ಟೋಯಿಂಗ್ ವಾಹನ ಢಿಕ್ಕಿ: ಅಪರಿಚಿತ ಮೃತ್ಯು

Update: 2023-06-04 16:03 GMT

ಮಂಗಳೂರು, ಜೂ.4: ರಾ.ಹೆ.66ರ ಕಲ್ಲಾಪು ಸಮೀಪದ ಯುನಿಟಿ ಹಾಲ್ ಬಳಿ ಟೋಯಿಂಗ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದಾಗಿ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಜೂ.2ರಂದು ರಾತ್ರಿ 7:30ಕ್ಕೆ ಸುಮಾರು 60 ವರ್ಷ ಪ್ರಾಯದ ವ್ಯಕ್ತಿ ರಸ್ತೆ ದಾಟುವಾಗ ಟೋಯಿಂಗ್ ವಾಹನ ವೊಂದು ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಅಪರಿಚಿತ ವ್ಯಕ್ತಿಯನ್ನು ಟೋಯಿಂಗ್ ವಾಹನದ ಚಾಲಕ ಶಿವರಾಜ್ ಆಳ್ವ ರಿಕ್ಷಾವೊಂದರಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ರಾತ್ರಿ ಸುಮಾರು 10:45ರ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

5.9 ಅಡಿ ಎತ್ತರದ, ಕುತ್ತಿಗೆಯ ಮೇಲೆ ಕಪ್ಪು ಎಳ್ಳು ಮಚ್ಚೆ ಇರುವ ಈ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ದೂ.ಸಂ: 0824- 2220850ನ್ನು ಸಂಪರ್ಕಿಸಬಹುದು. ಘಟನೆಯ ಬಗ್ಗೆ ಅಬ್ದುಲ್ ಮತೀನ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News