ಎಲ್ಲರನ್ನೂ ಬೆಸೆಯುವ ಮಾನವೀಯತೆಯ ನಿಜ ಕೇರಳ ಸ್ಟೋರಿ

Update: 2023-06-05 18:46 GMT

ನಿಜವಾದ ಕೇರಳ ಸ್ಟೋರಿಯಲ್ಲಿ ಮನುಷ್ಯರಷ್ಟೇ ಇರುತ್ತಾರೆ. ಆ ಮನುಷ್ಯರು ಪರಸ್ಪರರನ್ನು ಅವರ ಧರ್ಮ, ಜಾತಿ ನೋಡದೆ ಪ್ರೀತಿಸುತ್ತಾರೆ.
ಇದು ಸುಳ್ಳಿನ ಮೂಲಕ ದೇಶವನ್ನು ಒಡೆಯಲು ಹೊರಟಿರುವವರಿಗೆ ಈ ದೇಶದ ಸೌಹಾರ್ದ ಕಲಿಸುವ ಪಾಠ. ಕೋಮುದ್ವೇಷದ ರಾಜಕೀಯಕ್ಕಾಗಿ ಜನರನ್ನು ವಿಭಜಿಸಲು ಎಷ್ಟೇ ಪ್ರಯತ್ನಿಸಿದರೂ ಈ ದೇಶದ ಸೌಹಾರ್ದ ಗಟ್ಟಿಯಾಗಿಯೇ ಉಳಿಯಲಿದೆ. ಕೊನೆಗೂ ಕೋಮುವಾದ ಸೋಲಲಿದೆ.


ದ್ವೇಷ ಪ್ರಚಾರಕರ, ಸುಳ್ಳು ಹರಡುವವರ, ಕೋಮು ದ್ವೇಷಿಗಳ ನಿರಂತರ ಅಪಪ್ರಚಾರಗಳ ನಡುವೆ ಸೌಹಾರ್ದವೇ ಈ ದೇಶದ ಸತ್ವ ಎನ್ನುವುದನ್ನು ಕೇರಳ ಮತ್ತೊಮ್ಮೆ ಸಾಬೀತುಪಡಿಸಿದೆ.
ಹಸಿ ಸುಳ್ಳುಗಳ ‘ಕೇರಳ ಸ್ಟೋರಿ’ ಸಿನೆಮಾ ಪ್ರಚಾರ ಪಡೆಯುತ್ತಿರುವಾಗಲೇ ರಿಯಲ್ ಕೇರಳ ಸ್ಟೋರಿಯೊಂದು ಜನರ ಮನೆ ಮನಗಳನ್ನು ತಲುಪುತ್ತಿದೆ. ಮನಸ್ಸಿಗೆ ಮುದ ನೀಡುವ ಈ ಘಟನೆಯಲ್ಲಿರುವುದು ದಿವೇಶ್ ಲಾಲ್ ಮತ್ತು ಮುನವ್ವರಲಿ ಶಿಹಾಬ್ ತಂಙಳ್ ಎನ್ನುವ ಇಬ್ಬರು ಅಪ್ಪಟ ಮನುಷ್ಯರು.

