ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ ಶಿಪ್‌: ಕಿಶೋರ್ ಕುಮಾರ್, ಕಮಲಿ ಮೂರ್ತಿ ಚಾಂಪಿಯನ್‌

Update: 2023-06-03 16:10 GMT

ಮುಲ್ಕಿ: ಮುಲ್ಕಿ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಮುಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ ಶಿಪ್‌ನ ಗ್ರೋಮ್ಸ್‌ ಮತ್ತು ಓಪನ್‌ 4ನೇ ಆವೃತ್ತಿಯಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ ಮತ್ತು ಕಮಲಿ ಮೂರ್ತಿ ಅವರು ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.

ಪುರುಷರ ಮುಕ್ತ ವಿಭಾಗದಲ್ಲಿ ಕಿಶೋರ್ 15.67 ಅಂಕಗಳನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದರ ಜೊತೆಗೆ 50 ಸಾವಿರ ರೂ. ನಗದನ್ನು ತನ್ನದಾಗಿಸಿಕೊಂಡರು. ಶ್ರೀಕಾಂತ್‌ ಡಿ. 12.90 ಅಂಕ ಪಡೆದು ರನ್ನರ್ ಅಪ್ ಪ್ರಶಸ್ತಿ ಹಾಗೂ 3 0ಸಾವಿರ ರೂ. ನಗದು ಪಡೆದುಕೊಂಡರು. ಸೂರ್ಯ ಪಿ. ಅವರು 9.14 ಅಂಕಗಳನ್ನು ಪಡೆದು ತೃತೀಯ ಸ್ಥಾನ ಮತ್ತು 20 ಸಾವಿರ ರೂ. ನಗದು ಪುರಸ್ಕಾರ ಪಡೆದುಕೊಂಡರು.

ಸರ್ಫಿಂಗ್ ಗ್ರೋಮ್ಸ್ 16 ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ ಕಿಶೋರ್ ಕುಮಾರ್ ಅವರು ಕಳೆದ ಬಾರಿಯ ಸೂರ್ಯ ಅವರ 9.14 ಅಂಕಗಳನ್ನು ಸರಿಗಟ್ಟಿ 15.07 ಅಂಕ ಪಡೆಯುವ ಮೂಲಕ ಚಾಂಪಿಯನ್ ಪಟ್ಟ ಏರಿದರೆ, ತಮಿಳುನಾಡಿನ ತಯಿನ್ ಅರುಣ್ ಅವರು 8.97 ಅಂಕ ಪಡೆದು ರನ್ನರ್ ಅಪ್ ಆಗಿ ಹೊರಹೊಮ್ಮಿದರು. 6.27 ಅಂಕಗಳೊಂದಿಗೆ ಹರೀಶ್ ಮೂರನೇ ಸ್ಥಾನ ಪಡೆದುಕೊಂಡರು.

ಕಿಶೋರ್ ಕುಮಾರ್ ಚಾಂಪಿಯನ್ ಪಟ್ಟದೊಂದಿಗೆ  20 ಸಾವಿರ ನಗದು ಪುರಸ್ಕಾರ ಹಾಗೂ ರನ್ನರ್ ಅಪ್ ತಯಿನ್ ಅರುಣ್ ದ್ವಿತೀಯ 15 ಸಾವಿರ ನಗದು ಮತ್ತು ಹರೀಶ್ ಪಿ. ಕ್ರಮವಾಗಿ ತೃತೀಯ ಸ್ಥಾನ ಮತ್ತು 10 ಸಾವಿರ ನಗದು ಬಹುಮಾನ ಪಡೆದರು.

ಮಹಿಳಾ ಮುಕ್ತ ವಿಭಾಗದಲ್ಲಿ 14 ವರ್ಷದ  ಕಮಲಿ ಮೂರ್ತಿ ಅವರು ಹಿಂದಿನ ಚಾಂಪಿಯನ್ ಶುಗರ್ ಶಾಂತಿ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿ ಮಹಿಳಾ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡು 30ಸಾವಿರ ನಗದು ಪುರಸ್ಕಾರವನ್ನು ಗಳಿಸಿದರು. ದ್ವಿತೀಯ ಸ್ಥಾನವನ್ನು ಶುಗರ್ ಶಾಂತಿ ಬನಾರ್ಸೆ ಪಡೆದುಕೊಂಡು 20,000 ನಗದು ಪುರಸ್ಕಾರ ಪಡೆದುಕೊಂಡರೆ, ಕರ್ನಾಟಕದ ಏಕೆಂಕ ಭರವಸೆಯಾಗಿದ್ದ  ಸಿಂಚನ ಗೌಡ ಅವರು ತೃತೀಯ ಸ್ಥಾನದ ಜೊತೆಗೆ ನಗದು ಪುರಸ್ಕಾರವನ್ನು ಮುಡಿಗೇರಿಸಿಕೊಂಡರು.

ಗ್ರೋಮ್ಸ್ ಬಾಲಕಿಯರ 16 ವರ್ಷ ಕೆಳಗಿನ ವಿಭಾಗದಲ್ಲಿ ಕಮಲಿ ಪ್ರಥಮ ಸ್ಥಾನ ಪಡೆದು 20,000 ನಗದು ಬಹುಮಾನ ಗೆದ್ದುಕೊಂಡರೆ, ದ್ವಿತೀಯ ಸ್ಥಾನವನ್ನು ತನಿಷ್ಕ ಪಡೆದುಕೊಂಡು 15,000 ನಗದು ಪುರಸ್ಕಾರ ಪಡೆದುಕೊಂಡರು. ತೃತೀಯ ಸ್ಥಾನವನ್ನು ಸಾನ್ವಿ ಪಡೆದುಕೊಂಡು 10 ಸಾವಿರ ನಗದು ಪುರಸ್ಕಾರಕ್ಕೆ ಭಾಜನರಾದರು.

