ಪಂಚ ಗ್ಯಾರಂಟಿಗಳು ಜಾರಿಯಾಗುವುದು ಬಿಜೆಪಿಗೆ ಯಾಕೆ ಬೇಕಾಗಿಲ್ಲ?

Update: 2023-06-09 04:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನೂತನ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಶರತ್ತುಗಳನ್ನು ವಿಧಿಸುತ್ತಿದೆ ಎಂದು ಬಿಜೆಪಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಲು ಮುಂದಾಗಿದೆ. ಪಂಚ ಗ್ಯಾರಂಟಿಗಳ ವಿರುದ್ಧ ಬಿಜೆಪಿಯ ನಾಯಕರು ಸಾಲು ಸಾಲಾಗಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಜನಸಾಮಾನ್ಯರಲ್ಲಿ ಅನಗತ್ಯ ವದಂತಿಗಳನ್ನು ಬಿತ್ತಿ, ಗ್ಯಾರಂಟಿಗಳ ಅನುಷ್ಠಾನಕ್ಕೆ ತೊಡಕುಗಳನ್ನು ಸೃಷ್ಟಿಸುತ್ತಿದ್ದಾರೆ. ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವೈಫಲ್ಯಗಳನ್ನು ಬಿಜೆಪಿ ಟೀಕಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಬರೇ ಟೀಕೆಗಾಗಿ ಟೀಕೆ ಎನ್ನುವಂತಾದರೆ ಅದರ ಲಾಭವನ್ನು ಆಡಳಿತ ಪಕ್ಷ ತನ್ನದಾಗಿಸಿಕೊಳ್ಳುತ್ತದೆ. ಈ ಹಿಂದೆ ಬಿಜೆಪಿ ಸರಕಾರದ ಶೇ. 40 ಕಮಿಷನ್ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿದಾಗ, ಜನಸಾಮಾನ್ಯರೂ ಅದಕ್ಕೆ ಸ್ಪಂದಿಸಿದ್ದರು. ನಾಡು ಭ್ರಷ್ಟಾಚಾರದಿಂದ ಗಬ್ಬೆದ್ದು ಹೋಗಿರುವುದು ಜನರ ಅರಿವಿಗೂ ಬಂದಿತ್ತು. ಹಲವು ಅಧಿಕಾರಿಗಳು, ಗುತ್ತಿಗೆದಾರರು ಸರಕಾರದ ಭ್ರಷ್ಟಾಚಾರದ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕಾಂಗ್ರೆಸ್ ಪಕ್ಷ ‘ಗ್ಯಾರಂಟಿ ಯೋಜನೆ’ಗಳನ್ನು ಜಾರಿಗೆ ತರುತ್ತಿರುವುದನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆಗೆ ಹೊರಟಿದೆ. ಮುಖ್ಯವಾಗಿ, ಈ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಐರಕಾರ ವಿಫಲವಾದರೆ ಅಥವಾ ಅದರಲ್ಲಿ ಅಕ್ರಮಗಳು ನಡೆದರೆ ಅದರ ವಿರುದ್ಧ ಬಿಜೆಪಿ ಧ್ವನಿಯೆತ್ತುವುದು ಸರಿ. ಆದರೆ ಇನ್ನೂ ಜಾರಿಯೇ ಆಗದ ಯೋಜನೆಗಳ ಬಗ್ಗೆ ಈಗಲೇ ಬೀದಿಗಿಳಿದು ಪ್ರತಿಭಟನೆ ನಡೆಸುವ ಉದ್ದೇಶವಾದರೂ ಏನು?

ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮುನ್ನ ಬಿಜೆಪಿ, ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಆಗ ಈ ಪ್ರತಿಭಟನೆಗಳಿಗೆ ಒಂದು ಸ್ಪಷ್ಟ ಮಾರ್ಗದರ್ಶನ ಸಿಕ್ಕಿದಂತಾಗುತ್ತದೆ. ಇದೀಗ ಬಿಜೆಪಿಯೊಳಗೆ ಎಲ್ಲರೂ ನಾಯಕರೇ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ, ವಿರೋಧಾಭಾಸ ಹೇಳಿಕೆಗಳನ್ನು ನೀಡಿ ಸ್ವತಃ ನಗೆಪಾಟಲಿಗೀಡಾಗುತ್ತಿದ್ದಾರೆ. ಗ್ಯಾರಂಟಿಗಳ ವಿರುದ್ಧ ಬಿಜೆಪಿ ಹಮ್ಮಿಕೊಳ್ಳುತ್ತಿರುವ ಪ್ರತಿಭಟನೆಗಳು ಬಿಜೆಪಿಯೊಳಗಿನ ಹತಾಶೆಯನ್ನಷ್ಟೇ ಬಹಿರಂಗ ಪಡಿಸುತ್ತಿವೆ. ಬಿಜೆಪಿಯ ಈ ಪ್ರತಿಭಟನೆಗೆ ಸ್ಪಷ್ಟತೆಯನ್ನು ನೀಡುವ ದೃಷ್ಟಿಯಿಂದಲಾದರೂ, ಒಬ್ಬ ವಿರೋಧಪಕ್ಷ ನಾಯಕನ ಅಗತ್ಯವಿದೆ. ಇದೇ ಸಂದರ್ಭದಲ್ಲಿ, ಹೆಸರಿಗಷ್ಟೇ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಅವರ ಸ್ಥಾನಕ್ಕೆ ಯೋಗ್ಯ ಮುತ್ಸದ್ದಿ ನಾಯಕನನ್ನು ತಂದು ಕೂರಿಸುವ ಕೆಲಸವೂ ಬಿಜೆಪಿಯಿಂದ ನಡೆಯಬೇಕಾಗಿದೆ. ಬಿಜೆಪಿಯ ಸೋಲಿಗೆ ಪ್ರಮುಖ ಕಾರಣರೆಂದು ಗುರುತಿಸಲ್ಪಟ್ಟಿರುವ ಜೋಷಿ, ಸಂತೋಷ್ ಮೊದಲಾದ ಆರೆಸ್ಸೆಸ್ ನಾಯಕರನ್ನು ದೂರವಿಟ್ಟು, ಬಿಜೆಪಿಯನ್ನು ತಳಸ್ತರದಲ್ಲಿ ಕಟ್ಟಿ ಬೆಳೆಸಿದ ನಾಯಕರನ್ನು ಮತ್ತೆ ಮುಂಚೂಣಿಗೆ ತರಬೇಕು. ಕಾಂಗ್ರೆಸ್ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ತಲುಪುವ ಪ್ರಯತ್ನ ನಡೆಸುತ್ತಿದೆ.

ಈ ಹೊತ್ತಿನಲ್ಲಿ, ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆಯುಳ್ಳ ಮುತ್ಸದ್ದಿಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ಪಕ್ಷವನ್ನು ಪುನರ್ ಸಂಘಟಿಸಬೇಕು. ಗ್ಯಾರಂಟಿಗಳ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೊದಲು ತನ್ನ ಪ್ರತಿಭಟನೆಯಲ್ಲಿ ಜನಸಾಮಾನ್ಯರ ಹಿತಾಸಕ್ತಿ ಏನಿದೆ ಎನ್ನುವುದನ್ನು ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಗ್ಯಾರಂಟಿ’ಗಳ ಬಗ್ಗೆ ಬಿಜೆಪಿಯ ನಿಲುವನ್ನು ಸ್ಪಷ್ಟ ಪಡಿಸಬೇಕು. ಯಾಕೆಂದರೆ, ‘ಜನರಿಗೆ ಉಚಿತವಾದುದನ್ನು ನೀಡಿದರೆ ದೇಶ ದಿವಾಳಿಯಾಗುತ್ತದೆ’ ಎಂದು ಬಿಜೆಪಿಯ ಕೇಂದ್ರ ವರಿಷ್ಠರು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಜನಸಾಮಾನ್ಯರಿಗೆ ಉಚಿತ ನೀಡುವುದನ್ನು ಕಟುವಾಗಿ ವಿರೋಧಿಸಿದ್ದಾರೆ ಮಾತ್ರವಲ್ಲ, ಜನರಿಗೆ ನೀಡುತ್ತಾ ಬಂದಿದ್ದ ಹತ್ತು ಹಲವು ಸಬ್ಸಿಡಿಗಳನ್ನು ಈಗಾಗಲೇ ಕಿತ್ತುಕೊಂಡಿದ್ದಾರೆ. ಹೀಗಿರುವಾಗ, ರಾಜ್ಯ ಬಿಜೆಪಿ ಗ್ಯಾರಂಟಿಗಳ ಬಗ್ಗೆ ಯಾವ ನಿಲುವನ್ನು ಹೊಂದಿದೆ? ಗ್ಯಾರಂಟಿಗಳನ್ನು ನೀಡುವುದರಿಂದ ಜನರಿಗೆ ಒಳಿತಾಗುತ್ತದೆ ಎಂದು ಭಾವಿಸುತ್ತದೆಯೆ? ಅಥವಾ ಅದರಿಂದ ರಾಜ್ಯದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂದು ಅಭಿಪ್ರಾಯಪಡುತ್ತಿದೆಯೆ? ಜನರಿಗೆ ಉಚಿತ ವಿದ್ಯುತ್, ಉಚಿತ ಪ್ರಯಾಣ, ಉಚಿತ ಭತ್ತೆಗಳನ್ನು ನೀಡುವುದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದಾದರೆ, ಅದನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿಸಿ, ‘ಗ್ಯಾರಂಟಿ ನಿರಾಕರಿಸಿ-ನಾಡು ಉಳಿಸಿ’ ಆಂದೋಲನವನ್ನು ಮಾಡಬೇಕು. ಆದರೆ ಬಿಜೆಪಿ ಗ್ಯಾರಂಟಿಯ ಪರವಾಗಿದ್ದಂತೆ ವರ್ತಿಸುತ್ತಿದೆ. ‘‘ಗ್ಯಾರಂಟಿಗೆ ನೀಡಿರುವ ಶರತ್ತುಗಳನ್ನು ಹಿಂದೆಗೆಯಿರಿ’’ ಎಂದು ಅದು ಒಂದೆಡೆ ಒತ್ತಾಯಿಸುತ್ತಿದೆ. ಮಗದೊಂದೆಡೆ ಇದೇ ಬಿಜೆಪಿ ನಾಯಕರು ‘‘ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದಾರೆ’’ ಎಂದೂ ಹೇಳುತ್ತಿದ್ದಾರೆೆ. ಗ್ಯಾರಂಟಿಗಳಿಂದ ನಾಡು ದಿವಾಳಿಯಾಗುವುದು ನಿಜವೇ ಆಗಿದ್ದರೆ, ಗ್ಯಾರಂಟಿಗೆ ಹಾಕಿರುವ ಶರತ್ತುಗಳನ್ನು ಹಿಂದೆಗೆಯಿರಿ ಎಂಬ ಆಗ್ರಹಕ್ಕೆ ಅರ್ಥವೇನು?

