ಪರಿಸರ ಸಂರಕ್ಷಣೆ ಕೇವಲ ಮಾತಿನ ಬಡಾಯಿಯಾಗದಿರಲಿ

Update: 2023-06-03 19:30 GMT

ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ಶಾಲಾ ಶಿಕ್ಷಣ ಪಡೆಯುತ್ತಾರೆ. ಇವರೆಲ್ಲರೂ ಬಳಸಿ ಬಿಸಾಡುವ ಪೆನ್ನುಗಳನ್ನು ಲೆಕ್ಕಾಚಾರ ಮಾಡಿದರೆ ಅಚ್ಚರಿ ಎನಿಸುತ್ತದೆ. ಬಹುತೇಕವಾಗಿ ಈ ಪೆನ್‌ಗಳನ್ನು ಬಳಸಿದ ನಂತರ ಬಿಸಾಡುತ್ತಾರೆ. ಇಷ್ಟು ಪ್ರಮಾಣದ ಪೆನ್ನುಗಳು ಪ್ರತಿವರ್ಷ ಚರಂಡಿ ಸೇರುತ್ತವೆ. ಅಲ್ಲಿಂದ ಭೂಮಿ ಅಥವಾ ನೀರಿನ ಮೂಲಗಳಲ್ಲಿ ಸಂಚಯಗೊಳ್ಳುತ್ತವೆ. ಇದರಿಂದ ಮಣ್ಣು ಮತ್ತು ನೀರು ಕಲುಷಿತಗೊಳ್ಳುತ್ತದೆ. ಬಳಸಿದ ಪೆನ್ನುಗಳನ್ನು ಬಿಸಾಡುವ ಬದಲು ಅವುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವಂತಾದರೆ ಪರಿಸರಕ್ಕೆ ಪೂರಕವಾಗಬಹುದಲ್ಲವೇ?


ಮೊನ್ನೆ ಸಂಜೆ ವಾಕಿಂಗ್ ಹೋದಾಗ ಬಾಲ್ಯದ ಹಳ್ಳ ನೆನಪಾಯಿತು. ನಾವು ಬಾಲಕರಿದ್ದಾಗ ನಮ್ಮೂರಿನಲ್ಲಿ ಹಬ್ಬ, ಜಾತ್ರೆಗಳು ಬಂದವು ಅಂದರೆ ಒಂದು ತಿಂಗಳ ಮುಂಚಿತವಾಗಿ ತಯಾರಿ ಪ್ರಾರಂಭ ಆಗುತ್ತಿತ್ತು. ಹಬ್ಬಕ್ಕೆ ಬಟ್ಟೆ ಹಾಗೂ ಹಾಸಿಗೆಗಳನ್ನೆಲ್ಲ ಮಡಿ ಮಾಡುವ (ತೊಳೆಯುವ) ಕೆಲಸ. ಇಡೀ ಊರಿನ ಬಟ್ಟೆ ಹಾಗೂ ಹಾಸಿಗೆಗಳನ್ನು ಮಡಿ ಮಾಡುವ ಏಕೈಕ ತಾಣ ಅಂದರೆ ಅದು ನಮ್ಮೂರಿನ ಹಳ್ಳ. ನಾವು ಬಾಲಕರಿದ್ದಾಗ ವರ್ಷಪೂರ್ತಿ ಹಳ್ಳ ಹರಿಯುತ್ತಿತ್ತು. ಹಬ್ಬದ ಮುನ್ನಾ ದಿನಗಳಲ್ಲಿ ಹಳ್ಳ ಜನಗಳಿಂದ ಗಿಜಿಗುಡುತ್ತಿತ್ತು. ಈ ಹಳ್ಳಕ್ಕೆ ಜಾತಿ ಧರ್ಮದ ಅಮಲು ಇರ್ಲಿಲ್ಲ. ಎಲ್ಲಾ ಧರ್ಮ ಜಾತಿಯವರೂ ಅಲ್ಲಿಗೆ ಬಂದು ತಮ್ಮ ಕೊಳೆಯನ್ನು ಕಳಕೊಳ್ಳುತ್ತಿದ್ದರು.

