ಡ್ರಗ್ಸ್ ಸೇವನೆ: ಬೆಂಗಳೂರು ನಗರದಲ್ಲಿ ಒಂದೇ ದಿನ 154 ಮಂದಿಯನ್ನು ಬಂಧಿಸಿದ ಪೊಲೀಸರು

Update: 2023-06-02 17:48 GMT

ಬೆಂಗಳೂರು, ಜೂ. 2: ಶಾಲಾ-ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆ, ನಗರ ಪೊಲೀಸರು ಶಾಲಾ-ಕಾಲೇಜುಗಳಿಂದ ನೂರು ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮೇಲೆ ದಾಳಿ ಮುಂದುವರಿಸಿದ್ದು, ದಾಳಿ ವೇಳೆ ಅಂಗಡಿಗಳಲ್ಲಿ ಅಕ್ರಮವಾಗಿ ಮಾದಕವಸ್ತುಗಳು ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. 

ಎರಡು ದಿನಗಳಿಂದ ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಪೊಲೀಸರು ಒಟ್ಟು 164 ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಮಾದಕವಸ್ತು ಸೇವನೆ ಆರೋಪದಡಿ 154 ಪ್ರಕರಣ ದಾಖಲಿಸಿ, 154 ಜನರನ್ನು ಬಂಧಿಸಲಾಗಿದೆ. ಮಾದಕವಸ್ತು ಮಾರಾಟ ಆರೋಪದಡಿ 10 ಜನರನ್ನು ಬಂಧಿಸಿ 11 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯಡಿ 10 ಪ್ರಕರಣ ದಾಖಲಿಸಲಾಗಿದೆ. 

ಕೇಂದ್ರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಎನ್‍ಡಿಪಿಎಸ್ ಕಾಯ್ದೆಯಡಿ 21 ಪ್ರಕರಣ ದಾಖಲಿಸಲಾಗಿದೆ. 18 ಮಂದಿ ಮಾದಕವಸ್ತು ವ್ಯಸನಿಗಳು ಹಾಗೂ 3 ಮಂದಿ ಪೆಡ್ಲರ್‍ಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 11 ಗ್ರಾಂ ಎಂಡಿಎಂ ಮಾದಕವಸ್ತು, 7 ಗ್ರಾಂ ಹೈಡ್ರಾ ಮ್ಯಾಂಗೋ ಹಾಗೂ 2.5 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

Similar News