ಜಾತೀಯತೆಯ ಮಲ ಹೊರುವುದಕ್ಕೆ ನಿಷೇಧ ಎಂದು?

Update: 2023-06-10 04:22 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಭಾರತದಲ್ಲಿನ್ನೂ ಶೇ. 34ರಷ್ಟು ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಇದೆ. ಮೊನ್ನೆಯಷ್ಟೇ ಕೇಂದ್ರ ಸರಕಾರದ ಸಮಾಜ ಕಲ್ಯಾಣ ಇಲಾಖೆಯೇ ಇದನ್ನು ಒಪ್ಪಿಕೊಂಡಿದೆ. ಇದು ನಾಚಿಕೆಗೇಡು. ಸರಕಾರವಷ್ಟೇ ಅಲ್ಲ, ಮನುಷ್ಯರೆನಿಸಿ ಕೊಳ್ಳುವವರೆಲ್ಲರೂ ತಲೆ ತಗ್ಗಿಸಬೇಕಾದಂತಹ ಅಂಕಿ ಅಂಶ ಇದು. ಮಲ ಹೊರುವ ಪದ್ಧತಿಯ ಬಗ್ಗೆ ಸಹಸ್ರಾರು ಲೇಖನಗಳು ಬಂದಿವೆ, ಇದರ ವಿರುದ್ಧ ಸಾವಿರಾರು ಪ್ರತಿಭಟನೆಗಳೂ ನಡೆದಿವೆ, ನಿಜ. ಆದರೂ 766 ಜಿಲ್ಲೆಗಳ ಪೈಕಿ 508 ಜಿಲ್ಲೆಗಳಲ್ಲಿ ಮಾತ್ರ ಈ ಪದ್ಧತಿ ಕಾಣುತ್ತಿಲ್ಲ ಎಂದು ಸರಕಾರವೇ ತಿಳಿಸಿದೆ. ಇಂತಹದ್ದೊಂದು ಪದ್ಧತಿ ಇನ್ನೂ ಜೀವಂತ ಇರುವುದಕ್ಕೆ ಈ ಸಮಾಜ ಮತ್ತು ಇಲ್ಲಿನ ವ್ಯವಸ್ಥೆಯ ಮೆದುಳಲ್ಲಿರುವ ಜಾತಿ ವ್ಯವಸ್ಥೆಗೂ ನಿಕಟ ಸಂಬಂಧ ಇದೆ. ಈ ಕೆಲಸ ಮಾಡುವವರು ಜಾತಿ ವ್ಯವಸ್ಥೆಯ ತಳಸ್ತರದಲ್ಲಿರುವ ಬೆರಳೆಣಿಕೆಯಷ್ಟು ಜಾತಿಗಳ ಮಂದಿ ಎನ್ನುವುದೂ ನಿಜ. ಈ ಕೆಲಸ ಸಂವಿಧಾನ ವಿರೋಧಿ. ಹಾಗಿದ್ದರೂ ಶೇ. 66ರಷ್ಟು ಜಿಲ್ಲೆಗಳಲ್ಲಷ್ಟೇ ಈ ಪದ್ಧತಿ ನಿರ್ಮೂಲನವಾಗಿದೆ ಎಂದರೆ ಸ್ವಾತಂತ್ರ್ಯಾ ನಂತರದ ಸರಕಾರಗಳು ಮಾಡಿದ್ದಾದರೂ ಏನು. ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ಈ ಪದ್ಧತಿ ಎಂದೋ ನಿಲ್ಲಬೇಕಿತ್ತು. ಉದಾಹರಣೆಗೆ ಇನ್ನೂರು ವರ್ಷಗಳ ಹಿಂದೆ ಉತ್ತರ ಭಾರತದ ಮೇಲ್ಜಾತಿಯ ಹಿಂದೂಗಳಲ್ಲಿದ್ದ ಸತಿ ಸಹಗಮನ ಪದ್ಧತಿಯನ್ನು ನಿಲ್ಲಿಸಿದ ಪರಿ. ಗಂಡ ಸತ್ತ ತಕ್ಷಣ ಆತನ ಜೊತೆಯಲ್ಲೇ ಆತನ ಪತ್ನಿಯನ್ನೂ ಬೆಂಕಿಗೆ ಎಸೆದು ಸುಡುತ್ತಿದ್ದರು. ಬಂಗಾಳ ಪ್ರಾಂತ ಒಂದರಲ್ಲೇ ವರ್ಷಕ್ಕೆ ಇಂತಹ ಆರು ನೂರು ಕಗ್ಗೊಲೆಗಳು ನಡೆಯುತ್ತಿದ್ದುದಕ್ಕೆ ದಾಖಲೆಗಳಿವೆ. ಆಗ ಭಾರತದ ಗವರ್ನರ್ ಜನರಲ್ ವಿಲಿಯಂ ಬೆಂಟಿಕ್ ಉಗ್ರ ಕಾನೂನುಗಳನ್ನು ತಂದು ಈ ಪಿಡುಗನ್ನು ನಿರ್ಮೂಲನ ಮಾಡಿದ್ದನು. ‘ಮೌಢ್ಯಬೀರು’ಗಳ ವಿರೋಧವನ್ನೂ ಆತ ಲೆಕ್ಕಿಸಲಿಲ್ಲ. ಆದರೆ ಸ್ವಾತಂತ್ರ್ಯಾ ನಂತರದ ಎಪ್ಪತ್ತೈದು ವರ್ಷಗಳಲ್ಲಿ ಮಲ ಹೊರುವ ಪದ್ಧತಿಯನ್ನು ನಿಲ್ಲಿಸಲು ಇಲ್ಲಿನ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ ಏಕೆ. ಇದಕ್ಕೆ ಯಾರು ಹೊಣೆ?

ಮುಲ್ಕ್ ರಾಜ್ ಆನಂದ್ ಅವರು ಒಂಭತ್ತು ದಶಕಗಳ ಹಿಂದೆ ‘ಅನ್ ಟಚೇಬಲ್’ ಕಾದಂಬರಿ ಬರೆದರು. ಮಲ ಹೊರುವ ಬಾಲಕ ಬಕಾ ಎಂಬಾತನ ಮನದಾಳದ ತುಮುಲಗಳ ಅನಾವರಣ ಮಾಡಿದ್ದರು. ಈ ಪದ್ಧತಿಯನ್ನು ಅವರು ಸಾಮಾಜಿಕ ಸಮಸ್ಯೆಯ ಸ್ವರೂಪದಲ್ಲೇ ಚಿತ್ರಿಸಿದ್ದರು. ಆಗ ‘ಧರ್ಮಭೀರು’ಗಳ ವಿರೋಧವನ್ನು ಕಡೆಗಣಿಸಿದ್ದರು. ವೃತ್ತಿ ಮತ್ತು ಸ್ವಾಭಿಮಾನದ ಸಂಘರ್ಷದ ಗೂಡಾಗಿದ್ದ ಬಕಾ ಕೊನೆಗೊಂದು ದಿನ ಆತನ ಊರ ಬಳಿ ಬಂದಿದ್ದ ಗಾಂಧೀಜಿಯವರ ಭಾಷಣ ಆಲಿಸಲು ಹೋಗಿ ನಿಲ್ಲುತ್ತಾನೆ. ವಿಪರ್ಯಾಸವೆಂದರೆ ಇವತ್ತಿಗೂ ಅಂತಹ ಸಹಸ್ರಾರು ‘ಬಕಾ’ಗಳು ಎಂತೆಂತಹದೋ ಭಾಷಣ ಆಲಿಸುತ್ತಲೇ ಇದ್ದಾರೆ. ಸ್ವತಃ ಗಾಂಧೀಜಿಯವರು ತಮ್ಮ ಶೌಚಾಲಯವನ್ನಷ್ಟೇ ಅಲ್ಲ, ಸಾರ್ವಜನಿಕ ಶೌಚಾಲಯವನ್ನೂ ಶುಚಿಗೊಳಿಸುತ್ತಿದ್ದರು. ಅವರ ಪತ್ನಿಯೂ ಕೈಗೂಡಿಸುತ್ತಿದ್ದರು. ಆಗ ಕಾಂಗ್ರೆಸ್‌ನಲ್ಲಿದ್ದ ಮೇಲ್ಜಾತಿಯ ಮುಖಂಡರೂ ಅದನ್ನೇ ಮಾಡಿದ್ದರು. ಆದರೆ ಈ ಪ್ರಯೋಗ ಜನಸಾಮಾನ್ಯರ ಮಟ್ಟಕ್ಕೆ ಇಳಿಯಲಿಲ್ಲ. ಆದರೆ ಇಂತಹ ಮಾನವತೆಯ ಆಶಯಗಳನ್ನು ಬಾಬಾ ಸಾಹೇಬರು ಸಂವಿಧಾನದ ಚೌಕಟ್ಟಿನೊಳಗೆ ತಂದರು. ಕಾನೂನುಗಳ ಭದ್ರತೆಯನ್ನೂ ಬಿಗಿಗೊಳಿಸಿದರು. ಇವತ್ತು ಸರಿಸಮಾನ ಬದುಕಿನ ಪ್ರಯೋಗಶೀಲತೆಯ ಗಾಂಧಿ ವಿಚಾರಧಾರೆಯ ಸ್ಫೂರ್ತಿ ಮತ್ತು ಸಂವಿಧಾನದ ಸುಭದ್ರತೆಯ ನೆರವಿನೊಂದಿಗೆ ಶಿಕ್ಷಣಕ್ಕೆ ತೆರೆದು ಕೊಳ್ಳಬೇಕಿದ್ದ ‘ಬಕಾ’ಗಳ ಸಂಖ್ಯೆ ಮಾತ್ರ ಕಡಿಮೆಯೇ ಆಗಿದೆ. ಆಡಳಿತಗಾರರು ನಿರೀಕ್ಷಿತ ಮಟ್ಟದಲ್ಲಿ ಇತ್ತ ಗಮನ ಹರಿಸುತ್ತಲೂ ಇಲ್ಲ, ಏಕೆ?

ಮಲ ಬಾಚುವ ಮತ್ತು ಹೊರುವ ಪದ್ಧತಿಯನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಗಳು ನಡೆದಿಲ್ಲ ಎನ್ನುವಂತಿಲ್ಲ. 1993ರಲ್ಲಿ ಮಲ ಹೊರುವ ಪದ್ಧತಿಯ ನಿಷೇಧ ಕಾಯ್ದೆ ಜಾರಿಯಾಯಿತು. ಅದೇ ವರ್ಷ ಸಫಾಯಿ ಕರ್ಮಚಾರಿಗಳ ಆಯೋಗವೂ ರಚನೆಯಾಯಿತು. 2013ರಲ್ಲಿ ಈ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಯಿತು. ಮಲ ಹೊರುವ ಕೆಲಸವನ್ನು ಮಾಡಿಸಿದವರಿಗೆ ಒಂದು ವರ್ಷದ ಜೈಲು ಶಿಕ್ಷೆ ನೀಡುವ ಕಾಯ್ದೆ ತರಲಾಯಿತು. ಆ ಉದ್ಯೋಗಕ್ಕೆ ಅಂಟಿ ಕೊಂಡಿದ್ದವರಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಚುರುಕುಗೊಂಡಿತು. ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರೇ ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿಯೇ ಐದು ಸಾವಿರಕ್ಕೂ ಹೆಚ್ಚು ಮಂದಿ ಈ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಮಲದ ಗುಂಡಿಗಳ ಮುಚ್ಚಳ ತೆಗೆದು ಏಕಾಏಕಿ ಒಳಗಿಳಿದು ಉಸಿರು ಕಟ್ಟಿ ಸತ್ತವರ ಸಂಖ್ಯೆಯೇ 2017ರಿಂದ 21ರ ನಡುವೆ 330 ಎಂದು ಕೇಂದ್ರ ಸರಕಾರದ ದಾಖಲೆಗಳೇ ಹೇಳುತ್ತವೆ. ಇಂತಹ ಮಲದ ಗುಂಡಿಗಳನ್ನು ದುರಸ್ತಿ ಮಾಡುವಾಗ ಅತ್ಯಾಧುನಿಕ ಸಲಕರಣೆಗಳನ್ನು ಬಳಸಬೇಕೆಂದೂ, ಕಾರ್ಮಿಕರನ್ನು ಅದರ ಒಳಗೆ ಇಳಿಸಬಾರದೆಂದೂ ಹಿಂದೆಯೇ ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ. ಪ್ರಸಕ್ತ ದೇಶದಲ್ಲಿ ಈ ಕೆಲಸ ಮಾಡುವ 58 ಸಾವಿರ ಮಂದಿಯನ್ನು ಗುರುತಿಸಲಾಗಿದ್ದು, ಅವರಿಗೆ ಬೇರೆಯೇ ಉದ್ಯೋಗದ ಕೌಶಲ್ಯದ ತರಬೇತಿಗೆ ಸೆಳೆಯಲು ಪ್ರಯತ್ನ ನಡೆದಿದೆ ಎಂದು ಇದೀಗ ಕೇಂದ್ರ ಸರಕಾರದ ಸಮಾಜ ಕಲ್ಯಾಣ ಇಲಾಖೆಯವರೂ ಹೇಳಿದ್ದಾರೆ. ಈ ಮೂಲಕ ಸಮಸ್ಯೆಯ ವ್ಯಾಪಕತೆ ಮತ್ತು ಭೀಕರತೆಯನ್ನು ಸರಕಾರವೇ ಒಪ್ಪಿಕೊಂಡಂತಾಗಿದೆ.

ಒಂದೂವರೆ ದಶಕದ ಹಿಂದೆಯೇ ಆಗಿನ ಸರಕಾರ ಮಲ ಹೊರುವವರನ್ನು ಆ ಉದ್ಯೋಗದಿಂದ ಬಿಡಿಸಿ, ಪುನರ್ವಸತಿ ಕಲ್ಪಿಸುವುದಕ್ಕೆ ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪ್ರತೀ ಬಜೆಟ್‌ನಲ್ಲೂ ಹಣ ಹಂಚಿಕೆ ಕಡಿಮೆಯಾಗುತ್ತಿದೆ. 2019-20ರ ಪರಿಷ್ಕೃತ ಬಜೆಟ್‌ನಲ್ಲಿ ರೂ. 100 ಕೋಟಿ, 2020-21ರಲ್ಲಿ ರೂ. 30 ಕೋಟಿ, 2021-22ರಲ್ಲಿ 43 ಕೋಟಿ ರೂ.ಗಳ ಹಂಚಿಕೆಯಾಗಿದೆ. ಹೋದ ಬಜೆಟ್ ಸಂದರ್ಭದಲ್ಲಂತೂ ಈ ಯೋಜನೆಯನ್ನೇ ‘ನಮಸ್ತೆ’ ಎಂಬ ಯೋಜನೆಯ ಅಡಿ ವಿಲೀನಗೊಳಿಸಲಾಗಿದೆ. ಇದು ಈ ಸಮಸ್ಯೆಯ ಬಗ್ಗೆ ಆಡಳಿತಗಾರರ ಲಘು ಧೋರಣೆಯಲ್ಲದೆ ಇನ್ನೇನು. ಇದೀಗ ಬಹುತೇಕ ಕಡೆ ಮಲಗುಂಡಿಗಳನ್ನು ಸ್ವಚ್ಛಗೊಳಿಸುವುದಕ್ಕೆ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ಈ ಯಂತ್ರಗಳನ್ನು ಬಳಸಲು ಭಂಗಿ ಸಮುದಾಯದವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಸರಿಯಲ್ಲ. ಆ ಸಮುದಾಯದವರಿಗೆ ಪುನರ್ವಸತಿ ಯೋಜನೆಯ ಅಡಿಯಲ್ಲಿ ಬೇರೆ ಉದ್ಯೋಗಕ್ಕೆ ಕೌಶಲ್ಯ ತರಬೇತಿ ನೀಡುವುದು ಸೂಕ್ತ.