ಎರಡು ಮೂರು ದಶಕಗಳ ಹಿಂದೆ ಹಳ್ಳಗಳು ಪ್ರತೀ ಊರಿನ ಜೀವನಾಡಿ ಆಗಿದ್ದವು. ಆದರೆ ಈಗ ಹಳ್ಳಗಳು ಕೇವಲ ಹೆಸರಿಗೆ ಮಾತ್ರ. ಅಲ್ಲಿ ನೀರು ಹರಿಯುವುದು ಮಳೆ ಬಂದಾಗ ಮಾತ್ರ. ಆದರೆ ಸಂಜೆ ವಾಕಿಂಗ್ ಹೋದಾಗ ಹಳ್ಳ ಇನ್ನೂ ಹರಿಯುತ್ತ ಇರುವುದು ಕಂಡು ಖುಷಿಯಾಯಿತು. ಹಾಗೆಯೇ ರಸ್ತೆ ಬಿಟ್ಟು ಹಳ್ಳದ ನೀರಿನಲ್ಲಿ ಕಾಲಿಟ್ಟೆ. ಆಹಾ! ಎರಡೂ ಕಾಲುಗಳನ್ನು ಪವಿತ್ರ ನದಿಯಲ್ಲಿಟ್ಟಷ್ಟು ಖುಷಿಯಾತು. (ಈಗ ನದಿಗಳೆಲ್ಲವೂ ಕಲುಷಿತ ಆಗಿ ಯಾವ ನದಿಯೂ ಪವಿತ್ರ ಆಗಿ ಉಳಿದಿಲ್ಲ). ಕಾಲಿಗೆ ಆದ ತಣ್ಣನೆಯ ಅನುಭವದಿಂದ ಮನಸ್ಸು ತಣ್ಣಗಾಯಿತು. ಬೊಗಸೆಯಲ್ಲಿ ನೀರು ಹಿಡಿದುಕೊಂಡೆ. ತಿಳಿನೀರು. ಹಾಗೆಯೇ ಬಾಯಿಗೆ ಹಾಕಿಕೊಂಡೆ. ಅದೇ ರುಚಿ. ಎರಿ ಮಣ್ಣಿನ ಘಮಲು ಬಾಯಿಗೆ ಮೆತ್ತಿಕೊಂಡಂತಾಯಿತು.

ಹಳ್ಳದ ಗುಂಟ ಸಾಗಿದಾಗ ಅಲ್ಲಿ ಕಂಡು ಬಂದ ದೃಶ್ಯ ಕಸಿವಿಸಿ ಎನಿಸಿತು. ಕುರುಚಲು ಗಿಡಗಳಲ್ಲಿ ಸಿಕ್ಕಿಹಾಕಿಕೊಂಡ ಪ್ಲಾಸ್ಟಿಕ್ ರಕ್ಕಸನನ್ನು ನೋಡಿ ಮನಸ್ಸಿಗೆ ಬೇಸರ ಆಯಿತು. ಅಭಿವೃದ್ಧಿಯ ಹೆಸರಲ್ಲಿ ನಮ್ಮ ಹಳ್ಳಿಯ ಜೀವನಾಡಿಗಳು ಎನಿಸಿಕೊಂಡಿದ್ದ ಹಳ್ಳಗಳ ತುಂಬ ಪ್ಲಾಸ್ಟಿಕ್ ರಾಕ್ಷಸ ತುಂಬಿಕೊಂಡಿರುವುದು ದುರಂತವಲ್ಲವೇ? ಇದು ಕೇವಲ ನನ್ನ ಹಳ್ಳಿಯ ಹಳ್ಳದ ಸ್ಥಿತಿಯಲ್ಲ. ಬಹುತೇಕ ಹಳ್ಳಗಳ ಪಾಡೂ ಇದೇ ಆಗಿದೆ. ಹಳ್ಳಗಳೆಲ್ಲ ಚರಂಡಿ ನೀರು ಹರಿಯುವ ಕೊಳಚೆ ಕಾಲುವೆಗಳಾಗಿವೆ. ಪರಿಸರ ಸಂರಕ್ಷಣೆಯ ಕುರಿತು ನಾವಿಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುತ್ತಿದ್ದೇವೆ. ಹವಾಮಾನ ವೈಪರೀತ್ಯದ ಬಗ್ಗೆ ದಿನಗಟ್ಟಲೆ ಮಾತನಾಡುವ ನಾವು ನಮ್ಮ ಹಳ್ಳಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದೇವೆ. ನಮ್ಮ ಸುತ್ತಲೂ ಇರುವ ಗಿಡ, ಮರ, ಪ್ರಾಣಿ, ಪಕ್ಷಿಗಳು, ಜೀವಜಗತ್ತು, ಕೆರೆ, ಹಳ್ಳ, ನದಿ, ಗುಡ್ಡ, ಬೆಟ್ಟ, ಕಣಿವೆ ಇವುಗಳನ್ನು ಕಡೆಗಣಿಸಿಸುತ್ತಿದ್ದೇವೆ. ಕೇವಲ ಗಿಡಮರಗಳು ಮಾತ್ರ ಪರಿಸರ ಎಂಬ ಭೂತ ನಮ್ಮ ತಲೆಯಲ್ಲಿ ತುಂಬಿಕೊಂಡಿವೆ. ನಮ್ಮ ಪ್ರತೀ ನಡವಳಿಕೆ, ನಾವು ಕೈಗೊಳ್ಳುವ ಪ್ರತೀ ಚಟುವಟಿಕೆ ಪರಿಸರಕ್ಕೆ ಮಾರಕ ಎಂಬುದನ್ನು ಮರೆಯುತ್ತಿದ್ದೇವೆ.

