‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಡಾ.ತೇಜಸ್ವಿ ಕಟ್ಟೀಮನಿ ಆಯ್ಕೆ

Update: 2023-06-09 18:51 GMT

ಬೆಂಗಳೂರು, ಜೂ. 9: ಹಿರಿಯ ಶಿಕ್ಷಣ ತಜ್ಞ, ಲೇಖಕ ಡಾ.ತೇಜಸ್ವಿ ಕಟ್ಟೀಮನಿ ಅವರಿಗೆ 2023ನೆ ಸಾಲಿನ ‘ಕಸಾಪ ನೀಡುವ ಪ್ರತಿಷ್ಠಿತ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ’ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.  

ಪ್ರಶಸ್ತಿಯು 51ಸಾವಿರ ರೂ.ನಗದು, ಸ್ಮರಣಿಕೆ, ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಇದುವರೆಗೂ ನಾಡಿನ 13 ಜನ ಗಣ್ಯರಿಗೆ ಪರಿಷತ್ತಿನ ಪ್ರತಿಷ್ಠಿತ ಒಡೆಯರ್ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಈ ಬಾರಿಯ ಆಯ್ಕೆ ಸಮಿತಿಯು 2023ನೆಯ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ತೇಜಸ್ವಿ ಕಟ್ಟೀಮನಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದವರು.

ಕೇಂದ್ರಿಯ ಬುಡಕಟ್ಟು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕಟ್ಟಿಮನಿಯವರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ರಿವಾಯತ್ ಪದಗಳು, ಜ್ಯೋತಿಬಾ ಫುಲೆ (ರೇಖಾಚಿತ್ರ), ಮುಂಗಾರು ಮಳೆ, ಮಂಡಲ ಕಮೀಷನ್: ಒಂದು ಅಧ್ಯಯನ, ಹುಡುಗಿ ಪ್ರೀತಿಸುವುದೇ ಹೀಗೆ (ಮೂಲ ಕವಿತೆಗಳ ಸಂಗ್ರಹ), ಕತ್ತಲೆಯ ಅಳಿವಿನಾಚೆ (ಲೇಖನಗಳ ಸಂಗ್ರಹ) ಹೀಗೆ ಅವರು ಬಹುಮುಖಿ ಕೊಡುಗೆಯನ್ನು ನೀಡಿದ್ದಾರೆ.

ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ, ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಇದ್ದರು.

Similar News