ಇತರ ಸಮುದಾಯದ ಆಸಕ್ತ ನಿರುದ್ಯೋಗಿಗಳಿಗೂ ಇಂತಹ ಯಂತ್ರಗಳ ಬಳಕೆಯ ತರಬೇತಿ ನೀಡಿ, ಉದ್ಯೋಗ ನೀಡ ಬಹುದಲ್ಲ. ಮಲಗುಂಡಿಗಳನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುವಾಗಲೂ ಆ ಒಂದೇ ಸಮುದಾಯವನ್ನೇ ಬಳಸಿಕೊಳ್ಳುವುದು ಜಾತೀಯತೆಯ ಕ್ರೌರ್ಯವಲ್ಲದೆ ಇನ್ನೇನು. ಸರಕಾರ ಕೂಡಾ ಮಲಗುಂಡಿಗಳ ಶುಚಿತ್ವ, ದುರಸ್ತಿಗಳಿಗೆ ಅಗತ್ಯ ಯಂತ್ರಗಳನ್ನು ಹೆಚ್ಚು ಹೆಚ್ಚು ಖರೀದಿಸಬೇಕು. ಬಾಹ್ಯಾಕಾಶ ಸಂಶೋಧನೆಯೂ ಸೇರಿದಂತೆ ಅನೇಕ ವಿಷಯಗಳಲ್ಲಿ ನಾವು ಹೆಚ್ಚುಗಾರಿಕೆ ಹೊಂದಿದ್ದರೂ, ಹಳ್ಳಿಹಳ್ಳಿಗಳಲ್ಲಿ ಇವತ್ತು ಶಾಲೆಗಳು ಗಿಜಿಗಿಜಿ ಎನ್ನುತ್ತಿದ್ದರೂ ಮಲ ಹೊರುವ ಪದ್ಧತಿ ದೊಡ್ಡ ಮಟ್ಟದಲ್ಲಿಯೇ ಜೀವಂತ ಇದೆ ಎಂದರೆ ಇಡೀ ಸಮಾಜವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಯಂತ್ರಗಳನ್ನು ಹೆಚ್ಚಿಸುವುದು ಅನಿವಾರ್ಯ. ಆದರೆ ಅದೊಂದರಿಂದಲೇ ಸಮಸ್ಯೆ ಪರಿಹಾರ ಸಾಧ್ಯ ಎಂದೆನಿಸುತ್ತಿಲ್ಲ. ಮೊದಲಿಗೆ ನಮ್ಮೆಲ್ಲರ ಮೆದುಳಿಗೆ ಅಂಟಿರುವ ಜಾತೀಯತೆಯ ಮಲವನ್ನು ಶುಚಿ ಗೊಳಿಸಬೇಕಿದೆ. ಆಗ ಮಾತ್ರ ಎಲ್ಲರೂ ಗೌರವಯುತವಾದ ಕೆಲಸ ಮಾಡುತ್ತಾ ಸರಿಸಮಾನವಾಗಿ ಬದುಕುವುದು ಎಂಬುದಾಗಿ ಬಾಬಾ ಸಾಹೇಬರು ಸಂವಿಧಾನದಲ್ಲಿ ಬರೆದಿರುವ ಆಶಯ ಅನುಷ್ಠಾನಕ್ಕೆ ಬಂದಂತಾಗುತ್ತದೆ.

Similar News