ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯನ್ನು ಮನೆ ಮನೆಗೆ ತಲುಪಿಸಿ: ಶಾಸಕ ಅಶೋಕ್ ರೈ

ಪುತ್ತೂರು ಶಾಸಕರಿಗೆ ಅಭಿನಂದನೆ, ಕಾರ್ಯಕರ್ತ, ಮತದಾರರಿಗೆ ಕೃತಜ್ಞತೆ ಸಮಾರಂಭ

Update: 2023-06-03 12:24 GMT

ಪುತ್ತೂರು: ಕಾಂಗ್ರೆಸ್ ಸರಕಾರ ನೀಡುತ್ತಿರುವ 5 ಗ್ಯಾರಂಟಿ ಯೋಜನೆಗಳನ್ನು ಪಕ್ಷ ಬೇಧ ನೋಡದೆ ಎಲ್ಲಾ ಮನೆಗಳಿಗೆ ತಲುಪಿಸುವ ಕೆಲಸವನ್ನು ಬೂತ್ ಮಟ್ಟದ ಪ್ರಮುಖರು, ಕಾರ್ಯಕರ್ತರು ಮಾಡಬೇಕು ಹಾಗೂ ಜಾತಿ-ಧರ್ಮಗಳ ನಡುವೆ ವಿಷಬೀಜ ಬಿತ್ತುವ ಜನರ ಮನೋಸ್ಥಿತಿಯನ್ನು ಬದಲಾಯಿಸುವ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. 

ಅವರು ಶನಿವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮತ್ತು  ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಪುತ್ತೂರಿನ ಪುರಭವನದಲ್ಲಿ ನಡೆದ ಶಾಸಕ ಅಶೋಕ್‍ಕುಮಾರ್ ರೈ ಅವರಿಗೆ ಅಭಿನಂದನೆ, ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತೆ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು.

ಕ್ಷೇತ್ರದ ಎಲ್ಲರಿಗೂ ಸಮರ್ಪಕ ಕುಡಿಯುವ ನೀರು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಸುಮಾರು ರೂ. 1400 ಕೋಟಿಯ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ 6 ತಿಂಗಳಲ್ಲಿ ಇದರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. 94ಸಿ, 94ಸಿಸಿ, ಅಕ್ರಮ ಸಕ್ರಮ ಯೋಜನೆಯಡಿ ಅಗತ್ಯವಿರುವ ಅರ್ಜಿಗಳನ್ನು ಬೂತ್ ಮಟ್ಟದಿಂದ ಸಂಗ್ರಹಿಸಲಾಗುವುದು.

ಪ್ರತೀ ವರ್ಷ ಪಕ್ಷದ ವತಿಯಿಂದ ಉದ್ಯೋಗ ಮೇಳ ಮಾಡಿ ಯುವ ಜನತೆಗೆ ಶಕ್ತಿ ತುಂಬುವ, ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಜಿಲ್ಲಾ ಎಸ್ಪಿ ಕಚೇರಿಯನ್ನು ತರಿಸಿಕೊಳ್ಳುವ, ಪುತ್ತೂರನ್ನು ಜಿಲ್ಲಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ, ರೂ. 1400 ಕೋಟಿಯ ಕುಡಿಯುವ ನೀರಿನ ವ್ಯವಸ್ಥೆ ಯನ್ನು ನಾನು ಮಾಡುತ್ತೇನೆ. ಹೇಳಿದ ಮಾತನ್ನು ಈಡೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತೇನೆ. ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಬೇಕು.  

ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಗಳನ್ನು ಮತ್ತು ಮನಸ್ಸುಗಳನ್ನು ಬದಲಾಯಿಸುವ ಕೆಲಸದಿಂದಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ನಾವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇನೆ. ಬೂತ್ ಮಟ್ಟದಲ್ಲಿ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಪಕ್ಷ ಕಟ್ಟುವ,ಎಲ್ಲರ ಕೆಲಸವನ್ನೂ ಪಕ್ಷ ಭೇದವಿಲ್ಲದೆ ಮಾಡಿ ಕೊಡುವ ಮತ್ತು ಎಲ್ಲರೂ ನಮ್ಮವರೆಂದು ತಿಳಿದುಕೊಂಡು ಪಕ್ಷಕ್ಕೆ ಸೇರ್ಪಡೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. 

