ಹಜ್ ಭವನಕ್ಕೆ 5 ಸಾವಿರ ಕೋಟಿ ರೂ. ಕೇಳಿಯೂ ಇಲ್ಲ, ಕೊಟ್ಟೂ ಇಲ್ಲ: ಸಚಿವ ಝಮೀರ್ ಅಹ್ಮದ್ ಸ್ಪಷ್ಟನೆ

5 ಕೋಟಿ ಎಂದಿದ್ದನ್ನು 5000 ಕೋಟಿ ಮಾಡಿದ ಪಬ್ಲಿಕ್ ಟಿವಿ!

Update: 2023-06-08 17:02 GMT

ಬೆಂಗಳೂರು :ಕರ್ನಾಟಕ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಹಜ್ ಭವನ ನಿರ್ಮಾಣಕ್ಕೆ ಐದು ಸಾವಿರ ಕೋಟಿ ರೂ. ಕೊಡುವಂತೆ ನಾನು ಬೇಡಿಕೆ ಇಟ್ಟಿದ್ದೇನೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಅದು ಶುದ್ಧ ಸುಳ್ಳು. ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ವಾಸ್ತವವಾಗಿ ನಾನು ಅಂದು ಮನವಿ ಮಾಡಿದ್ದು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ 5000 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಿನ್ನೆಲೆಯಲ್ಲಿ ನಮಗೆ ನೀಡುವುದಾಗಿ ಹೇಳಿರುವ ಅನುದಾನ ಕಡಿತ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ನಮ್ಮ ಧರ್ಮ ಗುರುಗಳು ಆತಂಕ ಗೊಂಡಿದ್ದಾರೆ. ದಯವಿಟ್ಟು ತಾವು ಯಾವುದೇ ರೀತಿಯ ಕಡಿತ ಮಾಡಬಾರದು. ಹಿಂದೆ ನೀವು ಮುಖ್ಯಮಂತ್ರಿ ಆಗಿದ್ದಾಗ 2018 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 3150 ಕೋಟಿ ರೂ. ಕೊಟ್ಟಿದ್ದೀರಿ. ಆ ನಂತರ ಬಂದ ಸರ್ಕಾರಗಳು ಕ್ರಮೇಣ ಅನುದಾನ ಕಡಿಮೆ ಮಾಡುತ್ತಾ ಹೋಗಿವೆ. ಹೀಗಾಗಿ ಐದು ಸಾವಿರ ಕೋಟಿ ರೂ. ಅನುದಾನ ನೀಡಿದರೆ ನಮ್ಮ ಸಮುದಾಯಕ್ಕೆ ಬಹಳ ದೊಡ್ಡ ಉಪಕಾರ ಆಗುತ್ತದೆ ಎಂದು ನಾನು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಜತೆಗೆ ಹಜ್ ಭವನದ ನವೀಕರಣಕ್ಕೆ ಐದು ಕೋಟಿ ರೂ. ಕೊಟ್ಟಿದ್ದೀರಿ ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದೇನೆ. ಆದರೆ ಕೆಲವರು ನನ್ನ ಹೇಳಿಕೆ ತಪ್ಪಾಗಿ ತಿರುಚಿ ಟ್ರೊಲ್ ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

5 ಕೋಟಿ ಎಂದಿದ್ದನ್ನು 5000 ಕೋಟಿ ಮಾಡಿದ ಪಬ್ಲಿಕ್ ಟಿವಿ

ಹಜ್ ಭವನದ ನವೀಕರಣಕ್ಕೆ ಐದು ಕೋಟಿ ರೂ. ಕೊಟ್ಟಿದ್ದಕ್ಕೆ ಸಚಿವ ಝಮೀರ್ ಅಹ್ಮದ್ ಅವರು ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದರು. ಇದನ್ನೇ ಪಬ್ಲಿಕ್ ಟಿವಿ ಸುದ್ದಿವಾಹಿನಿಯು ''ಹಜ್ ಭವನ ನವೀಕರಣಕ್ಕೆ 5000 ಕೋಟಿದ್ದಾರೆ'' ಎಂದು ಝಮೀರ್ ಅಹ್ಮದ್ ಅವರು ಹೇಳಿರುವುದಾಗಿ ವರದಿ ಮಾಡಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಇದೀಗ ಖುದ್ದು ಝಮೀರ್ ಅಹ್ಮದ್ ಅವರೇ ಸ್ಪಷ್ಟನೆ ನೀಡಿದ್ದಾರೆ. 

Similar News