ಓಪನ್ ಸರ್ಫ್ ವಿಭಾಗ ಮತ್ತು ಸರ್ಫಿಂಗ್ ಅಂಡರ್ 16 ಎರಡೂ ವಿಭಾಗಗಲ್ಲಿ ಕಿಶೋರ್ ಕುಮಾರ್ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡರು.

ಬಳಿಕ ಮಾತನಾಡಿದ ಅವರು, ಸರ್ಫ್ ಟರ್ಫ್ ನಲ್ಲಿ ತರಬೇತುಗೊಳಿಸಿ ಈ ಮಟ್ಟ ತಲುಪಲು ನನ್ನನ್ನು ತಯಾರು ಮಾಡಿದ ನಮ್ಮ ತರಬೇತುದಾರರಿಗೆ ಖುಣಿಯಾಗಿದ್ದೇನೆ. ಒಂದೇ ದಿನದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದಿರುವುದು ಸಂತೋಷವಾಗಿದೆ. ಮುಂದಿನ ಚಾಂಪಿಯನ್ ಶಿಪ್ ಗಳು ಮತ್ತು ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಮುಂಡ ಬೀಚ್ ನಲ್ಲಿ ನಡೆದ ಈ ಸರ್ಫಿಂಗ್ ಚಾಂಪಿಯನ್‌ ಶಿಪ್  ನನ್ನ ಆತ್ಮ ವಿಸ್ವಾಸವನ್ನು ಹೆಚ್ಚಿಸಿದೆ ಎಂದರು.

ಓಪನ್ ಸರ್ಫ್ ವಿಭಾಗ ಮತ್ತು ಸರ್ಫಿಂಗ್ ಅಂಡರ್ 16 ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡು ಮಾತನಾಡಿದ ತಮಿಳುನಾಡಿದ 14 ವರ್ಷದ ಕಮಲಿ ಮೂರ್ತಿ ಅವರು, ಮಹಿಳೆಯ ಎರಡೂ ವಿಭಾಗಗಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ತೀರ್ಪುಗಾರರಿಗೆ ನಾನು ಆಭಾರಿಯಾಗಿದ್ದೇನೆ ಎರಡು ಪ್ರಶಸ್ತಿಗಳನ್ನು ಗೆದ್ದಿರುವುದು ನನಗೆ ಅಪಾರ ಸಂತೋಷವನ್ನು ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಂಡ ಬೀಚ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜನೆ ಬದ್ಧ: ಅಭಯಚಂದ್ರ ಜೈನ್ ಭರವಸೆ

ಮುಲ್ಕಿ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಮುಲ್ಕಿ ಸಮೀಪದ ಸಸಿಹಿತ್ಲು ಮುಂಡ ಬೀಚ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್ ಶಿಪ್‌ನ ಸಮಾರೋಪ ವೇಳೆ ಮಾತನಾಡಿದ ಮಾಜಿ ಸಚಿವ ಅಭಯ ಚಂದ್ರ ಜೈನ್, ಸರ್ಫಿಂಗ್ ಕ್ರೀಡೆಗೆ ಸಸಿಹಿತ್ಲು ಮುಂಡ ಬೇಚ್ ಅತ್ಯಂತ ಉತ್ತಮ ಸ್ಥಳವಾಗಿದೆ. ಮನ್ರಾ ಸರ್ಫ್ ಕ್ಲಬ್ ಈ ಕ್ರೀಡೆಯನ್ನು ಪ್ರಾರಂಭಿಸಿ ಬೆಂಬಲಿಸಿತ್ತು. ಸಸಿಹಿತ್ಲು ಮುಂಡ ಬೀಚ್ ನಲ್ಲಿ  ಸರ್ಫಿಂಗ್ ಕ್ರೀಡೆಗೆ ಅತ್ಯುತ್ತಮ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವರನ್ನು ಕರೆಸಿ ಇಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಮಾತನಾಡಿದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ಮತ್ತು ಮಂತ್ರ ಸರ್ ಕ್ಲಬ್ ನ ಪಾಲುದಾರ ರಾಮ್ ಮೋಹನ್ ಪರಾಂಜಪೆ, ಕಠಿಣ ಮತ್ತು ಸವಾಲಿನ ಪರಿಸ್ಥಿತಿಯಲ್ಲಿಯೂ ಅತ್ಯುತ್ತಮ ಸರ್ಫಿಂಗ್ ಪ್ರದರ್ಶನವನ್ನು ಸರ್ಫರ್ ಗಳು ನೀಡಿದ್ದಾರೆ. ಚಾಂಪಿಯನ್ಶಿಪ್ ನೊಂದಿಗೆ ಉತ್ತಮ ಆರಂಭವನ್ನು ಹೊಂದಿದೆ. ಈ ಋತುವಿನಲ್ಲಿ ಅತ್ಯಂತ ಉನ್ನತ ದರ್ಜೆಯ ಚಾಂಪಿಯನ್ಶಿಪ್‌ಗಳನ್ನು ನಿರ್ವಹಿಸಲು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಮಂತ್ರ ಸರ್ಫ್ ಕ್ಲಬ್ ಬದ್ಧವಾಗಿದೆ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ನಲ್ಲಿ ಭಾಗವಹಿಸಿದ ಎಲ್ಲಾ ಸರ್ಫರ್ ಗಳನ್ನು ಅವರು ಇದೇ ವೇಳೆ ಅಭಿನಂದಿಸಿದರು.

Similar News