ಕೈಗಾರಿಕಾ ಕ್ರಾಂತಿಯ ನಂತರ ನಮ್ಮ ಜೀವನವು ವೇಗ ಪಡೆದುಕೊಂಡಿದ್ದೇನೋ ನಿಜ. ಆದರೆ ಆ ವೇಗದಲ್ಲಿ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಂಡಿದ್ದು ಮಾತ್ರ ದುರಂತ. ಅಂದು ಆಹಾರದ ಪ್ರಮುಖ ಸ್ಥಾನದಲ್ಲಿದ್ದ ಕೃಷಿಯು ಈಗ ಕಚ್ಚಾ ಸಾಮಗ್ರಿಗಳ ಉತ್ಪಾದನಾ ಕೇಂದ್ರವಾಗಿದೆ. ಉತ್ಪಾದನೆಯನ್ನು ಹೆಚ್ಚಿಸಲು ಬಳಸುವ ರಸಗೊಬ್ಬರಗಳು, ಕೀಟನಾಶಕಗಳು ಭೂಮಿಯನ್ನು ಕಲುಷಿತಗೊಳಿಸುವ ಮೂಲಕ ಪರಿಸರಕ್ಕೆ ಮಾರಕವಾಗುತ್ತಿವೆ ಎಂಬ ಸತ್ಯ ಅರಿವಿದ್ದರೂ ಅದರಿಂದ ಹೊರ ಬರಲಾರದ ಹಂತ ತಲುಪಿದ್ದೇವೆ. ಔದ್ಯೋಗೀಕರಣದ ಪ್ರಭಾವದಿಂದ ಬಳಕೆಯಾದ ಇಂಗಾಲಾಧಾರಿತ ಇಂಧನಗಳು ಪರಿಸರ ಮಾಲಿನ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದರೂ ಅವುಗಳ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ತಾಪಮಾನ ಏರುತ್ತಲೇ ಇದೆ. ಕರ್ನಾಟಕದಲ್ಲಿ 46 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾದರೂ ನಾವಿನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಪರಿಸರ ಸಂರಕ್ಷಣೆ ಎಂದರೆ ಜೂನ್ 5ರ ಆಚರಣೆ ಮಾತ್ರವಲ್ಲ. ಪ್ರತಿದಿನವೂ ಪರಿಸರ ದಿನವಾಗಬೇಕು. ಅಂದರೆ ನಮ್ಮ ನಡವಳಿಕೆ, ಆಚರಣೆಗಳು ಪರಿಸರಕ್ಕೆ ಪೂರಕವಾಗುವಂತೆ ಇರಬೇಕಾದುದು ಅಗತ್ಯವಿದೆ. ಕೇವಲ ಗಿಡಮರಗಳಿಗೆ ನೀರೆರೆದು ಫೋಟೊ ತೆಗೆಸಿಕೊಂಡರೆ ಸಾಲದು. ಆ ಗಿಡಮರಗಳು ನೂರಾರು ವರ್ಷಗಳವರೆಗೆ ಬೆಳೆದು ನಿಂತು ಸಾವಿರಾರು ಜೀವಿಗಳಿಗೆ ಆಶ್ರಯ ತಾಣಗಳಂತಾಗಬೇಕು. ಆಗ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ. ಪ್ರತಿಯೊಬ್ಬ ಪ್ರಜೆಯೂ ವರ್ಷಪೂರ್ತಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು.