ಕೋಮುವಾದಕ್ಕೆ ಪ್ರತಿರೋಧ ಒಡ್ಡುವ, ಫ್ಯಾಶಿಸಂನ್ನು ವಿರೋಧಿಸುವ ಕೇರಳ ಸಂಘ ಪರಿವಾರದ ಟಾರ್ಗೆಟ್. ಆದರೆ ಜನರನ್ನು ಒಡೆಯುವ ಎಲ್ಲ ಯತ್ನಗಳ ನಂತರವೂ ಕೇರಳ ಕೋಮು ಸೌಹಾರ್ದವನ್ನು ಗಟ್ಟಿಯಾಗಿ ಅಪ್ಪಿಕೊಂಡಿದೆ. ಕೇರಳದ ಹೆಸರಿಗೆ ಮಸಿ ಬಳಿಯುವ ಸಂಘಪರಿವಾರದ ಅಪಪ್ರಚಾರದ ಭಾಗವಾಗಿ ಬಂದದ್ದೇ ‘ದ ಕೇರಳ ಸ್ಟೋರಿ’ ಎನ್ನುವ ಸಿನೆಮಾ. ಟೀಸರ್‌ನಿಂದ ಹಿಡಿದು ಸಿನೆಮಾದವರೆಗೆ ಎಲ್ಲದರಲ್ಲೂ ಸುಳ್ಳನ್ನಷ್ಟೇ ಒಳಗೊಂಡ ಈ ಚಿತ್ರದ ನಿರ್ದೇಶಕ 32 ಸಾವಿರ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬುದು ಸುಳ್ಳೆಂದು ತಾನೇ ಒಪ್ಪಿಕೊಂಡು 3ಕ್ಕೆ ಇಳಿಸಿದ್ದು ಎಲ್ಲರಿಗೂ ಗೊತ್ತು. ಹಿಂದುತ್ವ ಕಾರ್ಯಕರ್ತರು, ಬಿಜೆಪಿ ಬೆಂಬಲಿಗರ ನೆಚ್ಚಿನ ಚಿತ್ರವಾಗಿರುವ ‘ದ ಕೇರಳ ಸ್ಟೋರಿ’ಯ ಅಂಕಿ ಅಂಶಗಳ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸಲು ಮಾತ್ರ ಯಾರೂ ಇಲ್ಲ.
ಕೇರಳ ಕುರಿತ ಈ ರೀತಿಯ ಸುಳ್ಳು ಪ್ರಚಾರಗಳ ನಡುವೆ ಖತರ್ ಜೈಲಿನಿಂದ ಬಿಡುಗಡೆಯಾಗಿ ತಾಯ್ನಡು ಕೇರಳ ತಲುಪಿದ ದಿವೇಶ್ ಲಾಲ್ ಪ್ರಕರಣದಲ್ಲಿ ಮಾನವೀಯತೆಯ ಪಾಠವಿದೆ.

ದಿವೇಶ್ ಲಾಲ್ ಮಲಪ್ಪುರಂ ಜಿಲ್ಲೆಯ ಪಟ್ಟಿಕ್ಕಾಡ್ ಮೂಲದ ಬಡ ಕುಟುಂಬಕ್ಕೆ ಸೇರಿದವರು. ಮನೆ ನಿರ್ಮಾಣಕ್ಕಾಗಿ ಸ್ಥಳೀಯ ಬ್ಯಾಂಕ್‌ನಿಂದ ಪಡೆದಿದ್ದ 10 ಲಕ್ಷ ರೂ. ಸಾಲ ಮರುಪಾವತಿಸಲು ಖತರ್‌ಗೆ ಹೋಗುತ್ತಾರೆ. ಅಲ್ಲಿ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತ, 10 ಲಕ್ಷ ರೂ. ಸಾಲ ತೀರಿಸಿ ಕುಟುಂಬದ ಸ್ಥಿತಿ ಸುಧಾರಿಸುವ ಕನಸು ಕಂಡಿದ್ದ ದಿವೇಶ್ ಲಾಲ್ ಬದುಕಲ್ಲಿ ಜನವರಿ 8ರಂದು ಆಘಾತಕಾರಿ ಘಟನೆಯೊಂದು ನಡೆಯುತ್ತದೆ.

ಅಂಗಡಿಗೆ ಹೋಗಲು ದಿವೇಶ್ ತಾನು ಚಲಾಯಿಸುತ್ತಿದ್ದ ಟ್ಯಾಂಕರನ್ನು ರಸ್ತೆ ಬದಿ ನಿಲ್ಲಿಸಿದ್ದಾಗ ಅದು ಹಿಂದಕ್ಕೆ ಚಲಿಸಿ ಈಜಿಪ್ಟ್ ಪ್ರಜೆಯೊಬ್ಬರಿಗೆ ಢಿಕ್ಕಿ ಹೊಡೆಯುತ್ತದೆ. ಆ ವ್ಯಕ್ತಿ ಸಾವನ್ನಪ್ಪುತ್ತಾರೆ. ಇದರಿಂದಾಗಿ ದಿವೇಶ್ ಜೈಲು ಪಾಲಾಗುತ್ತಾರೆ. 2 ಆಯ್ಕೆಗಳನ್ನು ಮುಂದಿಡಲಾಗುತ್ತದೆ. ಜೈಲು ಶಿಕ್ಷೆ ಅನುಭವಿಸುವುದು ಅಥವಾ ಈಜಿಪ್ಟ್ ಪ್ರಜೆಯ ಕುಟುಂಬಕ್ಕೆ 46 ಲಕ್ಷ ರೂ. ಪರಿಹಾರ ನೀಡುವುದು. ಮೇ 14ರ ಮೊದಲು ಈ ಹಣವನ್ನು ಪಾವತಿಸಬೇಕಾಗಿರುತ್ತದೆ. ಮೊದಲೇ ಬಡ ಕುಟುಂಬ. 10 ಲಕ್ಷ ರೂ. ಸಾಲ ಬೇರೆ. ಮನೆಯಲ್ಲಿ ಪತ್ನಿ ಮಗು, ಹೆತ್ತವರು. ದಿವೇಶ್ ಕುಟುಂಬದ ನೋವಿನ ಕಥೆ ಗೊತ್ತಾದ ಕೂಡಲೇ ಮುಸ್ಲಿಮ್ ಯೂತ್ ಲೀಗ್ ರಾಜ್ಯ ಮುಖ್ಯಸ್ಥ ಮುನವ್ವರ್ ಅಲಿ ಶಿಹಾಬ್ ತಂಙಳ್ ಸಹಾಯ ಅಭಿಯಾನ ಆರಂಭಿಸುತ್ತಾರೆ.

ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಪಕ್ಷದ ಜೊತೆ ಸಂಪರ್ಕವಿರುವ ಕತರ್‌ನ ಮಲಯಾಳಿ ಉದ್ಯಮಿಯೊಬ್ಬರು 16 ಲಕ್ಷ ರೂ. ಹಣ ನೀಡುತ್ತಾರೆ. ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ 4 ಲಕ್ಷ ರೂ. ನೀಡಿದರೆ, ಮಲಪ್ಪುರಂನ ಕತರ್‌ನಲ್ಲಿ ನೆಲೆಸಿರುವ ಅನಿವಾಸಿ ಉದ್ಯಮಿಗಳು 6 ಲಕ್ಷ ರೂಪಾಯಿ ನೀಡುತ್ತಾರೆ. ಶಿಹಾಬ್ ತಂಙಳ್ ನೀಡಿದ ಕರೆಗೆ ಸ್ಪಂದಿಸಿ ಎಲ್ಲ ಧರ್ಮ, ಜಾತಿಗಳ ಜನರು ದಿವೇಶ್ ಬಿಡುಗಡೆಗಾಗಿ ಕೈಜೋಡಿಸುತ್ತಾರೆ. ಮತ್ತೆ 20 ಲಕ್ಷ ರೂ. ಸಂಗ್ರಹವಾಗುತ್ತದೆ.
ಸಂಗ್ರಹಿಸಿದ ಹಣ ಕತರ್ ತಲುಪಿ ಕಾನೂನು ಪ್ರಕ್ರಿಯೆಗಳು ಮುಗಿದು ದಿವೇಶ್ ಲಾಲ್ ಬಿಡುಗಡೆಗೊಂಡಿದ್ದಾರೆ. 2 ವರ್ಷಗಳ ನಂತರ ಇದೇ ಜೂನ್ 3ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣದ ಮೂಲಕ ತಾಯ್ನಾಡು ಸೇರಿದ್ದಾರೆ.

ಊರಿಗೆ ಬಂದ ತಕ್ಷಣ ದಿವೇಶ್ ಲಾಲ್ ಮತ್ತು ಕುಟುಂಬ ಮಾಡಿದ ಮೊದಲ ಕೆಲಸ ಮುನವ್ವರ್ ಅಲಿ ಶಿಹಾಬ್ ತಂಙಳ್‌ರನ್ನು ಭೇಟಿಯಾಗಿ, ಸಹಾಯಕ್ಕಾಗಿ ಧನ್ಯವಾದ ತಿಳಿಸಿದ್ದು. ಅವರನ್ನು ಅಷ್ಟೇ ಆತ್ಮೀಯವಾಗಿ ಬರಮಾಡಿಕೊಂಡು ಮಾತಾಡುತ್ತಾರೆ ತಂಙಳ್.
ಇಲ್ಲಿ ಶಿಹಾಬ್ ತಂಙಳ್ ಮತ್ತು ಸಹಾಯ ಮಾಡಿದ ಜನರ ಧರ್ಮ ಬೇರೆ, ದಿವೇಶ್ ಅವರ ಧರ್ಮ ಬೇರೆ. ಆದರೆ ಎಲ್ಲರನ್ನೂ ಒಂದುಗೂಡಿಸಿದ್ದು ಮಾನವೀಯತೆ ಮಾತ್ರ. ಈ ಮಾನವೀಯತೆಗೆ ದ್ವೇಷದ ಅರಿವಿಲ್ಲ. ದ್ವೇಷದ ರಾಜಕೀಯದ ಲಾಭವೂ ಬೇಕಾಗಿಲ್ಲ.

