ಸಂವಿಧಾನ ಬದಲಾಯಿಸಲು ಮುಂದಾದರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ: ನ್ಯಾ.ವಿ.ಗೋಪಾಲಗೌಡ ಎಚ್ಚರಿಕೆ

Update: 2023-06-03 15:31 GMT

ಬೆಂಗಳೂರು, ಜೂ.3: ‘ಪ್ರಜಾಪ್ರಭುತ್ವ ತತ್ವಗಳನ್ನು ಅಳವಡಿಕೊಂಡಿರುವ ಸಂವಿಧಾನವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಅದನ್ನು ಮುಟ್ಟಲು ಮುಂದಾದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ನಡೆಯಲಿದೆ’ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದ ಗಾಂಧಿ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ನೀಡಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ವಿಚಾರದಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಸಾರ್ವಭೌಮತ್ವ, ಜಾತ್ಯತೀತ, ಸಮಾಜವಾದ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ‘ಇಂದು ಸಾಮಾಜಿಕ ಮಾಧ್ಯಮಗಳ ಸುಳ್ಳು ವಿಶ್ವ ವಿದ್ಯಾಲಯಗಳು ಹುಟ್ಟಿಕೊಂಡಿವೆ. ಇವು ಸುಳ್ಳನ್ನು ಬಿತ್ತುತ್ತಿವೆ. ಇವೇ 2014ರಿಂದ ನಮಗೆ ಸ್ವತಂತ್ರ ಬಂದಿದೆ ಎಂದು ಸಮಾಜದಲ್ಲಿ ಸುಳ್ಳು ಹಬ್ಬಿಸಿವೆ. ಎಲ್.ಎಲ್.ಬೈರಪ್ಪನಂತಹ ಸಾಹಿತಿಗಳು ಮೋದಿಯ ಗುಣಗಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಾಂಗದ ಜಾಗದಲ್ಲಿ ಪಂಚಾಂಗವನ್ನು ತಂದು ಕೂರಿಸಲಾಗುತ್ತಿದೆ. ಕನ್ನಡ ಸಾಹಿತ್ಯವು ನಿರಂತರವಾಗಿ ವೈದಿಕ ಪರಂಪರೆಗೆ ವಿರೋಧವಾಗಿದೆ. ಹಾಗಾಗಿಯೇ ರಾಜ್ಯದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರಲಾಗುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ರಾಜ್ಯದಲ್ಲಿ ಕೋಮುವಾದವನ್ನು ಕೆಣಕಿದ ಕಾರಣ, ಬಿಜೆಪಿಗೆ ರಾಜ್ಯದ ಜನತೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಲೋಕಸಭೆಯಲ್ಲೂ ಅವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಅವರು ಹೇಳಿದರು. 

ಹಿಂದು ರಾಷ್ಟ್ರದ ಕಲ್ಪನೆಯನ್ನು ಮುನ್ನೆಲೆಗೆ ತಂದು ಸಂಸದೀಯ ಪದ್ದತಿಗೆ ತೊಡಕುಂಟು ಮಾಡಲಾಗುತ್ತಿದೆ. ಇದನ್ನೇ ದಲಿತ ಚಿಂತನಾ ಲೋಕ ಪುಸ್ತಕದಲ್ಲಿ ವಿವರಿಲಾಗಿದೆ ಎಂದು ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗೋಪಾಲ ದೇವನಹಳ್ಳಿ ಬರೆದಿರುವ ‘ದಲಿತ ಚಿಂತನ ಲೋಕ’, ಜಾಣಗೆರೆ ವೆಂಕಟರಾಮಯ್ಯ ಅವರ ‘ಜಾಣಗೆರೆ: 50 ಕತೆಗಳು’, ಕೆ.ಚಂದ್ರಶೇಖರ್ ಅವರ ‘ಅಂತರಾಳ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ವೇಳೆ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಎಲ್.ಎನ್. ಮುಕುಂದರಾಜ್ ಮತ್ತಿತರರು ಉಪಸ್ಥಿತರಿದ್ದರು. 

Similar News