ಕೋರಮಂಡಲ ಎಕ್ಸ್ಪ್ರೆಸ್ ಮಿತಿ ಮೀರಿದ ವೇಗದಲ್ಲಿ ಓಡುತ್ತಿರಲಿಲ್ಲ; ಹಸಿರು ಸಿಗ್ನಲ್ ಕೂಡಾ ಪಡೆದಿತ್ತು

ರೈಲ್ವೆ ಅಧಿಕಾರಿಗಳ ಸ್ಪಷ್ಟನೆ

Update: 2023-06-04 16:05 GMT

ಹೊಸದಿಲ್ಲಿ:  ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ  ಶುಕ್ರವಾರ  ಭೀಕರವಾಗಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್  ಮಿತಿ ಮೀರಿದ ವೇಗದಿಂದ ಓಡುತ್ತಿರಲಿಲ್ಲ ಹಾಗೂ ಸರಕುಸಾಗಣೆಯ ರೈಲು  ನಿಂತಿದ್ದ ಲೂಪ್ಲೈನ್ ಹಳಿಯನ್ನು ಪ್ರವೇಶಿಸಲು ಅದಕ್ಕೆ ಹಸಿರು ಸಿಗ್ನಲ್ ದೊರೆತಿತ್ತೆಂದು, ರೈಲ್ವೆ ಇಲಾಖೆಯು ರವಿವಾರ ತಿಳಿಸಿದೆ.  ಇದರೊಂದಿಗೆ  275 ಮಂದಿಯನ್ನು ಬಲಿತೆಗೆದುಕೊಂಡ ಈ ರೈಲು ದುರಂತದಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಚಾಲಕನ  ಪಾತ್ರವನ್ನು ಅದು ಸ್ಪಷ್ಟವಾಗಿ ನಿರಾಕರಿಸಿದಂತಾಗಿದೆ.

ರೈಲು ಹಳಿಯ ಇಂಟರ್ಲಾಕಿಂಗ್  ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿನ  ಲೋಪವು ಈ ದುರಂತಕ್ಕೆ  ಕಾರಣವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ರೈಲ್ವೆ ಇಲಾಖೆಯ ಪ್ರಧಾನ ಕಾರ್ಯಕಾರಿ ನಿರ್ದೇಶಕ ಸಂದೀಪ್ ಮಾಥುರ್ ಹಾಗೂ   ರೈಲ್ವೆ ಇಲಾಖೆಯ ಕಾರ್ಯನಿರ್ವಹಣೆ ಹಾಗೂ ಔದ್ಯಮಿಕ ಅಭಿವೃದ್ಧಿಯ ಸದಸ್ಯ ಜಯಾ ವರ್ಮಾ ಸಿನ್ಹಾ ಅವರು ವಿವರಿಸಿದ್ದಾರೆ.

‌ಕೋರಮಂಡಲ್ ಎಕ್ಸ್‌ಪ್ರೆಸ್ ಸಾಗುವ ದಿಕ್ಕು, ಪಥ ಹಾಗೂ ಸಿಗ್ನಲ್ ಅನ್ನು ಸಮರ್ಪಕವಾಗಿ ನಿಗದಿಪಡಿಸಲಾಗಿತ್ತೆಂದು ಸಿನ್ಹಾ ತಿಳಿಸಿದರು.

 ‘‘ಗ್ರೀನ್ ಸಿಗ್ನಲ್ ನೀಡಿದಾಗ ರೈಲು ಚಾಲಕನಿಗೆ  ರೈಲು ಸಾಗುವ ಮಾರ್ಗವು  ಮುಕ್ತವಾಗಿದೆ ಹಾಗೂ ಅನುಮತಿಸಲ್ಪಟ್ಟ ಗರಿಷ್ಠ ವೇಗದಲ್ಲಿ ತಾನು ಮುಂದಕ್ಕೆ ಚಲಿಸಬಹುದಾಗಿದೆ ಎಂಬುದು  ಅರಿವಾಗುತ್ತದೆ.  ಬಾಲಸೋರ್ ಸೆಕ್ಷನ್ ನಲ್ಲಿ  ರೈಲು ಸಂಚಾರಕ್ಕೆ ಗರಿಷ್ಠ ವೇಗದ ಮಿತಿಯನ್ನು ತಾಸಿಗೆ 130 ಕಿ.ಮೀ. ಎಂದು ನಿಗದಿಪಡಿಸಲಾಗಿದೆ. ದುರಂತ ಸಂಭವಿಸಿದಾಗ ಆತ ತನ್ನ ರೈಲನ್ನು ತಾಸಿಗೆ 128 ಕಿ.ಮೀ. ವೇಗದಲ್ಲಿ   ಓಡಿಸುತ್ತಿದ್ದನು  ಎಂಬುದನ್ನು  ಕಂಡುಕೊಂಡಿದ್ದೇವೆ’ ಎಂದು  ಜಯವರ್ಮಾ ಸಿನ್ಹಾ ಹೇಳಿದ್ದಾರೆ.

