ಮಂಗಳೂರು ಸೆಂಟ್ರಲ್-ಯಶವಂತಪುರ ಮಾರ್ಗದ ವಿಶೇಷ ರೈಲಿನ ಓಡಾಟಕ್ಕೆ ವಿರೋಧ

Update: 2023-06-04 14:13 GMT

ಮಂಗಳೂರು, ಜೂ.4: ಪಾಲಕ್ಕಾಡ್ ರೈಲ್ವೆ ವಿಭಾಗವು ಪ್ರಸ್ತಾಪಿಸಿರುವ ಮಂಗಳೂರು ಸೆಂಟ್ರಲ್-ಯಶವಂತಪುರ ನಡುವೆ ‘ಶೋರಣುರು’ ಮಾರ್ಗವಾಗಿ ಓಡಲಿರುವ ವಿಶೇಷ ರೈಲಿಗೆ ಪಾಲಕ್ಕಾಡ್ ರೈಲ್ವೆ ವಿಭಾಗೀಯ ಬಳಕೆ ದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಸ್ತಾವಿತ ರೈಲನ್ನು ಹಾಸನ-ಅರಸೀಕೆರೆ ಮೂಲಕ ಓಡಿಸಲು ಮನವಿ ಮಾಡಿದ್ದಾರೆ.

ದಕ್ಷಿಣ ರೈಲ್ವೆ ವಲಯವು ಪ್ರಯಾಣಿಕರ ದಟ್ಟಣೆ ನೀಗಿಸಲು ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರಿನ ಯಶವಂತಪುರಕ್ಕೆ ಕೇರಳದ ಪಾಲಕ್ಕಾಡ್ ಜಂಕ್ಷನ್ ಮೂಲಕ ಸಾಪ್ತಾಹಿಕ ವಿಶೇಷ ರೈಲು ಓಡಿಸುವ ಪ್ರಸ್ತಾವನೆ ಮಾಡಿದೆ. ಮಂಗಳೂರು ಸೆಂಟ್ರಲಿನಿಂದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ವಾರದಲ್ಲಿ ಎರಡು ಬಾರಿ ವಿಶೇಷ ರೈಲಿನ ಓಡಾಕ್ಕೂ ಪ್ರಸ್ತಾವಿಸಿದೆ. ಆದರೆ ಪ್ರಸ್ತಾವಿತ ರೈಲುಗಳು ಮಂಗಳೂರಿನ ಸಾರ್ವಜನಿಕರ ಬಳಕೆಗೆ ಹೆಚ್ಚು ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಸ್ತಾವಿತ ಮಂಗಳೂರು ಸೆಂಟ್ರಲ್-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಸೇವೆಯು ಹಾಸನ-ಬೆಂಗಳೂರು ಮಾರ್ಗದ ಬದಲಿಗೆ ಸುತ್ತು ಹಾಕಿ ಹೋಗುವ ಶೊರನೂರು, ಪಾಲಕ್ಕಾಡ್ ಮಾರ್ಗದಲ್ಲಿ ಚಲಿಸಲು ಪ್ರಸ್ತಾಪಿಸ ಲಾಗಿದೆ. ಈ ರೈಲು ಕಣ್ಣೂರಿನಾಚೆ ಬೆಂಗಳೂರು ಕಡೆಗೆ ಮತ್ತು ಹಿಂತಿರುಗುವ ಪ್ರಯಾಣಿಕರಿಗೆ ಮಾತ್ರ ಉಪಯುಕ್ತ ವಾಗಿದೆ. ವಾರಕ್ಕೊಮ್ಮೆ ಸಂಚರಿಸುವ ರೈಲು ಸಂ. 16565/66 ಮಂಗಳೂರು ಸೆಂಟ್ರಲ್-ಯಶವಂತಪುರ ಜಂ. ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ಕಣ್ಣೂರು ಮತ್ತು ಬೆಂಗಳೂರು ನಡುವೆ ಮಾತ್ರ ಉತ್ತಮವಾದ ಬೇಡಿಕೆಯಿದೆ.

ಪ್ರಸ್ತುತ ಹಾಸನ ಮೂಲಕ ಓಡುತ್ತಿರುವ ರೈಲು ಸಂ. 16511/12 ಕಣ್ಣೂರು-ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ (ವಯಾ ಕುಣಿಗಲ್) ಹಾಗು ರೈಲು ಸಂ. 16585/86 ಮಂಗಳೂರು ಸೆಂಟ್ರಲ್-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಬಹುಬೇಡಿಕೆಯಿದೆ. ಹೀಗಾಗಿ ಮಂಗಳೂರು-ಬೆಂಗಳೂರು ನಡುವೆ ಇನ್ನೊಂದು ರೈಲಿನ ಅವಶ್ಯಕತೆಯಿದೆ. ಅಲ್ಲದೆ ಪ್ರಸ್ತುತ ಮಂಗಳೂರಿನಿಂದ-ಹಾಸನ, ಅರಸೀಕೆರೆ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಯಾವುದೇ ರೈಲು ಸೇವೆ ಇಲ್ಲ. ಹಾಗಾಗಿ  ಈ ಮಾರ್ಗದ ಮೂಲಕವು ರೈಲು ಸಂಚಾರವಾಗಬೇಕಿದೆ. ದಕ್ಷಿಣ ರೈಲ್ವೆ ಉದ್ದೇಶಿಸಿರುವ ಮಂಗಳೂರು ಸೆಂಟ್ರಲ್-ಯಶವಂತ ಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಪಾಲಕ್ಕಾಡ್-ಶೋರಣುರು ಮಾರ್ಗದ ಬದಲು ಹಾಸನ, ಅರಸೀಕೆರೆ, ತುಮಕೂರು ಮಾರ್ಗದ ಮೂಲಕ ಓಡಿಸಬೇಕು ಎಂದು ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಹನುಮಂತ ಕಾಮತ್  ಮನವಿ ಸಲ್ಲಿಸಿದ್ದಾರೆ.

Similar News