ಪ್ರತೀ ಮಗುವಿನ ಹೆಸರಿನಲ್ಲಿ ಒಂದೊಂದು ಗಿಡನೆಟ್ಟು ಬೆಳೆಸಿದರೆ ಹತ್ತು ವರ್ಷಗಳಲ್ಲಿ ಒಂದೊಂದು ಹಳ್ಳಿಯೂ ಒಂದೊಂದು ಅರಣ್ಯ ಪ್ರದೇಶವಾಗುವುದು. ಪ್ರತೀ ಮಗುವಿನ ಹುಟ್ಟುಹಬ್ಬ ಆಚರಿಸಿದಾಗಲೂ ಒಂದೊಂದು ಪರಿಸರಕ್ಕೆ ಪೂರಕ ಚಟುವಟಿಕೆ ಕೈಗೊಂಡಾಗ ಮಕ್ಕಳ ಭವಿಷ್ಯ ಸುಂದರವಾಗುತ್ತದೆ. ಮಕ್ಕಳಿಗೆ ವಾರಕ್ಕೊಮ್ಮೆ ಒಬ್ಬೊಬ್ಬ ಪರಿಸರ ಯೋಧರನ್ನು ಪರಿಚಯಿಸುವುದರಿಂದ ಮುಂದೆ ಅವರೂ ಪರಿಸರ ಯೋಧರಾಗಲು ಸಹಾಯವಾಗುತ್ತದೆ. ಪರಿಸರ ಸಂರಕ್ಷಣೆ ಕುರಿತು ತಾತ್ವಿಕ ಬೋಧನೆಗಿಂತ ಪ್ರಾಯೋಗಿಕ ಪಾಠ ಮಕ್ಕಳಲ್ಲಿ ಪರಿಸರ ಮೌಲ್ಯವನ್ನು ಬೆಳೆಸುತ್ತದೆ. ಮಕ್ಕಳಿಗೆ ಸಣ್ಣ ಸಣ್ಣ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯವನ್ನು ತಿಳಿಸಬೇಕು. ಉದಾಹರಣೆಗೆ ಕಳೆದ ವರ್ಷದಿಂದ ನಮ್ಮ ಶಾಲೆಯಲ್ಲಿ ಒಂದು ವಿನೂತನ ಚಟುವಟಿಕೆ ಅನುಸರಿಸಿದ್ದೇವೆ. ಕಳೆದ ವರ್ಷದಿಂದ ಮಕ್ಕಳು ಬರೆದು ಬಿಸಾಡುವ ಪೆನ್‌ಗಳನ್ನು ಸಂಗ್ರಹಿಸಿದ್ದೇವೆ.

ಒಂದು ಅಂದಾಜಿನಂತೆ ಪ್ರತೀ ಮಗುವು ತಿಂಗಳಿಗೆ ಕನಿಷ್ಠ 4 ಪೆನ್ ಬಳಸುತ್ತದೆ. ಹತ್ತು ತಿಂಗಳಿಗೆ 40 ಪೆನ್ನುಗಳು. 200 ಮಕ್ಕಳಿಗೆ 8,000 ಪೆನ್ನುಗಳು. ಇದು ಒಂದು ಸಣ್ಣ ಶಾಲೆಯ ಮಕ್ಕಳು ಬಳಸುವ ಪೆನ್‌ಗಳ ಸಂಖ್ಯೆ. ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ಶಾಲಾ ಶಿಕ್ಷಣ ಪಡೆಯುತ್ತಾರೆ. ಇವರೆಲ್ಲರೂ ಬಳಸಿ ಬಿಸಾಡುವ ಪೆನ್ನುಗಳನ್ನು ಲೆಕ್ಕಾಚಾರ ಮಾಡಿದರೆ ಅಚ್ಚರಿ ಎನಿಸುತ್ತದೆ. ಬಹುತೇಕವಾಗಿ ಈ ಪೆನ್‌ಗಳನ್ನು ಬಳಸಿದ ನಂತರ ಬಿಸಾಡುತ್ತಾರೆ. ಇಷ್ಟು ಪ್ರಮಾಣದ ಪೆನ್ನುಗಳು ಪ್ರತಿವರ್ಷ ಚರಂಡಿ ಸೇರುತ್ತವೆ. ಅಲ್ಲಿಂದ ಭೂಮಿ ಅಥವಾ ನೀರಿನ ಮೂಲಗಳಲ್ಲಿ ಸಂಚಯಗೊಳ್ಳುತ್ತವೆ. ಇದರಿಂದ ಮಣ್ಣು ಮತ್ತು ನೀರು ಕಲುಷಿತಗೊಳ್ಳುತ್ತದೆ. ಬಳಸಿದ ಪೆನ್ನುಗಳನ್ನು ಬಿಸಾಡುವ ಬದಲು ಅವುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವಂತಾದರೆ ಪರಿಸರಕ್ಕೆ ಪೂರಕವಾಗಬಹುದಲ್ಲವೇ? ಇಂತಹ ಸಣ್ಣ ಸಣ್ಣ ಕಾರ್ಯ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಪ್ರಾಯೋಗಿಕ ಪಾಠ ಹೇಳುವ ಮೂಲಕ ಅವರನ್ನು ಪರಿಸರ ಯೋಧರನ್ನಾಗಿ ಮಾಡಬಹುದು. ಅಲ್ಲವೇ?

Similar News