ಮಹಿಳಾ ಸಬಲೀಕರಣ ಎಂಬುದು ಪ್ರಚಾರ ತಂತ್ರ ಮಾತ್ರವೇ?

Update: 2023-06-07 13:33 GMT

ದೇಶಕ್ಕೆ ರಾಷ್ಟ್ರೀಯ ಪುರಸ್ಕಾರಗಳು ಮತ್ತು ಪದಕಗಳನ್ನು ಗೆದ್ದುಕೊಟ್ಟ ಮಹಿಳಾ ಕುಸ್ತಿಪಟುಗಳು ಸೇರಿದಂತೆ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ, ಮೋದಿ ಸರಕಾರವು ತನ್ನ ಒಂಭತ್ತು ವರ್ಷಗಳ ಅಧಿಕಾರದಲ್ಲಿ ಹೇಗೆ ಮಹಿಳೆಯರನ್ನು ಕಂಡಿದೆ? ಮಹಿಳಾ ‘ಸಬಲೀಕರಣ’ದ ಅದರ ಮಾತು ಮತ್ತು ಭರವಸೆಗಳು ಹೇಗೆ ಬರೀ ಬೊಗಳೆಗೆ ಸೀಮಿತವಾಗಿವೆ ಎಂಬುದು ಮನವರಿಕೆಯಾಗುತ್ತದೆ.

ಮೇ 2023. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂಭತ್ತು ವರ್ಷಗಳು. ಮೇ 28ರಂದು ಹೊಸ ಸಂಸತ್ ಭವನದ ಉದ್ಘಾಟನೆಯನ್ನು ರಾಷ್ಟ್ರಪತಿಗಳನ್ನು ಹೊರಗಿಟ್ಟು ಪ್ರಧಾನಿ ನೆರವೇರಿಸಿದ್ದೂ ಆಯಿತು. ವೈಭವೀಕೃತ ಆಚರಣೆಗಳೊಂದಿಗೆ ಅವರು ಸಂಸತ್ ಭವನ ಉದ್ಘಾಟಿಸುತ್ತಿದ್ದರೆ, ಅದೇ ವೇಳೆ ಬಿಜೆಪಿ ಸಂಸದನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಮಹಿಳಾ ಕುಸ್ತಿಪಟುಗಳು ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸಲು ಮುಂದಾದಾಗ ಈ ದೇಶಕ್ಕೆ ಹೆಮ್ಮೆ ತಂದಿದ್ದ ಆ ಕ್ರೀಡಾಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಯಿತು. ಇದು ಬಹುದೊಡ್ಡ ವಿಪರ್ಯಾಸ.

ಬೀದಿಗಳಲ್ಲಿ ಆ ಕುಸ್ತಿಪಟುಗಳ ಮೇಲೆ ಪೊಲೀಸರು ದೌರ್ಜನ್ಯವೆಸಗುವ ಚಿತ್ರಗಳು, ತನ್ನ ವಿರುದ್ಧದ ಯಾವುದೇ ರೀತಿಯ ಪ್ರತಿಭಟನೆಯನ್ನು ಹತ್ತಿಕ್ಕಲು ಯಾವ ಮಟ್ಟಕ್ಕೂ ಇಳಿಯಬಲ್ಲೆ ಎಂಬ ಈ ಸರಕಾರದ ನಿಲುವನ್ನೇ ನಿರೂಪಿಸಿವೆ.

ಮೋದಿ-ಶಾ ‘ಡಬಲ್ ಇಂಜಿನ್’ ಸರಕಾರವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪೊಲೀಸ್ ದೌರ್ಜನ್ಯವನ್ನು ಬಳಸಿದ್ದು ಇದೇ ಮೊದಲಲ್ಲ. ಶಾಹೀನ್ ಬಾಗ್‌ನಲ್ಲಿ ಹಿರಿಯ ಮಹಿಳೆಯರ ನೇತೃತ್ವದಲ್ಲಿ ನಡೆದ ಸಿಎಎ, ಎನ್‌ಸಿಆರ್ ಪ್ರತಿಭಟನೆ, ಕೃಷಿ ಕಾನೂನು ವಿರೋಧಿಸಿ ನಡೆದ ಪ್ರತಿಭಟನೆಗಳ ವೇಳೆ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು. ಆಗಲೂ ಈ ಸರಕಾರ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸಿತ್ತು.