ಸರಕಾರದ ಕೆಲಸ ತೆರಿಗೆ ಕಟ್ಟುತ್ತಿರುವ ಶ್ರೀಸಾಮಾನ್ಯರ ಯೋಗಕ್ಷೇಮ ನೋಡಿಕೊಳ್ಳುವುದು ಎನ್ನುವುದನ್ನು ಮರೆತು, ಜನರನ್ನು ಪರಸ್ಪರ ಕಚ್ಚಾಡಿಸುತ್ತಾ ದಿನ ಕಳೆದಿದ್ದ ಬಿಜೆಪಿ ನಾಯಕರ ಬಾಯಿಯಿಂದಲೇ ‘‘ಗ್ಯಾರಂಟಿಗಳನ್ನು ಜಾರಿಗೊಳಿಸಿ’’ ಎಂಬ ಬೇಡಿಕೆ ಬರುವಂತೆ ನೋಡಿಕೊಂಡದ್ದು ಕಾಂಗ್ರೆಸ್‌ನ ಒಂದು ಹೆಗ್ಗಳಿಕೆಯೇ ಸರಿ. ‘‘ಗ್ಯಾರಂಟಿ ಜಾರಿಗೊಳಿಸಲು ಹಣ ಎಲ್ಲಿಂದ ಹೊಂದಿಸುತ್ತೀರಿ?’’ ಎಂದು ಕೇಳುವ ಬಿಜೆಪಿ ನಾಯಕರೇ ಈ ಪ್ರಶ್ನೆಗೆ ಉತ್ತರವನ್ನೂ ನೀಡಬೇಕು. ‘‘ಕರ್ನಾಟದ ಜನತೆ ಕಟ್ಟಿದ ತೆರಿಗೆ ಹಣವನ್ನು ಏನು ಮಾಡಿದಿರಿ? ನಿಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಉಚಿತ ಯೋಜನೆಗಳನ್ನು ಜಾರಿ ಮಾಡದೇ ಇದ್ದರೂ ರಾಜ್ಯದ ಖಜಾನೆ ಯಾಕೆ ಬರಿದಾಗಿದೆ?’’ ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರೇ ಉತ್ತರಿಸಬೇಕಾಗಿದೆ. ಕಾಂಗ್ರೆಸ್ ಪಕ್ಷ ತಾನು ಘೋಷಿಸಿದ ಎಲ್ಲ ಗ್ಯಾರಂಟಿಗಳನ್ನು ಇಷ್ಟು ಬೇಗ ಜಾರಿಗೊಳಿಸುತ್ತದೆ ಎನ್ನುವುದು ಬಿಜೆಪಿಗೂ ಅನಿರೀಕ್ಷಿತ. ಕಾಂಗ್ರೆಸ್‌ನ ವೇಗಕ್ಕೆ ಅವರೇ ಬೆಚ್ಚಿ ಬಿದ್ದಿದ್ದಾರೆ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದಿಲ್ಲ ಮತ್ತು ಅದನ್ನು ಮುಂದಿಟ್ಟುಕೊಂಡು ಸರಕಾರವನ್ನು ಟೀಕಿಸಬಹುದು ಎನ್ನುವ ಬಿಜೆಪಿಯ ಯೋಜನೆ ಬುಡಮೇಲಾಗಿದೆ. ಆದುದರಿಂದಲೇ ಯಾವ ಶರತ್ತುಗಳನ್ನೂ ವಿಧಿಸದೆ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು ಎಂದು ಬಿಜೆಪಿಯ ನಾಯಕರು ಪ್ರತಿಭಟನೆಗೆ ಇಳಿದಿದ್ದಾರೆ. ಹಾಗೆ ನೋಡಿದರೆ ರಾಜ್ಯದ ಜನತೆಯೂ ಸರಕಾರ ಇಷ್ಟು ಬೇಗ ಗ್ಯಾರಂಟಿಗಳನ್ನು ಜಾರಿಗೊಳಿಸಬಹುದು ಎಂದು ನಿರೀಕ್ಷಿಸಿರಲಿಲ್ಲ.

