ವಿಟ್ಲ: ರಸ್ತೆ ಬದಿ ತ್ಯಾಜ್ಯ ಎಸೆದವರಿಂದಲೇ ಸ್ವಚ್ಛ ಮಾಡಿಸಿದ ಕೊಳ್ನಾಡಿನ ಯುವಕರು!

Update: 2023-06-07 07:32 GMT

ವಿಟ್ಲ, ಜೂ.7: ರಸ್ತೆ ಬದಿಯಲ್ಲಿ ಗೂಡ್ಸ್ ಟೆಂಪೋದಲ್ಲಿ ತಂದು ತ್ಯಾಜ್ಯ ಸುರಿಯುತ್ತಿರುವವರನ್ನು ಪತ್ತೆ ಹಚ್ಚಿದ ಸ್ಥಳೀಯ ಯುವಕರು ತ್ಯಾಜ್ಯ ಎಸೆದವರಿಂದಲೇ ಪರಿಸರವನ್ನು ಶುಚಿಗೊಳಿಸಿದ ಘಟನೆ ಕೊಳ್ನಾಡು ಗ್ರಾಮದಲ್ಲಿ ಮಂಗಳವಾರ ಮುಸ್ಸಂಜೆ ನಡೆದಿದೆ.

ಕೊಳ್ನಾಡು ಗ್ರಾಮದ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುವ ಕನ್ಯಾನ ಸಂಪರ್ಕ ರಸ್ತೆಬದಿಯಲ್ಲಿ ಕೆಲ ದಿನಗಳಿಂದ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ದುರ್ನಾತದಿಂದಾಗಿ ಇಲ್ಲಿ ಸಂಚಾರ ನರಕ ಸದೃಶವಾಗಿತ್ತು. ಕುಡ್ತಮುಗೇರು, ಮಂಕುಡೆ, ಕುದ್ರಿಯ, ಕುಳಾಲು ಪರಿಸರದ ಹಸುಗಳು, ಆಡುಗಳು, ನಾಯಿ-ಬೆಕ್ಕುಗಳೆಲ್ಲಾ ತ್ಯಾಜ್ಯ ತಿಂದು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದವು. ಆದರೆ ಇಲ್ಲಿ ತ್ಯಾಜ್ಯ ತಂದು ಸುರಿಯುತ್ತಿರುವುದು ಎಂಬುದು ಪತ್ತೆಯಾಗಿರಲಿಲ್ಲ.

 ದುಷ್ಕರ್ಮಿಗಳ ಅಮಾನವೀಯ ಕ್ರಮದಿಂದ ಈ ಸ್ಥಳೀಯ ನಾಗರಿಕರು ಆಕ್ರೋಶಗೊಂಡಿದ್ದಲ್ಲದೇ ಈ ಕೃತ್ಯ ಎಸಗುವವರಿಗೆ ತಕ್ಕಪಾಠ ಕಲಿಸಲು ಕಾಯುತ್ತಿದ್ದರು. ಮಂಗಳವಾರ ಮುಸ್ಸಂಜೆ ಗೂಡ್ಸ್ ಟೆಂಪೋದಲ್ಲಿ ಬಂದ ಇಬ್ಬರು ದುರ್ನಾತ ಬೀರುತ್ತಿದ್ದ ತ್ಯಾಜ್ಯಗಳ ಮೂಟೆಗಳನ್ನು ರಸ್ತೆ ಬದಿ ಎಸೆದು ಪರಾರಿಯಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು.

ಈ ವೀಡಿಯೋ ಸ್ಥಳೀಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ತ್ಯಾಜ್ಯ ಎಸೆದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿದ ಯುವಕರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದರು. ಸ್ಥಳೀಯ ಯುವಕರು ತ್ಯಾಜ್ಯ ಎಸೆದವರನ್ನು ಸ್ಥಳಕ್ಕೆ ಕರೆಯಿಸಿ ಅವರಿಂದಲೇ ತ್ಯಾಜ್ಯಗಳ ಮೂಟೆಗಳನ್ನು ಪುನಃ ಟೆಂಪೋ ಗೆ ತುಂಬಿಸಿ ರಕ್ಷಿತಾರಣ್ಯ ಪರಿಸರವನ್ನು ಶುಚಿಗೊಳಿಸಿದ್ದಾರೆ.

ಪ್ರಕೃತಿ ಪ್ರೇಮಿಗಳ ಕಾರ್ಯಾಚರಣೆಗೆ ಅರಣ್ಯ ಸಿಬ್ಬಂದಿ ಸಾಥ್ ನೀಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Similar News