ಒಂದು ಪ್ರಶ್ನೆ ಉದ್ಭವಿಸುತ್ತದೆ: ದೇಶಕ್ಕೆ ರಾಷ್ಟ್ರೀಯ ಪುರಸ್ಕಾರಗಳು ಮತ್ತು ಪದಕಗಳನ್ನು ಗೆದ್ದುಕೊಟ್ಟ ಮಹಿಳಾ ಕುಸ್ತಿಪಟುಗಳು ಸೇರಿದಂತೆ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ, ಮೋದಿ ಸರಕಾರವು ತನ್ನ ಒಂಭತ್ತು ವರ್ಷಗಳ ಅಧಿಕಾರದಲ್ಲಿ ಹೇಗೆ ಮಹಿಳೆಯರನ್ನು ಕಂಡಿದೆ? ಮಹಿಳಾ ‘ಸಬಲೀಕರಣ’ದ ಅದರ ಮಾತು ಮತ್ತು ಭರವಸೆಗಳು ಹೇಗೆ ಬರೀ ಬೊಗಳೆಗೆ ಸೀಮಿತವಾಗಿವೆ ಎಂಬುದು ಮನವರಿಕೆಯಾಗುತ್ತದೆ.

2014ರಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ, ಬಿಜೆಪಿ ಪ್ರಣಾಳಿಕೆಯು ದೇಶದಾದ್ಯಂತ ಎಲ್ಲಾ ಹಂತಗಳಲ್ಲಿ ‘ಮಹಿಳಾ ಸಬಲೀಕರಣ’ವನ್ನು ಸಾಧಿಸುವ ದೊಡ್ಡ ಭರವಸೆಯನ್ನು ನೀಡಿತ್ತು. ಹಾಗೆ ನೋಡಿದರೆ, ದೇಶದ ವಿವಿಧ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ದೃಷ್ಟಿಕೋನಗಳಲ್ಲಿ ಗಮನಿಸಿದರೆ ಈ ಮಹಿಳಾ ಸಬಲೀಕರಣ ಎಂಬುದೇ ಮಹಿಳೆಯರನ್ನು ಹೇಗೆ ಹಿಂದಿರಿಸಲಾಗಿದೆ ಎಂಬುದನ್ನು ಹೇಳುತ್ತದೆ.

ಪಿತೃಪ್ರಧಾನ ಮತ್ತು ಪಿತೃಪ್ರಭುತ್ವದ ಈ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರ ಸಬಲೀಕರಣ ಮಾಡುತ್ತೇವೆ ಎಂದು ಹೊರಟಿರುವುದೇ ಅದೇ ಪುರುಷ ಪ್ರಾಬಲ್ಯದ ಅಹಂಕಾರವನ್ನು ಸೂಚಿಸುತ್ತದೆ. ಆದರೆ ಈ ಮಾತು ಬಳಸಿ ಅದು ತನ್ನ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದೆ.

ಈ ಇಷ್ಟೂ ವರ್ಷಗಳಲ್ಲಿ ಬಿಜೆಪಿ ಸರಕಾರ ತನ್ನನ್ನು ಪ್ರಶ್ನಿಸಿದವರನ್ನು, ಸತ್ಯವನ್ನು ಹೇಳಹೊರಟವರನ್ನು ಅದು ಪೊಲೀಸ್ ಬಲವೂ ಸೇರಿದಂತೆ ಎಲ್ಲ ಅಧಿಕಾರ ಬಳಸಿ ದಮನಿಸುವ ನೀತಿಯನ್ನೇ ಅನುಸರಿಸಿದೆ.

