ಕೆಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ಸರಕಾರ ಬದ್ಧ: ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2023-06-03 16:42 GMT

ಬೆಂಗಳೂರು, ಜೂ.3: ‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ (ಕೆಟಿಸಿಎಲ್)ಗೆ ಸಮಗ್ರ ತಿದ್ದುಪಡಿಯನ್ನು ನಮ್ಮ ಸರಕಾರ ಮಾಡಲಿದ್ದು, ದಲಿತರ ರಕ್ಷಣೆಗೆ ಸದಾ ಬದ್ಧರಾಗಿದ್ದೇವೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಶನಿವಾರ ನಗರದ ಫ್ರಿಡಂಪಾರ್ಕ್‍ನಲ್ಲಿ ಕೆಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವಂತೆ 153 ದಿನಗಳಿಂದ ದಲಿತ ಸಂಘಟನೆಗಳು ನಡೆಸುತ್ತಿರುವ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈಗಾಗಲೇ ಹಿಂದೆ ಭರವಸೆ ನೀಡಿದಂತೆ ದಲಿತರ ಭೂಮಿಯ ಹಕ್ಕನ್ನು ಬಲಪಡಿಸುವ ಕೆಟಿಸಿಎಲ್ ಕಾಯ್ದೆಯ ಸಮಗ್ರ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡಲಿದೆ ಎಂದರು.

ಇದೇ ವೇಳೆ ಹೋರಾಟಗಾರರು ಸಚಿವರಿಗೆ ಹಕ್ಕೋತ್ತಾಯವನ್ನು ಮಂಡಿಸಿ, ಮನವಿ ಪತ್ರವನ್ನು ಸಲ್ಲಿಸಿದರು. ‘ಭೂಮಿ ನಮ್ಮ ಹಕ್ಕು, ಅದನ್ನು ರಕ್ಷಿಸಿಕೊಳ್ಳಲು ಕೆಟಿಸಿಎಲ್ ಕಾಯ್ದೆಯನ್ನು ಸಂರಕ್ಷಿಸಿ ಬಲಗೊಳಿಸಬೇಕಿದೆ. ಬಿಜೆಪಿ ಸರಕಾರ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ದಲಿತರ ಭೂಮಿ ಹಕ್ಕು ರಕ್ಷಣೆಗೆ ಗಂಡಾಂತರ ಒದಗಿದೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಭರವಸೆ ಇದೆ ಎಂದು ಹೋರಾಟಗಾರರು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ 1978 ಮತ್ತು 1979ರ ನಿಯಾಮಾವಳಿಗೆ ಸಮಗ್ರ ತಿದ್ದುಪಡಿ ತರಬೇಕಾಗಿದೆ. ಕಂದಾಯ ಇಲಾಖೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರ (ಕೆಟಿಸಿಎಲ್) ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಇದರ ಜವಾಬ್ದಾರಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಬೇಕು ಎಂದು ಹೋರಾಟಗಾರರು ಸಚಿವರನ್ನು ಒತ್ತಾಯಿಸಿದರು.

ಬಲಾಢ್ಯರ ಶೋಷಣೆ, ದಬ್ಬಾಳಿಕೆಗಳಿಗೆ ಒಳಗಾಗಿರುವ ದಲಿತರು ಈಗಾಗಲೇ ಶಿಕ್ಷಣ, ಆರೋಗ್ಯ, ವಸತಿ ಮತ್ತಿತರರ ಪ್ರಮುಖ ಸಂಪನ್ಮೂಲಗಳಿಂದ ವಂಚಿತರಾಗಿದ್ದಾರೆ. ಇನ್ನೂ ದಲಿತರ ಭೂಮಿ ರಕ್ಷಿಸುವ ವಿಚಾರದಲ್ಲಿ ಇತ್ತಿಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಶೋಷಿತ ದಲಿತ ಸಮುದಾಯದಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಆದುದರಿಂದ ರಾಜ್ಯ ಸರಕಾರ ಕೂಡಲೇ ಕಾಯ್ದೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ್, ಹೆಬ್ಬಾಳ ವೆಂಕಟೇಶ್, ಡಿ.ಜಿ.ಸಾಗರ್, ಬಸವರಾಜ ಕೌತಾಳ್, ಅಂಬಣ್ಣ ಆರೋಲಿಕರ್, ಮಂಜು, ಮುನಿಸ್ವಾಮಿ ಸೇರಿದಂತೆ ಇನ್ನಿತರ ಮತ್ತಿತರರು ಉಪಸ್ಥಿತರಿದ್ದರು. 

Similar News