ಬಡವರ, ಸಾಮಾಜಿಕ ನ್ಯಾಯದ ವಿರುದ್ಧ ಬಿಜೆಪಿ ಪ್ರತಿಭಟನೆ: ಐವನ್ ಡಿಸೋಜ

Update: 2023-06-05 10:18 GMT

ಮಂಗಳೂರು, ಜೂ.5: ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿರುವುದು ಕರ್ನಾಟಕದ ಮತದಾರರ ಮತ್ತು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಈಗಿನ ಪ್ರತಿಭಟನೆಯು ಬಡವರ ಮತ್ತು ಜನಸಾಮಾನ್ಯರ ವಿರುದ್ಧ ಅಗಿದೆ ಎಂದು ಅಭಿಪ್ರಾಯಪಟ್ಟರು.

 ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಸೇರಿದಂತೆ ಐದು ಯೋಜನೆಗಳನ್ನು ಮತದಾರರು ಮತದಾನ ಮಾಡಿದ ಗುರುತು ಬೆರಳಿನಿಂದ ಅಳಿಸಿ ಹೋಗುವ ಮೊದಲೇ ನೂತನ ಸರಕಾರ ಅನುಷ್ಠಾನ ಮಾಡುವ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ, ನುಡಿದಂತೆ ನಡೆದಿದೆ ಎಂದರು.

ನಾಲ್ಕು ವರ್ಷಗಳ ಕಾಲ ಬಿಜೆಪಿ ರಾಜ್ಯ ದಲ್ಲಿ ಆಡಳಿತದಲ್ಲಿದ್ದಾಗ  ಹಿಂದು, ಮುಸ್ಲಿಮ್, ಕ್ರೈಸ್ತ, ಪುಸ್ತಕ ಪರಿಷ್ಕರಣೆ, ಸಾವರ್ಕರ್, ಟಿಪ್ಪು, ಗೋಹತ್ಯೆ ನಿಷೇಧ, ಫೈರಿಂಗ್, ಅನೈತಿಕ ಪೊಲೀಸ್ ಗಿರಿ, ಸಿಎ ಎನ್ಆರ್ ಸಿ ವಿಚಾರಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು. ಆದರೆ ಈಗ ಕಾಂಗ್ರೆಸ್ ಆಡಳಿತದಲ್ಲಿ ಜನರಿಗೆ ಅಗತ್ಯದ ರೇಶನ್ ಕಾರ್ಡ್, ವಿದ್ಯುತ್, ಆರೋಗ್ಯ, ಮಹಿಳಾ ಸಬಲೀಕರಣ, ಉದ್ಯೋಗ, ಶಿಕ್ಷಣ ಇವುಗಳ ಬಗ್ಗೆ ಚರ್ಚೆ ಆಗುತ್ತಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ‌‌. ಬಿಜೆಪಿ ಆಡಳಿತದಲ್ಲಿ ಜನರಿಗೆ ಅಗತ್ಯವಿಲ್ಲದ, ಜನಜೀವನಕ್ಕೆ ಸಂಬಂಧವಿಲ್ಲದ ಅನವಶ್ಯಕ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಆ ಅವಧಿಯಲ್ಲಿ ಶ್ರೀ ಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಬಡವರು  ಇನ್ನಷ್ಟು ಕೆಳಕ್ಕೆ ತಳ್ಳಲ್ಪಟ್ಟು ಕಷ್ಟ ಅನುಭವಿಸಿದ್ದಾರೆ ಎಂದು ಐವನ್ ಆರೋಪಿಸಿದರು.

ಪ್ರಧಾನಿ ಮೋದಿ ರಾಜಸ್ಥಾನಕ್ಕೆ ಹೋಗಿ ಕಾಂಗ್ರೆಸ್ ನ ಯೋಜನೆಗಳನ್ನು ಬೋಗಸ್ ಎಂದು ವ್ಯಂಗ್ಯ ವಾಡಿದರು. ಜನರಿಗೆ ಸಿಗುವ ಯೋಜನೆಗಳನ್ನು  ಪ್ರಧಾನಿಯವರು ಈ ರೀತಿ ಮಾತನಾಡಬಾರದಿತ್ತು. ಹೀಗಿರುವಾಗ ದೇಶದ ಪ್ರಧಾನಿಯಾಗಿ ಮೋದಿ ಅವರ ಬದ್ಧತೆ ಏನು ಪ್ರಶ್ನಿಸಿದರು.

ಚುನಾವಣೆ ಫಲಿತಾಂಶ ಬಂದು ಇಷ್ಟು ದಿನವಾಗಿದ್ದರೂ ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕನ ಆಯ್ಕೆಯನ್ನು ಮಾಡುವ ಯೋಗ್ಯತೆ ಬಿಜೆಪಿಗೆ ಇಲ್ಲದಾಗಿದೆ. ರಾಜ್ಯದಲ್ಲಿ ಬಿಜೆಪಿ ನಿಷ್ಕ್ರಿಯವಾಗಿದೆ.  ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ನೋಡಿ ಬಿಜೆಪಿಗೆ ಹೊಟ್ಟೆಉರಿ ಶುರುವಾಗಿದೆ. ಬಿಜೆಪಿ ನಾಯಕರು ಈಗ ಪ್ರತಿಭಟನೆಗೆ ಮುಂದಾಗಿದ್ದಾರೆ. ನೀವು ಜನರಿಗೆ ಮೋಸ ಮಾಡಲು ಪ್ರತಿಭಟನೆ ಮಾಡುವುದು ಬೇಡ‌. ಜನಪರ ಯೋಜನೆಗಳನ್ನು ಜಾರಿಗೊಳಿಸಲು ನಮ್ಮ ಜೊತೆ ಕೈಜೋಡಿಸಿ ಎಂದು ಬಿಜೆಪಿ ನಾಯಕರಿಗೆ  ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಕುಂಜತ್ತಬೈಲು, ಸಲೀಂ, ಭಾಸ್ಕರ, ಸಿರಾಜ್, ಇಮ್ರಾನ್, ವಿಕಾಸ್ ಶೆಟ್ಟಿ, ಹುಸೈನ್ ಉಪಸ್ಥಿತರಿದ್ದರು.

Similar News