ಮಹಿಳಾ ಸಬಲೀಕರಣ ಎಂದ ಸರಕಾರ ಮಹಿಳೆಯರ ವಿರುದ್ಧದ ಹೆಚ್ಚುತ್ತಲೇ ಇರುವ ಅಪರಾಧಗಳ ವಿಚಾರದಲ್ಲಿ, ಮಹಿಳಾ ಶಿಕ್ಷಣದ ವಿಚಾರವಾಗಿ, ಮಹಿಳಾ ಉದ್ಯೋಗದ ಮಟ್ಟದ ಬಗ್ಗೆ ಏನು ಮಾಡಿದೆ? ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ವಿಚಾರವಾಗಿ ಅದು ಏಕೆ ಸೊಲ್ಲೆತ್ತುತ್ತಿಲ್ಲ? ಈ ಒಂಬತ್ತು ವರ್ಷಗಳಲ್ಲಿ ಬಿಜೆಪಿ ಸರಕಾರಕ್ಕೆ ಇಚ್ಛಾ ಶಕ್ತಿ ಇದ್ದಿದ್ದೇ ಹೌದಾದರೆ ಅದು ಸಾಧ್ಯವಾಗಿರಬೇಕಿತ್ತಲ್ಲವೇ?

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ, ಯುಪಿಎ ಸರಕಾರದ ಅವಧಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ತೀರಾ ಅತಿರೇಕ ಮುಟ್ಟಿವೆ ಎಂದು ಹೇಳಿತು. ಆದರೆ ಆನಂತರ ಬಿಜೆಪಿ ಸರಕಾರ ಮಾಡಿದ್ದೇನು? ಕಳೆದ ಒಂಭತ್ತು ವರ್ಷಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಿವೆಯೇ ಹೊರತು ತಗ್ಗಿಲ್ಲ.

ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ದಾಖಲೆಗಳ ಪ್ರಕಾರ, 2012ರಲ್ಲಿ ಮಹಿಳೆಯರ ವಿರುದ್ಧ 2.44 ಲಕ್ಷ ಅಪರಾಧ ಪ್ರಕರಣಗಳು ವರದಿಯಾಗಿವೆ. ಇದು 2021ರಲ್ಲಿ ಸುಮಾರು 4.28 ಲಕ್ಷಕ್ಕೆ ಏರಿದೆ. ಇದು ಬಿಜೆಪಿ ಅಧಿಕಾರಕ್ಕೆ ಬಂದ ನಂತರದ ವರ್ಷಗಳಲ್ಲಿ ವರದಿಯಾದ ಒಟ್ಟು ಅಪರಾಧಗಳಲ್ಲಿ ಶೇ. 42.96 ಹೆಚ್ಚಿರುವುದನ್ನು ಸೂಚಿಸುತ್ತದೆ.

ಇದಲ್ಲದೆ, ಪ್ರತೀ ಲಕ್ಷ ಜನಸಂಖ್ಯೆಗೆ ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣವು 2012ರಲ್ಲಿ ಶೇ. 41.74ರಷ್ಟಿತ್ತು ಮತ್ತು 2014ರಲ್ಲಿ ಶೇ. 56.3ಕ್ಕೆ ಏರಿತು. ಇತ್ತೀಚಿನ ಎನ್‌ಸಿಆರ್‌ಬಿ ವರದಿ 2021ರ ಪ್ರಕಾರ, ಇದು ಶೇ. 64.5 ಆಗಿದೆ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ತಡೆಗೆ ಬಿಜೆಪಿ ಏನು ಮಾಡಿದೆ ಎಂದು ಕೇಳಿಕೊಂಡರೆ ಕಾಣುವುದು ಅದರ ನಿರ್ಲಕ್ಷ್ಯ ಮಾತ್ರ.

ಈಗ ಮಹಿಳಾ ಕುಸ್ತಿಪಟುಗಳ ಮೇಲೆ ಆದ ದೌರ್ಜನ್ಯವನ್ನು ಗಮನಿಸಿದರೆ, ಮಹಿಳೆಯರ ಬಗೆಗಿನ ತನ್ನದೇ ಭರವಸೆಗಳನ್ನೂ ಈ ಸರಕಾರ ಮರೆತಿದೆ ಎಂಬುದು ಸ್ಪಷ್ಟ.

ಮಹಿಳೆಯರ ಆರ್ಥಿಕ ಮತ್ತು ರಾಜಕೀಯ ಪಾಲ್ಗೊಳ್ಳುವಿಕೆ ವಿಚಾರವೂ ಆಶಾದಾಯಕವಾಗಿಲ್ಲ. ಭಾರತದ ಎಫ್‌ಎಲ್‌ಎಫ್‌ಪಿಆರ್ (ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ದರ) ದಶಕಗಳಿಂದಲೂ ಶೋಚನೀಯವಾಗಿ ಕಡಿಮೆಯಾಗಿದೆ. ಮೋದಿ ಸರಕಾರದ ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ಇದು ಮತ್ತಷ್ಟು ಕುಸಿದಿದೆ.

ವಿಶ್ವಬ್ಯಾಂಕ್ ಮಾಹಿತಿಯ ಪ್ರಕಾರ, 2012ರಲ್ಲಿ ವರದಿಯಾದಂತೆ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಪ್ರಮಾಣ ಶೇ. 27 ಇತ್ತು. 2021ರಲ್ಲಿ ಇದು ಶೇ. 22.9ಕ್ಕೆ ಇಳಿಯಿತು. 2022ರಲ್ಲಿ ಇದು ಶೇ. 23.9ಕ್ಕೆ ಏರಿರುವುದು ಕಂಡರೂ, ಈ ಹೆಚ್ಚಳವು ಕೃಷಿ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಹೆಚ್ಚಳದ ಪರಿಣಾಮ ಎಂದು ಅಧ್ಯಯನವು ಹೇಳುತ್ತದೆ. ಕೃಷಿ ವಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಮಹಿಳೆಯರು ಅತಿ ಕಡಿಮೆ ವೇತನ ಪಡೆಯುವ ಸ್ಥಿತಿಯೇ ಇದೆ. ಕೆಲವು ಸಂದರ್ಭಗಳಲ್ಲಿ ಅವರಿಗೆ ವೇತನವೇ ಇರುವುದಿಲ್ಲ.

ಸೆಂಟರ್ ಫಾರ್ ನ್ಯೂ ಎಕನಾಮಿಕ್ಸ್ ಸ್ಟಡೀಸ್ ತನ್ನ ಸಂಶೋಧನೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಹಿಳಾ ಗೃಹ ಕಾರ್ಮಿಕರು, ದೈನಂದಿನ ಕೂಲಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿಗಳು, ಅಲೆಮಾರಿ ಸಮುದಾಯಗಳು, ಬೀದಿ ವ್ಯಾಪಾರಿಗಳು ಮತ್ತು ಇತರರು ಅನುಭವಿಸಿದ ತೊಂದರೆಯ ಸ್ವರೂಪವನ್ನು ದಾಖಲಿಸಿದೆ. ಕೋವಿಡ್ ನಂತರದ ಸಂದರ್ಭದಲ್ಲಂತೂ ಪರಿಸ್ಥಿತಿ ಇನ್ನೂ ನಿರಾಶಾದಾಯಕವಾಗಿದೆ.

ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿಯೂ ಮಹಿಳೆಯರಿಗೆ ಸಿಗುವ ಅವಕಾಶ ಅಷ್ಟಕ್ಕಷ್ಟೆ. ಸರಕಾರ ಮತ್ತು ಆಡಳಿತದ ಮಟ್ಟದಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯ ಪ್ರಮಾಣವು ದೀರ್ಘಕಾಲದ ಸಮಸ್ಯೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ. 33ರ ಮೀಸಲಾತಿ ಈ ಸರಕಾರದಿಂದ ಸಾಧ್ಯವಾಗಿಲ್ಲ.

