ವಿಟ್ಲ | ತಂಡದಿಂದ ಹಲ್ಲೆ: ಪ್ರಕರಣ ದಾಖಲು

Update: 2023-06-03 04:37 GMT

ವಿಟ್ಲ: ಕಂಬಳಬೆಟ್ಟುವಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಮಣಿನಾಲ್ಕೂರು ಗ್ರಾಮದ ಅಜಲುಮೊಗರು ನಿವಾಸಿ ಮುಹಮ್ಮದ್ ಸರ್ವನ್ (27) ಹಾಗೂ ಜತೆಗೆ ಕೆಲಸ ಮಾಡುವ ಫಾರೂಕ್ ಹಲ್ಲೆಗೊಳಗಾದವರು. ಕಂಬಳಬೆಟ್ಟು ಉರಿಮಜಲು ನಿವಾಸಿಗಳಾದ ಜಸೀಲ್, ಯೂಸುಫ್, ಝಿಯಾದ್, ಉಸ್ಮಾನ್, ಶರೀಫ್ ಹಾಗೂ ಇತರ ಮೂವರು ಆರೋಪಿಗಳು ಸೇರಿ ಹಲ್ಲೆ ಮಾಡಿರುವುದಾಗಿ  ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕಂಬಳಬೆಟ್ಟುವಿನಲ್ಲಿ ಅಕ್ರಮ ಕೂಟ ಸೇರಿಕೊಂಡು ಮುಹಮ್ಮದ್ ಸರ್ವನ್ ಅವರನ್ನು ಕಾರಿನಿಂದ ಕೆಳಗೆ ಎಳೆದು ಹಾಕಿದ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲೆತ್ನಿಸಿದ ಫಾರೂಕ್ ಅವರಿಗೆ ಮರದ ದೊಣ್ಣೆಯಿಂದ ಹೊಡೆದಿದ್ದಾರೆ. ಬಳಿಕ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗಾಯಾಳು ಮುಹಮ್ಮದ್ ಸರ್ವನ್ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ, ಫಾರೂಕ್ ಪುತ್ತೂರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Similar News