ಒಡಿಶಾ ರೈಲು ದುರಂತ: ಕೋರಮಂಡಲ ಎಕ್ಸ್ ಪ್ರೆಸ್ ರೈಲಿನಲ್ಲಿದ್ದ ಕನಿಷ್ಠ 40 ಮಂದಿ ವಿದ್ಯುತ್ ಸ್ಪರ್ಶದಿಂದ ಸಾವು; ವರದಿ

Update: 2023-06-06 03:44 GMT

ಭುವನೇಶ್ವರ: ಬಲಸೋರ್ ನ ತ್ರಿವಳಿ ರೈಲು ದುರಂತದಲ್ಲಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ಹಳಿತಪ್ಪಿದ ಬೋಗಿಗಳಿಂದ ಹೊರ ತೆಗೆಯಲಾದ ಶವಗಳ ಪೈಕಿ ಕನಿಷ್ಠ 40 ಮಂದಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದು ದೃಢಪಟ್ಟಿದ್ದಾಗಿ ವರದಿಯಾಗಿದೆ.

ರೈಲು ಹಳಿಯ ಮೇಲೆ ಅಳವಡಿಸಲಾದ ವಿದ್ಯುತ್ ತಂತಿಗಳು ತುಂಡಾಗಿದ್ದ ಪರಿಣಾಮ ಇವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಇವರ ದೇಹಗಳ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ ಎಂದು ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿದ್ದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ರೈಲು ಕಂಪಾರ್ಟ್ ಮೆಂಟ್ ಗಳ ಮೇಲೆ ವಿದ್ಯುತ್ ಪ್ರವಹಿಸುವ ತಂತಿಗಳು ಕಡಿದು ಬಿದ್ದಿರುವುದು ಹಲವು ಮಂದಿಯ ಸಾವಿಗ ಕಾರಣ ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ. "ಹಲವು ಮಂದಿ ಪ್ರಯಾಣಿಕರು ಡಿಕ್ಕಿಯ ವೇಳೆ ಆದ ಗಾಯಗಳಿಂದ ಮೃತಪಟ್ಟಿದ್ದರೆ ಮತ್ತೆ ಹಲವು ಮಂದಿ ಹಳಿಯ ಮೇಲೆ ಅಳವಡಿಸಲಾಗಿದ್ದ ಲೋ ಟೆನ್ಷನ್ ತಂತಿ (ಎಲ್ ಟಿ)ಯ ಸಂಪರ್ಕದಿಂದ ಮೃತಪಟ್ಟಿದ್ದಾರೆ" ಎಂದು ಸರ್ಕಾರಿ ರೈಲ್ವೆ ಪೊಲೀಸ್  ಸಬ್ ಇನ್ಸ್ಪೆಕ್ಟರ್ ಪಪು ಕುಮಾರ್ ನಾಯಕ್ ದಾಖಲಿಸಿರುವ ಎಫ್ಐಆರ್ ನಲ್ಲಿ ವಿವರಿಸಿದ್ದಾರೆ.

ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ಹಳಿತಪ್ಪಿದ ಬೋಗಿಗಳಿಗೆ ಯಶವಂತಪುರ- ಹೌರಾ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಬಳಿಕ  ವಿದ್ಯುತ್ ಕೇಬಲ್ ಗಳು ತುಂಡಾಗಿ ಬಿದ್ದಿದ್ದವು.

ಹಲವು ದೇಹಗಳು ಗುರುತು ಪತ್ತೆಯಾಗದಷ್ಟು ವಿರೂಪಗೊಂಡಿದ್ದು, ಸುಮಾರು 40 ದೇಹಗಳಲ್ಲಿ ಯಾವುದೇ ಗಾಯದ ಗುರುತು ಅಥವಾ ರಕ್ತಸ್ರಾವ ಕೂಡಾ ಕಂಡುಬಂದಿಲ್ಲ. ಈ ಪೈಕಿ ಬಹುತೇಕ ಸಾವುಗಳು ವಿದ್ಯುತ್ ಸಂಪರ್ಕದಿಂದ ಸಂಭವಿಸಿರಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿದ್ಯುತ್ ಕೇಬಲ್ ತುಂಡಾಗಿ ಬೋಗಿಯ ಯಾವುದಾರೂ ಭಾಗದ ಮೇಲೆ ಬಿದ್ದು, ಬೋಗಿಯ ಆ ಭಾಗದಲ್ಲಿ ನೇರ ಸಂಪರ್ಕದಲ್ಲಿದ್ದ ಪ್ರಯಾಣಿಕರು ವಿದ್ಯುತ್ ಸಂಪರ್ಕದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವೆಸ್ಟ್ ಕೋಸ್ಟ್ ರೈಲ್ವೆಯ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕರಾಗಿ ನಿವೃತ್ತರಾದ ಪೂರ್ಣಚಂದ್ರ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

Similar News