ಮಹಿಳಾ ಮೀಸಲಾತಿ ಮಸೂದೆ 2014ರಲ್ಲಿ ಒಮ್ಮೆ ಮತ್ತು 2019ರಲ್ಲಿ ಮತ್ತೊಮ್ಮೆ ರದ್ದುಗೊಂಡಿತು. ಮಾತ್ರವಲ್ಲದೆ, ಸ್ಥಳೀಯ, ರಾಜ್ಯ ಅಥವಾ ರಾಷ್ಟ್ರಮಟ್ಟದ ಚುನಾವಣೆಗಳಿಗೆ ಅಭ್ಯರ್ಥಿಗಳಿಗೆ ನೀಡುವ ಟಿಕೆಟ್‌ಗಳಲ್ಲಿಯೂ ಶೇ. 33ರ ಲೆಕ್ಕದಲ್ಲಿ ಮಹಿಳೆಯರಿಗೆ ಅವಕಾಶ ನೀಡುವುದೂ ಬಿಜೆಪಿಯಿಂದ ಆಗಿಲ್ಲ.

ಮಹಿಳೆಯರಿಗೆ ಅಗತ್ಯವಾದ ಸಾಮಾಜಿಕ ಕಲ್ಯಾಣ ಯೋಜನೆಗಳ ಕಥೆಯೇನಾಗಿದೆ? ಪ್ರಧಾನಿ ಮೋದಿಯವರ ಮೇ 30ರ ಟ್ವೀಟ್‌ನಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿನ ಬಿಜೆಪಿ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಒಂದು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (ಪಿಎಂಯುವೈ 2016). ಕೇಂದ್ರ ಸರಕಾರವು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸುವ ಗುರಿಯನ್ನು ಹೊಂದಿರುವುದರ ಕುರಿತದ್ದು.

2023ರ ಹೊತ್ತಿಗೆ ಕೇಂದ್ರ ಸರಕಾರವು 96 ದಶಲಕ್ಷ ಸಿಲಿಂಡರ್‌ಗಳನ್ನು ವಿತರಿಸಿದೆ. ಆದರೆ ವಾಸ್ತವ ಬೇರೆಯೇ ಇದೆ. ಆದಾಗ್ಯೂ, ವಿತರಿಸಲಾದ ಸಿಲಿಂಡರ್‌ಗಳಲ್ಲಿ, ಯೋಜನೆಯ ಶೇ. 9.6ರಷ್ಟು ಫಲಾನುಭವಿಗಳು ಇದರ ರೀಫಿಲ್ಲಿಂಗ್ ಮಾಡಿಸಿಕೊಳ್ಳುವುದಕ್ಕೆ ಮುಂದಾಗಿಲ್ಲ. ಸಬ್ಸಿಡಿ ಇರುವುದರ ಹೊರತಾಗಿಯೂ ಶೇ. 56.5ರಷ್ಟು ಫಲಾನುಭವಿಗಳು ನಾಲ್ಕಕ್ಕಿಂತ ಹೆಚ್ಚು ರೀಫಿಲ್ಲಿಂಗ್ ತೆಗೆದುಕೊಂಡಿಲ್ಲ. ಇದಕ್ಕೆ ಕಾರಣ ರೀಫಿಲ್ಲಿಂಗ್‌ಗೆ ಪೂರ್ಣ ಮೊತ್ತವನ್ನು ಮೊದಲು ಪಾವತಿಸಬೇಕಿರುವುದು. ಸಬ್ಸಿಡಿ ಮೊತ್ತವು ಆನಂತರ ತೀರಾ ತಡವಾಗಿ ಬರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಸಬ್ಸಿಡಿ ಪಾವತಿಯಾಗಿಲ್ಲ ಎಂಬ ವರದಿಗಳೂ ಇವೆ. ಆರ್‌ಟಿಐ ಮಾಹಿತಿಯ ಪ್ರಕಾರ,ಈ ಯೋಜನೆಯಡಿಯಲ್ಲಿ ಶೇ. 13ರಷ್ಟು ಕುಟುಂಬಗಳಿಗೆ ಸಬ್ಸಿಡಿಯೇ ಸಂದಾಯವಾಗಿಲ್ಲ ಮತ್ತು ಶೇ. 23ರಷ್ಟು ಫಲಾನುಭವಿಗಳಿಗೆ ಸಬ್ಸಿಡಿ ಸ್ವೀಕರಿಸಿದ್ದೇವೆಯೆ ಅಥವಾ ಇಲ್ಲವೆ ಎಂಬುದರ ಬಗ್ಗೆ ತಿಳಿದಿಲ್ಲ.

