ಮಹಾಲಕ್ಷ್ಮಿ ಲೇಔಟ್ ಬಳಿ ಉಸಿರುಗಟ್ಟಿಸಿ ವೃದ್ಧೆಯ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2023-06-02 17:37 GMT

ಬೆಂಗಳೂರು, ಜೂ.2: ವೃದ್ಧೆಯೊಬ್ಬಳ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಿದ್ದರಾಜು, ಅಶೋಕ್ ಹಾಗೂ ಮತ್ತೊಬ್ಬ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೇ 28ರ ಸಂಜೆ ಮಹಾಲಕ್ಷ್ಮಿ ಲೇಔಟ್‍ನ ಅಂಚೆ ಕಚೇರಿ ಬಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಕಮಲಮ್ಮ(82) ಅವರ ಕೈ-ಕಾಲು ಕಟ್ಟಿ ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿದ್ದ ಆರೋಪಿಗಳನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. 

ಬಂಧಿತ ಸಿದ್ದರಾಜು ಮೂರು ತಿಂಗಳ ಹಿಂದೆ ಅದೇ ಮನೆಯಲ್ಲಿ ಪ್ಲಂಬರ್ ಕೆಲಸ ಮಾಡಿದ್ದ. ಮನೆಯಲ್ಲಿ ವೃದ್ದೆ ಒಬ್ಬರೆ ಇದ್ದು, ಅವರ ಬಳಿ ಚಿನ್ನಾಭರಣಗಳಿವೆ ಎಂಬುದನ್ನು ಖಚಿತಪಡಿಸಿಕೊಂಡು ಈ ವಿಷಯವನ್ನು ಗೆಳೆಯ ಅಶೋಕ್ ಬಳಿ ಪ್ರಸ್ತಾಪಿಸಿ ಇಬ್ಬರೂ ಸೇರಿ ಸಂಚು ರೂಪಿಸಿದ್ದಾರೆ. 

ಕೊಲೆ ನಡೆದ ದಿನ ಇಬ್ಬರೂ ಆರೋಪಿಗಳು ಎರಡು ಬಾರಿ ಆ ಮನೆಯ ಬಳಿ ಹೋಗಿದ್ದಾರೆ. ಮೊದಲು ಸಂಜೆ ನಾಲ್ಕು ಗಂಟೆಗೆ ಹೋಗಿ, ಖಾಲಿ ಇದ್ದ ಒಂದು ಮನೆ ಬಾಡಿಗೆಗೆ ಕೇಳಿದ್ದಾರೆ. ಆಗ ಅಜ್ಜಿ ಬಾಡಿಗೆಗೆ ಇಲ್ಲವೆಂದು ಬಾಗಿಲನ್ನು ತೆಗೆದಿಲ್ಲ. ಮತ್ತೆ ಸಂಜೆ ಆರು ಗಂಟೆಗೆ ಪುನಃ ಮನೆ ಬಳಿ ಹೋಗಿದ್ದಾರೆ. ಈ ವೇಳೆ ಈ ಹಿಂದೆ ಬಂದಿದ್ದವರೆ ಅಲ್ಲವಾ ಎಂದು ಅಜ್ಜಿ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತಿದ್ದಂತೆ ಅಜ್ಜಿ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಅಜ್ಜಿ ಬಳಿಯಿದ್ದ ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಪರಾರಿಯಾಗಿದ್ದರು. 

ಸುದ್ದಿ ತಿಳಿದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆರೆಗೆ ಬಲೆ ಬೀಸಿದ್ದರು. ಈ ಆರೋಪಿಗಳು ಮೈಸೂರಿನಲ್ಲಿರುವ ಮಾಹಿತಿ ಆಧಾರದ ಮೇಲೆ ಮೈಸೂರಿಗೆ ಹೋಗಿ ಅಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Similar News