ಈ ಹಿಂದೆ ಕೋಟಕ್ಕಲ್‌ನಲ್ಲಿ ಮೀಲಾದುನ್ನಬಿ ಆಚರಣೆ ಅಂಗವಾಗಿ ಮುಸ್ಲಿಮರು ವಿಶೇಷಚೇತನ ಲಕ್ಷ್ಮೀ ಎಂಬ ಮಹಿಳೆಯೊಬ್ಬರಿಗೆ 1 ಲಕ್ಷ ರೂ. ಸಹಾಯ ಮಾಡಿದ್ದರು. ತ್ರಿಶೂರಿನ ಒಲರಿಕ್ಕರದ ಭಗವತಿ ದೇವಸ್ಥಾನ ಸಮಿತಿಯು ದೇವಸ್ಥಾನದ ಮೈದಾನದಲ್ಲಿ ಮಿಲಾದ್ ಆಚರಣೆಗೆ ಅವಕಾಶ ನೀಡಿ ಮುಸ್ಲಿಮರ ರ್ಯಾಲಿಯನ್ನು ಸ್ವಾಗತಿಸಿದ ಘಟನೆ ನಡೆದದ್ದೂ ಇದೇ ಕೇರಳದಲ್ಲಿ.

ಮಲಪ್ಪುರಂನ ಎರಡು ದೇವಸ್ಥಾನಗಳಾದ ಶ್ರೀ ಪುದುವೆಪ್ಪುಮನ್ನಾಲಿಯರ್ ಕಾವು ಭಗವತಿ ದೇವಸ್ಥಾನ ಮತ್ತು ತಿರೂರಿನ ಚತ್ತಂಗಡು ಶ್ರೀ ಮಹಾವಿಷ್ಣು ದೇವಸ್ಥಾನ ಸಮಿತಿಗಳು ಮುಸ್ಲಿಮರಿಗಾಗಿ ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಿ ಸೌಹಾರ್ದ ಮೆರೆದಿದ್ದವು. ಮಲಪ್ಪುರಂನ ತಾನೂರಿನ ತುಂಚನ್ ಪರಂಬದ ಶ್ರೀ ಕುರುಂಬ ಭಗವತಿ ದೇವಸ್ಥಾನದಲ್ಲಿ, ಪ್ರಧಾನ ಅರ್ಚಕರನ್ನು ನೇಮಕ ಮಾಡುವುದು ಇಂದಿಗೂ ಒಂದು ಮುಸ್ಲಿಮ್ ಕುಟುಂಬದ ಮುಖ್ಯಸ್ಥರು. ಕೋಮು ಸೌಹಾರ್ದಕ್ಕೆ ಮತ್ತೊಂದು ಅತ್ಯುತ್ತಮ ಉದಾಹರಣೆ ವಲಂಚೇರಿ ವೂನ್ನಕ್ಕಲ್ ಜುಮಾ ಮಸೀದಿ. ಹಿಂದೂ, ಮುಸ್ಲಿಮ್, ಕ್ರೈಸ್ತರೆನ್ನದೆ ಪ್ರತೀ ವಾರ ಈ ಮಸೀದಿಯಲ್ಲಿ ಬಡವರಿಗೆ ಅಕ್ಕಿ ವಿತರಿಸಲಾಗುತ್ತದೆ. ಸುಮಾರು 20 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೋಟಕ್ಕಲ್‌ನ ಪಾಲಪ್ಪುರ ಜುಮಾ ಮಸೀದಿಯ ಮಿಂಬರ್ ಅಥವಾ ಪ್ರವಚನ ಪೀಠವನ್ನು ಕೊಡುಗೆಯಾಗಿ ನೀಡಿದವರು ಕೋಟಕ್ಕಲ್ ಆರ್ಯ ವೈದ್ಯ ಶಾಲಾದ ಸಂಸ್ಥಾಪಕ ಬಿ.ಎಸ್. ವಾರಿಯರ್.