ಇತರ ಅತ್ಯಗತ್ಯ ಸಾಮಾಜಿಕ ಕಲ್ಯಾಣ ಯೋಜನೆಗಳ ವಿಷಯದಲ್ಲಿಯೂ ಸಹ ಮಹಿಳೆಯರ ವಿಚಾರದಲ್ಲಿ ಅಸಮಾನ ಧೋರಣೆಯೇ ಕಂಡಿದೆ. ಪೌಷ್ಟಿಕಾಂಶದಿಂದ ಮನರೇಗಾವರೆಗೆ ಇದೇ ಸನ್ನಿವೇಶ ಕಾಣುತ್ತೇವೆ.

2015ರಲ್ಲಿ ಪ್ರಾರಂಭವಾದ ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನವು ಹೆಣ್ಣು ಮಗುವಿನ ಉಳಿವು ಮತ್ತು ರಕ್ಷಣೆಯನ್ನು ಖಚಿತಪಡಿಸುವ, ಹೆಣ್ಣು ಮಗುವಿನ ಶಿಕ್ಷಣ ಮತ್ತು ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಅದೇ ವರ್ಷದಲ್ಲಿ ಹಯಾರ್ಣದಲ್ಲಿ ಪ್ರಾರಂಭವಾದ #SelfieWithDaughter  ಎಂಬ ತಳಮಟ್ಟದ ಅಭಿಯಾನವನ್ನು ಮೋದಿ ಬಲವಾಗಿ ಅನುಮೋದಿಸಿದರು. ಅಲ್ಲಿ ತಂದೆಗೆ ತಮ್ಮ ಹೆಣ್ಣುಮಕ್ಕಳೊಂದಿಗೆ ಫೋಟೊಗಳನ್ನು ಟ್ವೀಟ್ ಮಾಡಲು ಕೇಳಲಾಯಿತು ಮತ್ತು ಆನಂತರ ಅವುಗಳನ್ನು ಫೌಂಡೇಶನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಕೇಳಲಾಯಿತು. ಇದು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರವನ್ನು ಪಡೆಯಿತು. ಇಂಥ ಪ್ರಚಾರಗಳು ಮಾಡಿದ್ದೇನು? ಇದು ಬಿಜೆಪಿ ಪಿತೃವಾದಿ ಧೋರಣೆಯನ್ನೇ ಬಲವಾಗಿ ಪ್ರತಿಪಾದಿಸುತ್ತಿವೆ ಎಂಬ ವಾದಗಳಿವೆ.

ಹಾಗಾಗಿ ಮಹಿಳಾ ಸಬಲೀಕರಣ ಮತ್ತು ಮಹಿಳಾ ಸುರಕ್ಷತೆ ಎಂಬುದು ಈ ಸರಕಾರದ ಪಾಲಿಗೆ ಪ್ರಚಾರದ ಉದ್ದೇಶ ಮಾತ್ರ. ಚುನಾವಣಾ ಲಾಭ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತಾನು ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವಂತೆ ತೋರಿಸಿಕೊಳ್ಳುವ ಒಂದು ತಂತ್ರಗಾರಿಕೆ ಮಾತ್ರ. ವಾಸ್ತವದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಈ ಸರಕಾರ ತೋರಿಸಿರುವ ಕಾಳಜಿ ಅತ್ಯಂತ ಕಡಿಮೆ ಮಟ್ಟದ್ದು.

(ಕೃಪೆ: thewire.in)

Similar News