ಕಾಂಗ್ರೆಸ್ ‘ಗ್ಯಾರಂಟಿ’ ಜಾರಿಯಿಂದ ಬಿಜೆಪಿ ತತ್ತರ: ರಮಾನಾಥ ರೈ

Update: 2023-06-03 09:22 GMT

ಮಂಗಳೂರು, ಜೂ.3: ಚುನಾವಣಾ ಪ್ರಚಾರ ಸಂದರ್ಭ ನೀಡಿದ್ದ ಭರವಸೆಯ ‘ಗ್ಯಾರಂಟಿ’ಗಳನ್ನು ಅಧಿಕಾರಕ್ಕೇರಿದ ಎರಡೇ ವಾರದಲ್ಲಿ ಜಾರಿಗೊಳಿಸುವ ಮೂಲಕ ದೇಶದಲ್ಲೇ ಕಾಂಗ್ರೆಸ್ ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಕ್ರಮದಿಂದ ಬಿಜೆಪಿಯು ಸಂಪೂರ್ಣವಾಗಿ ತತ್ತರಿಸಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಯಾವ ರಾಜ್ಯದಲ್ಲೂ ಇಂತಹ ಗ್ಯಾರಂಟಿಗಳ ಅನುಷ್ಠಾನವಾಗಿಲ್ಲ. ನಮ್ಮದು ನುಡಿದಂತೆ ನಡೆಯುವ ಸರಕಾರವಾಗಿದೆ. ಇತಿಹಾಸದ ಪುಟದಿಂದ ಈ ದಿಟ್ಟ ಕ್ರಮವನ್ನು ಎಂದಿಗೂ ಅಳಿಸಲಾಗದು. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಯ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಿಜೆಪಿಗರು ಕಾಂಗ್ರೆಸ್ ಅಧಿಕಾರಕ್ಕೇರಿದಾಗ ತಕ್ಷಣ ಗ್ಯಾರಂಟಿ ಜಾರಿಗೆ ತನ್ನಿ ಎನ್ನುವ ಮೂಲಕ ದ್ವಂದ ನಿಲುವು ತಾಳಿದ್ದರು. ಇದೀಗ ಕಾಂಗ್ರೆಸ್ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಬಿಜೆಪಿ ಉತ್ತರಿಸಲಾಗದೆ ತತ್ತರಿಸಿದೆ ಎಂದರು.

ಉಚಿತ ಭಾಗ್ಯಗಳನ್ನು ಕೊಡುವುದರಿಂದ ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಸಾಲಮೇಳ ಮಾಡಿದಾಗಲೂ ಬಿಜೆಪಿಗರು ಟೀಕಿಸಿದ್ದರು. ಉಚಿತ ಅಕ್ಕಿ ಕೊಡುವಾಗಲೂ ಆಕ್ಷೇಪಿಸಿದ್ದರು. ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕಿದ್ದ ಬಿಜೆಪಿಗರು ಬಂಡವಾಳ ಶಾಹಿಗಳ ಸಾವಿರಾರು ಕೋಟಿ ರೂ. ಸಾಲವನ್ನು ಮನ್ನಾ ಮಾಡಿದನ್ನು ಮರೆಯಲು ಸಾಧ್ಯವಿಲ್ಲ. ಆರು ತಿಂಗಳೊಳಗೆ ವಿದೇಶದಲ್ಲಿರುವ ಕಪ್ಪು ಹಣ ತರುವೆವು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ತುಂಬುವೆವು ಎಂದಿದ್ದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿ ಒಂಭತ್ತು ವರ್ಷಗಳಾದರೂ ಆ ಭರವಸೆಯನ್ನು ಈಡೇರಿಸಿಲ್ಲ. ಆದರೆ ಮತದಾನದ ಸಂದರ್ಭ ಕೈಬೆರಳಿಗೆ ಹಾಕಿದ್ದ ಶಾಯಿಯ ಗುರುತು ಮಾಸುವ ಮುನ್ನವೇ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕೆ. ಅಶ್ರಫ್, ಭಾಸ್ಕರ ಮೊಯ್ಲಿ, ಮಾಜಿ ಉಪಮೇಯರ್ ಸಲೀಂ, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಪಕ್ಷದ ಮುಖಂಡರಾದ ಟಿ.ಕೆ.ಸುಧೀರ್, ಜಯಶೀಲ ಅಡ್ಯಂತಾಯ, ಸಿಎಂ ಮುಸ್ತಫಾ, ಅಪ್ಪಿ, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಉದಯ ಆಚಾರ್, ಸುಹೈಲ್ ಕಂದಕ್, ಪೃಥ್ವಿರಾಜ್, ನಝೀರ್ ಬಜಾಲ್, ಶಬ್ಬೀರ್ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Similar News