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಸಕರಾದ 20 ದಿನಗಳಲ್ಲಿಯೇ ಅಶೋಕ್ ರೈ ಅವರು ತಾನು ಕೊಟ್ಟ ಮಾತನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಕ್ಕಿಳಿದಿದ್ದಾರೆ. ನಿರೀಕ್ಷೆಗಿಂತಲೂ ಹೆಚ್ಚಿನ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಸಾಗಿದ್ದಾರೆ. ಮುಂದೆ ಅಶೋಕ್ ರೈ ಅವರು ರಾಜ್ಯದಲ್ಲೇ ಮಾದರಿ ಶಾಸಕರಾಗಿ ಮೂಡಿಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿರುವ ಶಾಸಕರ ನಡೆಯಿಂದಾಗಿ ಅಧಿಕಾರಿಗಳು ಜಾಗೃತರಾಗಿದ್ದಾರೆ ಎಂದರು.  

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಅವರು ಅಭಿನಂದನಾ ಭಾಷಣ ಮಾಡಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಕೆಪಿಸಿಸಿ ಸದಸ್ಯ ಎಂ.ಎಸ್.ಮಹಮ್ಮದ್ ಅವರು ಮಾತನಾಡಿದರು.

ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆಡೆಂಜಿ,  ಪಕ್ಷದ ಮುಖಂಡರಾದ ಎನ್.ಸುಧಾಕರ ಶೆಟ್ಟಿ, ಜೋಕಿಂ ಡಿಸೋಜಾ, ಮುರಳೀಧರ್ ರೈ ಮಠಂತಬೆಟ್ಟು, ಪ್ರವೀಣ್‍ಚಂದ್ರ ಆಳ್ವ, ಸುಭಾಶ್ಚಂದ್ರ ಶೆಟ್ಟಿ ಕೋಳ್ನಾಡು, ಉಮಾನಾಥ ಶೆಟ್ಟಿ ಪೆರ್ನೆ, ಉಲ್ಲಾಸ್ ಕೋಟ್ಯಾನ್, ಮಹೇಶ್ ಅಂಕೋತಿಮಾರ್, ಚಂದ್ರಹಾಸ ಶೆಟ್ಟಿ, ಶಕೂರ್ ಹಾಜಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಸನ್ನ ಕುಮಾರ್, ನೂರುದ್ದೀನ್ ಸಾಲ್ಮರ, ಕೃಷ್ಣಪ್ರಸಾದ್ ಆಳ್ವ, ರಂಜಿತ್ ಬಂಗೇರ, ಅನಿತಾ ಹೇಮನಾಥ ಶೆಟ್ಟಿ, ಫಝಲ್ ರಹೀಂ, ದುರ್ಗಾ ಪ್ರಸಾದ್ ರೈ ಕುಂಬ್ರ, ಶ್ರೀ ಪ್ರಸಾದ್ ಪಾಣಾಜೆ, ಶುಭಾಶ್ವಂದ್ರ ಶೆಟ್ಟಿ, ಜಗದೀಶ್ ಆಳ್ವ, ವೇದನಾಥ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. 

ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಭಾಸ್ಕರ ಗೌಡ ಕೋಡಿಂಬಾಳ ಸ್ವಾಗತಿಸಿ ದರು. ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಿದ್ದೀಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು. 

ಸುಳ್ಳು ಕಡಿಮೆ ಮಾಡಿ ಸಹಕಾರ ನೀಡಿ: ಮಾಜಿ ಶಾಸಕರಿಗೆ ಶಾಸಕರ ಕಿವಿಮಾತು
ಬಿಜೆಪಿ ಸರ್ಕಾರ ಇರುವಾಗಲೇ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿಕೆ ನೀಡಿರುವುದನ್ನು ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ ಅವರು  ನನಗೆ ಮೇ 13ರಂದು ಸಂಜೆ 4 ಗಂಟೆಗೆ ಶಾಸಕನ ಪ್ರಮಾಣ ಪತ್ರ ಸಿಕ್ಕಿರುವುದು. ಮೇ 18ರಂದು ಪುತ್ತೂರು ತಾಲೂಕು ಕಚೇರಿಯಲ್ಲೇ ಬಾಕಿಯಾಗಿ ಉಳಿದಿದ್ದ ಮೆಡಿಕಲ್ ಕಾಲೇಜ್ ಪ್ರಸ್ತಾವನೆಯನ್ನು ನಾನು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟು, ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿರು ವುದು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಸ್ವಲ್ಪ ಸುಳ್ಳು ಬಿಡುವುದನ್ನು ಕಡಿಮೆ ಮಾಡಿ ಸಹಕಾರ ನೀಡಿ ಎಂದು ಮಾಜಿ ಶಾಸಕರಿಗೆ ಕಿವಿಮಾತು ಹೇಳಿದರು. 

Similar News