ಬಿಜೆಪಿಯಿಂದ ವಿದ್ಯುತ್ ದುಂದುವೆಚ್ಚಕ್ಕೆ ಕುಮ್ಮಕ್ಕು: ಸಿಎಂ ಸಿದ್ದರಾಮಯ್ಯ ಆರೋಪ

Update: 2023-06-05 07:24 GMT

ಬೆಂಗಳೂರು, ಜೂ.5: ವಿದ್ಯುತ್ ನ್ನು ಅನಗತ್ಯ ದುರ್ಬಳಕೆ-ದುಂದುವೆಚ್ಚ-ದುರುಪಯೋಗ ಮಾಡಲು ಬಿಜೆಪಿ ಕುಮ್ಮಕ್ಕು ನೀಡುತ್ತಿದೆ. ಇದು ಅತ್ಯಂತ ಜನವಿರೋಧಿಯಾದದ್ದು. ನಾಡಿನ ಪ್ರಜ್ಞಾವಂತ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವ ಭರವಸೆ ನಮಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ-2023 ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಬಳಿಕ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ನಾವು ಅಗತ್ಯಕ್ಕೆ ತಕ್ಕಂತೆ ಬಳಸಲು ನಾಡಿನ ಜನತೆಗೆ ನೆರವಾಗುತ್ತೇವೆ. ದುಂದುವೆಚ್ಚ-ದುರುಪಯೋಗಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಕಷ್ಟದಲ್ಲಿರುವ ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗಾಗಿ ನಾವು ಉಚಿತ ವಿದ್ಯುತ್ ನೀಡಲು ಮುಂದಾಗಿದ್ದೇವೆ. ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ10 ರಷ್ಟು ಹೆಚ್ಚು ಉಚಿತ ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ. ಇದನ್ನು ನಾಡಿನ ಜನತೆ ಸಂಭ್ರಮದಿಂದ ಒಪ್ಪಿಕೊಂಡಿದ್ದಾರೆ ಮತ್ತು ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.

ಪರಿಸರ ಉಳಿಸುವುದು, ಕಾಡು ಬೆಳೆಸುವುದು ಮತ್ತು ಉಳಿಸುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯ ಅಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪ್ರಕೃತಿ ಉಳಿಸುವ ಜವಾಬ್ದಾರಿ ಇದೆ ಎಂದರು.

ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಅರಣ್ಯ ಮತ್ತು ಪರಸರ ಸಚಿವ ಈಶ್ವರ್ ಖಂಡ್ರೆ, ಸಚಿವರಾದ ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಶಾಸಕ ಎ.ಸಿ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

Similar News