫಿ ಸಅದಿ ಹೇಳಿದ್ದಾರೆ.

ಈ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರು ರಾಜ್ಯದ ಎಂಡೋಮೆಂಟ್ಸ್ ಆಯುಕ್ತರಿಗೆ 1974ರಲ್ಲಿ ಪತ್ರ ಬರೆದು ರಾಜ್ಯದ 456 ವಕ್ಫ್ ಸಂಸ್ಥೆಗಳ ಚರ, ಸ್ಥಿರ ಆಸ್ತಿಗಳು ಹಾಗೂ ಆಭರಣ ಇತ್ಯಾದಿಗಳ ಸಮೇತ ರಾಜ್ಯ ವಕ್ಫ್ ಮಂಡಳಿಗೆ ಹಸ್ತಾಂತರಿಸಲು ಸೂಚಿಸಿದ್ದಾರೆ ಅವರು ತಿಳಿಸಿದ್ದಾರೆ. 

ಈ ಆದೇಶದಂತೆ ತಹಶೀಲ್ದಾರರು ರಾಜ್ಯ ವಕ್ಫ್ ಮಂಡಳಿಗೆ ಕೇವಲ 11 ಎಕರೆ ಜಮೀನು ಇತರರ ಅನಧಿಕೃತ ಸ್ವಾಧೀನದಲ್ಲಿರುವುದನ್ನು ಹಸ್ತಾಂತರಿಸಿದ್ದಾರೆ. ಉಳಿದ ಎಲ್ಲ ಜಮೀನು ಹಸ್ತಾಂತರಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ವಕ್ಫ್ ಮಂಡಳಿ ಸತತವಾಗಿ ಪತ್ರ ವ್ಯವಹಾರ ಮಾಡಿದೆ. 2018ರಲ್ಲಿ ವಕ್ಫ್ ನ್ಯಾಯಾಧೀಕರಣವು ಮೇಡಿ ಅಗ್ರಹಾರ ಗ್ರಾಮಕ್ಕೆ ಸೇರಿದ 358 ಎಕರೆ 11 ಗುಂಟೆ ಜಮೀನು ಹಝ್ರತ್ ಹಮೀದ್ ಶಾ ದರ್ಗಾಕ್ಕೆ ಸೇರಿದ ವಕ್ಫ್ ಆಸ್ತಿ ಎಂದು ತೀರ್ಪು ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಆದೇಶದ ಅನ್ವಯ ಯಲಹಂಕ ತಹಶೀಲ್ದಾರ್ ಗೆ ಪಹಣಿಯಲ್ಲಿ ವಕ್ಫ್ ಸಂಸ್ಥೆಯ ಹೆಸರು ದಾಖಲಿಸಲು ಪ್ರಸ್ತಾಪ ಮಾಡಲಾಗಿದ್ದು, ಮ್ಯೂಟೇಷನ್ ಅನುಮೋದನೆಗೆ ಬಾಕಿ ಇದೆ. ಕೇಂದ್ರ ಸರಕಾರದ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಜಿಲ್ಲಾಧಿಕಾರಿ ವಕ್ಫ್ ಮಂಡಳಿಗೆ ತಿಳಿಸುವುದು ಅಗತ್ಯ. ವಕ್ಫ್ ಮಂಡಳಿಗೆ ಸಮಾಲೋಚಿಸದೆ ಮಾಡಿರುವ ಆದೇಶ ನಿರರ್ಥಕವಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಂತಿಮ ಅಧಿಸೂಚನೆಯಲ್ಲಿ ವಕ್ಫ್ ಸಂಸ್ಥೆ ಅಥವಾ ವಕ್ಫ್ ಮಂಡಳಿಗೆ ಯಾವುದೆ ಸೂಚನೆ ನೀಡದೆ ವಕ್ಫ್ ಆಸ್ತಿ ಭೂ ಸ್ವಾಧೀನಪಡಿಸಿರುವುದು ವಕ್ಫ್ ಕಾಯ್ದೆಯ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿದೆ. ಸಾರ್ವಜನಿಕ ಉದ್ದೇಶಕ್ಕೆ ಮಾಡಲಾಗಿರುವ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪರಿಹಾರದ ಹಕ್ಕು ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ, 2013ರಂತೆ ವಕ್ಫ್ ಕಾಯ್ದೆಯ ಕಲಂ 51ರ ನವಯ ಭೂ ಪರಿಹಾರ ಅಥವಾ ಪರ್ಯಾಯ ಜಮೀನು ವಕ್ಫ್ ಸಂಸ್ಥೆಗೆ ನೀಡಲು ವಿನಂತಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ. 

ಇದುವರೆವಿಗೂ ಈ ಬಗ್ಗೆ ಯಾವುದೆ ಕ್ರಮ ಜರುಗಿಸಿಲ್ಲ. ಈ ಕುರಿತು ಶೀಘ್ರದಲ್ಲಿ ಭೂ ಪರಿಹಾರ ಅಥವಾ ಪರ್ಯಾಯ ಜಮೀನು ನೀಡಲು ಸಂಬಂಧಪಟ್ಟ ಅಧೀಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಶಾಫಿ ಸಅದಿ ವಿನಂತಿಸಿದ್ದಾರೆ.

Similar News