ಬ್ರಿಜ್ ಭೂಷಣ್ ಸಿಂಗ್‍ ಬಂಧಿಸಲು ಒತ್ತಾಯಿಸಿ ಬೆಂಗಳೂರಿನಲ್ಲಿ ಧರಣಿ

Update: 2023-06-05 17:59 GMT

ಬೆಂಗಳೂರು, ಜೂ.5: ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ಹಾಗೂ ಕಾನ್ಫ್‍ರೆನ್ಸ್ ಆಫ್ ರಿಲಿಜಿಯಸ್ ಇಂಡಿಯಾ ನೇತೃತ್ವದಲ್ಲಿ ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ ಭಾರತೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಆರೋಪಿಯ ವಿರುದ್ದ ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ ಎಂದು ಧರಣಿನಿರತರು ದೂರಿದರು.  

‘ಸಮ್ಮತಿ ಇಲ್ಲದೆ ಸ್ಪರ್ಶಿಸುವುದು, ಹಿಂಬಾಲಿಸುವುದು ಮತ್ತು ಬೆದರಿಸುವುದು ಕುಸ್ತಿಪಟುಗಳಲ್ಲಿ ಭಯವನ್ನು ಉಂಟು ಮಾಡಿದೆ. ಹಾಗಾಗಿ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು. ನಿರಂತರವಾಗಿ ಪ್ರತಿಭಟನೆ ಮಾಡುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟದಲ್ಲಿ ನ್ಯಾಯ ಅಡಗಿದೆ. ಹಾಗಾಗಿ ದೇಶದ ವಿವಿಧ ಭಾಗಗಳಲ್ಲಿ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಸರಕಾರವು ಇದರಿಂದ ಎಚ್ಚೆತ್ತುಕೊಂಡು ಪ್ರಕರಣವನ್ನು ತನಿಖೆಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಧರಣಿಯಲ್ಲಿ ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂನ ಅಧ್ಯಕ್ಷ ಆಂಥೋಣಿ ವಿಕ್ರಂ, ಸಿಸ್ಟರ್ ನಿರ್ಮಲಿನಿ, ವಕೀಲ ಡಾ.ಸಿ.ಎಸ್.ದ್ವಾರಕನಾಥ್, ನರಸಿಂಹಮೂರ್ತಿ, ಎದ್ದೇಳು ಕರ್ನಾಟಕದ ನೂರ್ ಶ್ರೀಧರ್, ಮನೋಹರ್ ಚಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. 

Similar News