‘ಬಿಪಿಎಲ್ ಕಾರ್ಡ್‌ದಾರರಿಗಷ್ಟೇ ಈ ಗ್ಯಾರಂಟಿ ಭಾಗ್ಯ ಸಿಗಬಹುದು’ ಎಂದು ಬಹುತೇಕರು ಭಾವಿಸಿದ್ದರು. ಯಾಕೆಂದರೆ, ಕೊಟ್ಟ ಭರವಸೆಗಳನ್ನು ಈ ಹಿಂದಿನ ಸರಕಾರ ಈಡೇರಿಸಿದ ಉದಾಹರಣೆಗಳು ಇದ್ದಿರಲಿಲ್ಲ. ಆದುದರಿಂದಲೇ ಸರಕಾರದ ನಿರ್ಧಾರ ರಾಜ್ಯದ ಜನರಿಗೆ ಅಚ್ಚರಿ, ಸಂಭ್ರಮವನ್ನುಂಟು ಮಾಡಿದೆ. ಬಿಜೆಪಿಯ ಅತಿದೊಡ್ಡ ಸಂಕಟವೆಂದರೆ, ಈ ಗ್ಯಾರಂಟಿ ಜಾರಿಗೊಳಿಸುವಲ್ಲಿ ನೂತನ ಸರಕಾರ ಸಂಪೂರ್ಣ ಯಶಸ್ವಿಯಾದರೆ, ಕಾಂಗ್ರೆಸ್‌ಗೆ ಸಾಧ್ಯವಾದುದು ಬಿಜೆಪಿಗೆ ಈ ಹಿಂದೆ ಯಾಕೆ ಸಾಧ್ಯವಾಗಲಿಲ್ಲ? ಎಂಬ ಪ್ರಶ್ನೆ ಏಳುತ್ತದೆ. ಹಲವು ಸಾವಿರ ಕೋಟಿ ರೂ.ಗಳಲ್ಲಿ ಜನರಿಗೆ ಉಚಿತ ಪ್ರಯಾಣ, ಉಚಿತ ವಿದ್ಯುತ್, ನಿರುದ್ಯೋಗ ಭತ್ತೆಗಳನ್ನು ಕೊಡಲು ಸಾಧ್ಯ ಎನ್ನುವುದು ಗೊತ್ತಾದರೆ, ಈ ಹಿಂದಿನ ಸರಕಾರ ಇಷ್ಟೆಲ್ಲ ಹಣವನ್ನು ಏನು ಮಾಡಿತು? ಬೊಕ್ಕಸದಲ್ಲಿರುವ ಹಣ ಯಾರ ತಿಜೋರಿಯನ್ನು ಸೇರಿತು? ಎಂದು ಜನರು ಬಿಜೆಪಿಯನ್ನು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ಇತರೆಲ್ಲ ರಾಜ್ಯದ ಜನರೂ ಕೇಳಲು ಶುರು ಹಚ್ಚಿದರೆ, ನರೇಂದ್ರ ಮೋದಿಯವರು ಅದಾನಿ, ಅಂಬಾನಿಗಳಿಗೆ ಉಚಿತಗಳನ್ನು ನೀಡುತ್ತಾ ಈ ದೇಶವನ್ನು ದಿವಾಳಿ ಎಬ್ಬಿಸಿರುವುದು ಬಹಿರಂಗವಾಗಿ ಬಿಡುತ್ತದೆ. ಆದುದರಿಂದಲೇ, ಗ್ಯಾರಂಟಿಗಳು ಯಾವ ಕಾರಣಕ್ಕೂ ಜಾರಿಯಾಗುವುದು ಮತ್ತು ಅದು ಯಶಸ್ವಿಯಾಗಿ ಅನುಷ್ಠಾಗೊಳ್ಳುವುದು ಬಿಜೆಪಿಗೆ ಬೇಡವಾಗಿದೆ. ಆ ಕಾರಣಕ್ಕಾಗಿಯೇ ಅದು ಪ್ರತಿಭಟನೆಗಳನ್ನು ನಡೆಸಿ, ಗ್ಯಾರಂಟಿ ಜಾರಿಗೆ ಅಡ್ಡಗಾಲು ಹಾಕಲು ಮುಂದಾಗಿದೆ. ಸದ್ಯಕ್ಕಂತೂ ಬಿಜೆಪಿಯ ಈ ಪ್ರತಿಭಟನೆ ಅವರಿಗೇ ತಿರುಗುಬಾಣವಾಗಲಿದೆ.

Similar News