ಅದೇ ರೀತಿ ಬೆಂಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್‌ಪ್ರೆಸ್ ರೈಲು ತಾಸಿಗೆ 126 ಕಿ.ಮೀ. ವೇಗದಲ್ಲಿ ಓಡುತ್ತಿತ್ತು ಎಂಬುದು ಕೂಡಾ ತಿಳಿದುಬಂದಿದೆಯೆಂದವರು ಹೇಳಿದರು.

‘‘ ಈ ಎರಡೂ ರೈಲು, ಮಿತಿ ಮೀರಿದ ವೇಗದಲ್ಲಿ ಓಡಿರುವ ಪ್ರಶ್ನೆಯೇ ಬರುವುದಿಲ್ಲ.  ಆದಾಗ್ಯೂ ಪ್ರಾಥಮಿಕ ತನಿಖೆಯಲ್ಲಿ ಸಿಗ್ನಲಿಂಗ್ ನೀಡಿಕೆಯಲ್ಲಿ ಸಮಸ್ಯೆಯುಂಟಾಗಿದೆಯೆಂದು ತಿಳಿದುಬಂದಿದೆ  ’’ಎಂದು ಸಿನ್ಹಾ ತಿಳಿಸಿದರು.

‘‘ಈ ಅವಘಡದಲ್ಲಿ ಕೇವಲ ಕೋರ ಮಂಡಲ್ ಎಕ್ಸ್‌ಪ್ರೆಸ್ ರೈಲು ಮಾತ್ರ  ಶಾಮೀಲಾಗಿದೆ. ಕೋರಮಂಡಲಎಕ್ಸ್‌ಪ್ರೆಸ್ ರೈಲು  ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಹಾಗೂ ಅದರ ಕೋಚ್ ಗಳು ಗೂಡ್ಸ್ ರೈಲಿನ ಮೇಲೆಯೂ ಬಂದು ಬಿದ್ದಿವೆ.   ಗೂಡ್ಸ್ ರೈಲಿನಲಿ ಕಬ್ಬಿಣದ ಆದಿರುತುಂಬಲಾಗಿದ್ದು, ಅದೊಂದು ಭಾರೀ ಗಾತ್ರದ ರೈಲಾಗಿದೆ. ಹೀಗಾಗಿ ಅವಘಡದ ಇಡೀ ಪರಿಣಾಮ ಕೋರಮಂಡಲ್ ಎಕ್ಸ್‌ಪ್ರೆಸ್ ಮೇಲೆ ಆಗಿದೆ’’ ಎಂದು ಸಿನ್ಹಾ ತಿಳಿಸಿದರು.

ರೈಲು ಅವಘಡಕ್ಕೆ ಕಾರಣವಾದ ಎರಡು ಪ್ರಮುಖ ಕಾರಣಗಳನ್ನು  ರೈಲ್ವೆ ಸಿಗ್ನಲಿಂಗ್ ನ ಪ್ರಧಾನ ಕಾರ್ಯಕಾರಿ ನಿರ್ದೇಶಕ ಸಂದೀಪ್ ಮಾಥುರ್ ಅವರು   ವಿವರಿಸಿದ್ದು, ಒಂದು ವೇಳೆ ರೈಲು ಪ್ರವೇಶಿಸಬೇಕಾದರೆ, ಅಲ್ಲಿರುವ ಪಾಯಿಂಟ್ ಯಂತ್ರವು ಕಾರ್ಯಾಚರಿಸಬೇಕಿದೆ. ಇದರೊಂದಿಗೆ ರೈಲು ಸಿಗ್ನಲಿಂಗ್ ವ್ಯವಸ್ತೆಯು , ಮುಂದಿರುವ ಮಾರ್ಗವು ಖಾಲಿಯಿದೆಯೇ ಅಥವಾ ಇಲ್ಲವೇ ಎಂಬುದನ್ನು  ಅದು ತೋರಿಸುತ್ತದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’’ ಎಂದವರು ಹೇಳಿದ್ದಾರೆ.

Similar News