ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕೌಶಲ್ಯ ವೃದ್ಧಿಗೆ ಶೈಕ್ಷಣಿಕ ಸ್ಪರ್ಧೆ ಸಹಕಾರಿ: ಪ್ರಾಧ್ಯಾಪಕ ಡಾ. ಪರಮೇಶ್ವರ

ವಿವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಯುನಿಫೆಸ್ಟ್ 2023- ಸ್ಪೆಲ್ಲೆನ್’’ ಸ್ಪರ್ಧೋತ್ಸವ

Update: 2023-06-06 16:44 GMT

ಮಂಗಳೂರು, ಜೂ.6: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗವು, ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಅಂತರ್ ಕಾಲೇಜು ಮಟ್ಟದ ಯುನಿಫೆಸ್ಟ್ 2023- ಸ್ಪೆಲ್ಲೆನ್’’ ಸ್ಪರ್ಧೋತ್ಸವವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ  ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಪರಮೇಶ್ವರ  ಅವರು ಮಾತನಾಡಿ, ಶೈಕ್ಷಣಿಕ ಸ್ಪರ್ಧಾ ಕೂಟಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯ ವೃದ್ಧಿಸುತ್ತವೆ. ಅಂಕಗಳು ಮುಂದಿನ ವಿದ್ಯಾಭ್ಯಾಸಕ್ಕೆ ದಾರಿಯಾಗುತ್ತವೆ, ಆದರೆ ಅನುಭವ, ವೃತ್ತಿ ಹಾಗೂ ಜೀವನಕ್ಕೆ ಅಡಿಪಾಯವಾಗುತ್ತದೆ, ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಲಿಕಟ್ ನ ಆದಾಯ ತೆರಿಗೆ ಇಲಾಖೆ ಆಯುಕ್ತ ಕೆ ಎ ಚಂದ್ರಕುಮಾರ್, ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಹಾಕುವಲ್ಲಿ ಸಹಕಾರಿ, ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ನೆರವಾಗುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮ ಪೂರಕವಾಗಲಿ ಎಂದು ಶುಭ ಹಾರೈಸಿದರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ ಎ ಸಿದ್ದಿಕ್  ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ವಂದಿಸಿದರು. ದೀಪ್ತಿಶ್ರೀ  ಕಾರ್ಯಕ್ರಮ ನಿರೂಪಿಸಿದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ನಾಯಕ್, ಕಾರ್ಯಕ್ರಮದ ಸಂಯೋಜಕಿ ರಮ್ಯಾ ಕೆ ಆರ್, ವಿದ್ಯಾರ್ಥಿ ಸಂಯೋಜಕರಾದ  ಪ್ರತೀಕ್ಷಾ, ಶ್ರೇಯಾ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪ ಸಮಾ ರಂಭದಲ್ಲಿ ಹಂಪನಕಟ್ಟೆಯ ಜಿ.ಹೆಚ್.ಎಸ್ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಹರ್ಷಾ ಆರ್ ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಫಿನಾನ್ಸ್, ಹೆಚ್ ಆರ್, ಬ್ಯುಸಿನೆಸ್ ಕ್ವಿಜ್, ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಸುಮಾರು 15 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Similar News