2020ರ ಜನವರಿ ತಿಂಗಳಲ್ಲಿ ಆಲಪ್ಪುಳದ ಕಾಯಂಕುಳಂನ ಚೆರುವಳ್ಳಿ ಮುಸ್ಲಿಮ್ ಜಮಾಅತ್ ಮಸೀದಿಯಲ್ಲಿ ಹಿಂದೂ ವಿಧಿ ವಿಧಾನ, ಸಂಪ್ರದಾಯದಂತೆ ಮದುವೆಯೊಂದು ನಡೆಯುತ್ತದೆ. ಈ ವಿಶಿಷ್ಟ ಮದುವೆಯಲ್ಲಿ ಎಲ್ಲ ಧರ್ಮಗಳ ಜನರೂ ಭಾಗವಹಿಸುತ್ತಾರೆ. ವಧು ಅಂಜು ಅವರ ತಂದೆ ಮೃತಪಟ್ಟಿದ್ದು, ಕುಟುಂಬದ ಪರಿಸ್ಥಿತಿ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿತ್ತು. ಮದುವೆ ಮಾಡಲು ಹಣವಿಲ್ಲ ಎಂದು ಅಂಜು ತಾಯಿ ಮಸೀದಿ ಸಮಿತಿಯನ್ನು ಸಂಪರ್ಕಿಸುತ್ತಾರೆ. ಮದುವೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ ಮಸೀದಿ ಸಮಿತಿ ವಧುವಿಗೆ 2 ಲಕ್ಷ ರೂ., 10 ಪವನ್ ಚಿನ್ನ ಉಡುಗೊರೆಯಾಗಿ ನೀಡುತ್ತದೆ. ಹಿಂದೂ ಸಂಪ್ರದಾಯದಂತೆ ಮಸೀದಿ ಆವರಣದಲ್ಲೇ ಮದುವೆಯೂ ನಡೆಯುತ್ತದೆ.

ಇಂತಹ ಸಾವಿರಾರು ಸೌಹಾರ್ದದ ಕಥೆಗಳಿಗೆ ನಿರಂತರ ಸಾಕ್ಷಿಯಾಗುತ್ತಿದೆ ಕೇರಳ. ಕರ್ನಾಟಕದ ಹಾಗೆಯೇ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕೇರಳದ ಹೆಸರಿಗೆ ಮಸಿ ಬಳಿಯಲು ಸಂಘಪರಿವಾರ ನಿರಂತರ ಪ್ರಯತ್ನಿಸುತ್ತಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಕೇರಳದಲ್ಲಿ ತಳವೂರಿದ ನಂತರದಿಂದ ಕೋಮುದ್ವೇಷ ಹರಡುವ ಯತ್ನವನ್ನು ನಡೆಸುತ್ತಲೇ ಇವೆ. ಆದರೆ ಕೇರಳಿಗರು ಸಂಘಪರಿವಾರದ ಷಡ್ಯಂತ್ರಕ್ಕೆ ಸೊಪ್ಪುಹಾಕಿಲ್ಲ.
ನಿಜವಾದ ಕೇರಳ ಸ್ಟೋರಿಯಲ್ಲಿ ಮನುಷ್ಯರಷ್ಟೇ ಇರುತ್ತಾರೆ. ಆ ಮನುಷ್ಯರು ಪರಸ್ಪರರನ್ನು ಅವರ ಧರ್ಮ, ಜಾತಿ ನೋಡದೆ ಪ್ರೀತಿಸುತ್ತಾರೆ.
ಇದು ಸುಳ್ಳಿನ ಮೂಲಕ ದೇಶವನ್ನು ಒಡೆಯಲು ಹೊರಟಿರುವವರಿಗೆ ಈ ದೇಶದ ಸೌಹಾರ್ದ ಕಲಿಸುವ ಪಾಠ. ಕೋಮುದ್ವೇಷದ ರಾಜಕೀಯಕ್ಕಾಗಿ ಜನರನ್ನು ವಿಭಜಿಸಲು ಎಷ್ಟೇ ಪ್ರಯತ್ನಿಸಿದರೂ ಈ ದೇಶದ ಸೌಹಾರ್ದ ಗಟ್ಟಿಯಾಗಿಯೇ ಉಳಿಯಲಿದೆ. ಕೊನೆಗೂ ಕೋಮುವಾದ ಸೋಲಲಿದೆ.

Similar News