ಕೆ.ಆರ್​. ಸರ್ಕಲ್​ ಅಂಡರ್‌ಪಾಸ್‌ ದುರಂತ: ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ ಲೋಕಾಯುಕ್ತ ಐಜಿಪಿ

Update: 2023-06-07 17:20 GMT

ಬೆಂಗಳೂರು, ಜೂ.7: ನಗರದಲ್ಲಿರುವ ವಿವಿಧ ಅಂಡರ್ ಪಾಸ್‍ನಲ್ಲಿರುವ ಸಮಸ್ಯೆಗಳನ್ನು ಪತ್ತೆಹಚ್ಚಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜೊತೆಗೆ ಅವಘಡಕ್ಕೆ ಯಾರದ್ದಾದರೂ ನಿರ್ಲಕ್ಷ್ಯ ಕಾರಣವಾಗಿದ್ದರೆ ಅಂತಹವರ ವಿರುದ್ಧ ಲೋಕಾಯುಕ್ತರಿಗೆ ವರದಿ ಸಲ್ಲಿಸುತ್ತೇವೆ ಎಂದು ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್ ತಿಳಿಸಿದ್ದಾರೆ.

ಕೆ.ಆರ್.ಸರ್ಕಲ್ ​ ಅಂಡರ್‌ಪಾಸ್‌ ನಲ್ಲಿ ಕಾರು ಮುಳುಗಿ ಯುವತಿ ಸಾವು ಅವಘಡಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ನಿರ್ದೇಶನದ ಮೇಲೆ ಲೋಕಾಯುಕ್ತ ಪೊಲೀಸ್ ಘಟಕದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ಭಾಗವಾಗಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೆ.ಆರ್.ಸರ್ಕಲ್ ಅಂಡರ್ ಪಾಸ್‍ನಲ್ಲಿರುವ ಒಳಚರಂಡಿ ವ್ಯವಸ್ಥೆಯಲ್ಲಿ ನೀರಿನ ಹರಿವು ಅಧಿಕವಾದ ಕಾರಣದಿಂದ ಅವಘಡ ಸಂಭವಿಸಿರುವುದು ತಿಳಿದುಬಂದಿದೆ ಎಂದರು.

ಕೆ.ಆರ್.ಸರ್ಕಲ್ ಅಂಡರ್‍ಪಾಸ್ ಅವಘಡಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸುಬ್ರಹ್ಮಣ್ಯೇಶ್ವರ್ ರಾವ್, ಘಟನಾ ಸ್ಥಳದಲ್ಲಿ ಟ್ಯಾಂಕರ್ ತರಿಸಿ ನೀರು ಹರಿಸುವ ಮೂಲಕ ನೀರು ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗುತ್ತದೆಯೇ ಎಂದು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತರು, ಉತ್ತರ ವಲಯ ಆಯುಕ್ತರು, ಶಿವಾಜಿನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಸಂಪಂಗಿ ರಾಮನಗರ ವಾರ್ಡ್‍ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್, ಬಿಬಿಎಂಪಿ ಮಳೆ ನೀರು ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮತ್ತು ಸಹಾಯಕ ಇಂಜಿನಿಯರ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳು ಎಂದು ಹೆಸರಿಸಲಾಗಿದೆ ಎಂದು ಸುಬ್ರಹ್ಮಣ್ಯೇಶ್ವರ್ ರಾವ್ ಹೇಳಿದರು.

Similar News