ಮಂಗಳೂರು: ಜೂ.11ರಂದು ಶಕ್ತಿ ಯೋಜನೆಗೆ ಚಾಲನೆ

Update: 2023-06-09 15:56 GMT

ಮಂಗಳೂರು, ಜೂ.9: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರೂಪಿಸಲಾದ ಶಕ್ತಿ ಯೋಜನೆ ಜೂ.11ರ ಮಧ್ಯಾಹ್ನ ಜಾರಿಯಾಗಲಿದ್ದು, ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ನಡೆಸಬಹುದು.

ಈ ಯೋಜನೆಯ ಪ್ರಕಾರ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಆರಂಭದ ಹಂತದಲ್ಲಿ ಎಲ್ಲಾ ವಯೋಮಾನದ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅಥವಾ ತಾವು ಕರ್ನಾಟಕದಲ್ಲಿ ವಾಸಿಸುತ್ತಿರುವ ಬಗ್ಗೆ ಯಾವುದಾದರೂ ಒಂದು ಗುರುತು ಪತ್ರದ ದಾಖಲೆ ತೋರಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಕ.ರಾ.ರ.ಸಾ.ನಿ ನಿಗಮದ ದಕ್ಷಿಣ ಕನ್ನಡ ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 564 ಬಸ್ಸುಗಳಿದೆ. ಸ್ಮಾರ್ಟ್ ಕಾರ್ಡ್ ಆರಂಭಗೊಳ್ಳಲು ಇನ್ನು ಮೂರು ತಿಂಗಳುಗಳ ಕಾಲಾವಕಾಶವಿರುವುದರಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ಬಗ್ಗೆ ಯಾವುದಾದರೂ ಒಂದು ಗುರುತು ಪತ್ರದ ದಾಖಲೆ ತೋರಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಮಹಿಳೆಯರು ಸ್ಮಾರ್ಟ್ ಕಾರ್ಡ್  ಪಡೆಯಲು ಸೇವಾಸಿಂಧು ಪೊರ್ಟಾಲ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಈ ಯೋಜನೆ ಕೇವಲ ಕರ್ನಾಟಕ ರಾಜ್ಯಾದ್ಯಂತ ಸೀಮಿತವಾಗಿದ್ದು, ಅಂತರ್ ರಾಜ್ಯ ಬಸ್ಸುಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೂ.11ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿಯೂ ಅಂದು ಮಧ್ಯಾಹ್ನ 12.30ಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದು, ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ.

Similar News