ತಡವಾಗಿ ಬಂದ ಡಿಕೆಶಿ; ಬಿಜೆಪಿ ಶಾಸಕರಿಂದ ಸರ್ವಪಕ್ಷಗಳ ಸಭೆ ಬಹಿಷ್ಕಾರ

Update: 2023-06-05 15:22 GMT

ಬೆಂಗಳೂರು, ಜೂ.5: ಬೆಂಗಳೂರು ಅಭಿವೃದ್ಧಿ, ಮಳೆ, ಪ್ರವಾಹ ಕುರಿತು ಏರ್ಪಡಿಸಿದ್ದ ಸರ್ವಪಕ್ಷಗಳ ಸಭೆಗೆ ಅಧ್ಯಕ್ಷತೆ ವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಡವಾಗಿ ಬಂದ ಹಿನ್ನೆಲೆ ಬಿಜೆಪಿ ಪಕ್ಷದ ಹಲವು ಶಾಸಕರು ಸಭೆಯಿಂದ ಹೊರಬಂದು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಸೋಮವಾರ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿತ್ತು.ಆದರೆ, ನಿಗದಿತ ಸಮಯಕ್ಕೆ ಸಭೆ ಆರಂಭವಾಗದ ಕಾರಣ, ಅಸಮಾಧಾನಗೊಂಡ ಮಾಜಿ ಸಚಿವರಾದ ಅಶ್ವತ್ಥ ನಾರಾಯಣ, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಮುನಿರತ್ನ, ಶಾಸಕ ಎಸ್.ಆರ್.ವಿಶ್ವನಾಥ್ ಸಭಾತ್ಯಾಗ ಮಾಡಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ ನಾರಾಯಣ, ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿತ್ತು. ಆದರೆ ಡಿಸಿಎಂ ನಮ್ಮನ್ನು ಸಭೆಗೆ ಕರೆದು ಒಂದು ಗಂಟೆಗಳಿಂದ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಆಗಮಿಸಿದ್ದಾರೆ. ಇದು ಕಾಟಾಚಾರಕ್ಕೆ ಕರೆದಿದ್ದು, ಅವರೇ ಬೇಜಾವಾಬ್ದಾರಿತನದಿಂದಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಭೈರತಿ ಬಸವರಾಜು ಮಾತನಾಡಿ, ಸುಮಾರು ಒಂದು ಗಂಟೆಯಾದರೂ ಸಭೆ ಆರಂಭವಾಗಿಲ್ಲ. ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಆಗಮಿಸಿದ್ದೇವು. ಆದರೆ ಸಭೆ ನಡೆಯುವುದೇ ತಡವಾಗಿದೆ ಎಂದು ಬೇಸರ ವ್ಯಕ್ತಪಡಿಸದರು.

ಮತ್ತೊಂದೆಡೆ, ಐವರು ಬಿಜೆಪಿ ಶಾಸಕರು ಸಭೆ ವಿಳಂಬ ಹಿನ್ನೆಲೆ ಸಭಾತ್ಯಾಗ ಮಾಡಿದರೆ, ಇತ್ತ ಇತರ ಬೆಂಗಳೂರು ಬಿಜೆಪಿ ಶಾಸಕರು, ಸಂಸದರು ಸಭೆಯಲ್ಲಿ ಭಾಗಿಯಾದರು. ಅದರಲ್ಲೂ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಬಿಜೆಪಿ ಶಾಸಕರಾದ ರವಿಸುಬ್ರಮಣ್ಯ, ಮಂಜುಳಾ, ಉದಯ್ ಗರುಡಾಚಾರ್, ಎಂ.ಕೃಷ್ಟಪ್ಪ, ಮಾಜಿ ಸಚಿವ ಗೋಪಾಲಯ್ಯ, ಸಿ.ಕೆ.ರಾಮಮೂರ್ತಿ ಸಭೆಯಲ್ಲಿದ್ದರು.

ಝಮೀರ್ ಮನವೊಲಿಕೆ..!: ಕೆಲ ಬಿಜೆಪಿ ಶಾಸಕರು ಸಭಾತ್ಯಾಗ ಮಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಹೊರ ಬಂದು ಶಾಸಕರ ಮನವೊಲಿಕೆಗೆ ಯತ್ನಿಸಿದರು. ಆದರೆ ಬಿಜೆಪಿ ಶಾಸಕರು ಸಮಾಧಾನವಾಗದೇ ಹೊರ ನಡೆದರು.

Similar News