ಖಾಸಗಿಯವರ ಹಿತಾಸಕ್ತಿಗೆ ಮಣಿಯದೆ ಜನಹಿತಕ್ಕೆ ಆದ್ಯತೆ: ದಿನೇಶ್ ಗುಂಡೂರಾವ್

Update: 2023-06-10 08:04 GMT

ಪ್ರಸಕ್ತ ಕಾಂಗ್ರೆಸ್ ಸರಕಾರದಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಕ್ಷೇತ್ರದಲ್ಲಾಗಬೇಕಾದ ಸುಧಾರಣೆಯ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಶೀಘ್ರ ಅಂತ್ಯ"

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನಾನು ಯಾವುದೇ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಇಟ್ಟಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ನನಗೆ ದ.ಕನ್ನಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದ್ದು, ಉತ್ತಮ ರೀತಿಯಲ್ಲಿ ಕಾಯನಿರ್ವಹಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅಂತ್ಯ ಹಾಡಲಿದ್ದು, ಜಿಲ್ಲೆಯ ಎಲ್ಲ ಜನತೆ ಸೌಹಾರ್ದದಿಂದ ಬದುಕುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. - ದಿನೇಶ್ ಗುಂಡೂರಾವ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

► ಆರೋಗ್ಯ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದೀರಿ. ಅಭಿನಂದನೆಗಳು. ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೀರಿ. ಈಗ ನಿಮ್ಮ ಆದ್ಯತೆಗಳೇನು?

ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತಾಗಬೇಕು. ಖಾಸಗಿ ಆಸ್ಪತ್ರೆಗಳಲ್ಲಿನ ವೆಚ್ಚ ಲಕ್ಷ ಲಕ್ಷ ರೂ. ಆಗು ವುದಿದೆ. ಆರೋಗ್ಯ ವ್ಯವಸ್ಥೆ ದೃಢವಾಗಿಸುವುದೇ ನಮ್ಮ ಪ್ರಯತ್ನವಾಗಬೇಕು. ಆರೋಗ್ಯ ಕೆಡದಂತೆ ಕಾಳಜಿಯೂ ಅಷ್ಟೇ ಮುಖ್ಯ. ಕಾಯಿಲೆ ಬಂದ ನಂತರ ಚಿಕಿತ್ಸೆ ಕೊಡುವುದಕ್ಕಿಂತ ಆರೋಗ್ಯ ಕೆಡದಂತೆ ನೋಡುವ ಜವಾ ಬ್ದಾರಿಯೂ ಇದೆ. ಅದರ ಬಗ್ಗೆಯೂ ಆದ್ಯತೆ ಕೊಡಬೇಕಿದೆ.

► ಬಹಳ ನಿರ್ಣಾಯಕ ಘಟ್ಟದಲ್ಲಿ ನೀವು ಈ ಖಾತೆ ವಹಿಸಿಕೊಳ್ಳುತ್ತಿದ್ದೀರಿ. ಈಗಾಗಲೇ ಆರೋಪ, ಕಳಂಕಗಳನ್ನು ಈ ಖಾತೆ ಹೊತ್ತಿದೆ. ರಾಷ್ಟ್ರೀಯ ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯ 19ನೇ ಸ್ಥಾನದಲ್ಲಿದೆ. ಇದೆಲ್ಲವನ್ನೂ ಹೇಗೆ ನಿಭಾಯಿಸುವಿರಿ?

ಕರ್ನಾಟಕ ಎಷ್ಟೋ ವಿಚಾರಗಳಲ್ಲಿ ಉತ್ತಮ ಮಟ್ಟದಲ್ಲಿದೆ. ಕೆಲವದರಲ್ಲಿ ಕೆಳಮಟ್ಟದಲ್ಲಿಯೂ ಇದ್ದೇವೆ. ಅದನ್ನು ಉತ್ತಮಪಡಿಸಬೇಕಿದೆ. ಇಲಾಖೆಯಲ್ಲಿ ಪಾರದರ್ಶಕತೆ ತರಬೇಕು. ಸೇವೆಗೆ ಹೆಚ್ಚು ಒತ್ತು ಕೊಡಬೇಕು. ಸಿಬ್ಬಂದಿ ಇನ್ನೂ ಚುರುಕಾಗಿ ಕೆಲಸ ಮಾಡಬೇಕು. ವಿವಾದಗಳು, ಇಲಾಖೆಗೆ ಬಂದಿರುವ ಕೆಟ್ಟ ಹೆಸರು ನಿವಾರಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಇರುತ್ತದೆ. ಜನರಿಗೆ ಅನುಕೂಲವಾಗುವಂತಿರುವುದು ಮುಖ್ಯ. ಆಗ ಉಳಿದದ್ದೆಲ್ಲ ಸರಿಹೋಗುತ್ತದೆ. ಜನಸಾಮಾನ್ಯರಿಗೆ ಒಳ್ಳೆಯ ಸೇವೆ ಕಡಿಮೆ ವೆಚ್ಚದಲ್ಲಿ ಸಿಗುವಂತಾಗಬೇಕು. ಆ ಒಂದು ದಿಕ್ಸೂಚಿ ಇಟ್ಟುಕೊಂಡು ಕೆಲಸ ಮಾಡುತ್ತೇನೆ.

► ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಬಹಳ ವರ್ಷಗಳಿಂದ ಇದೆ. ಇದರ ಬಗ್ಗೆ?

ನಮ್ಮಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು ದಕ್ಷಿಣ ಕರ್ನಾಟಕ, ಹಳೇ ಮೈಸೂರು ಕಡೆ ಹೆಚ್ಚಿವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗಗಳಲ್ಲಿ ಕಡಿಮೆ. ಅದು ಸಮತೋಲನವಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆದ್ಯತೆ ಕೊಡಲೇಬೇಕು. ಸಮುದಾಯ ಆರೋಗ್ಯ ಕೇಂದ್ರಗಳು ಇವಕ್ಕಿಂತ ದೊಡ್ಡ ಮಟ್ಟದಲ್ಲಿರುವಂಥವು. ಕಟ್ಟಡ ನಿರ್ಮಾಣ, ಉಪಕರಣ ಎಲ್ಲ ವ್ಯವಸ್ಥೆ ಆಗಿದೆ. ಆದರೆ ಸಿಬ್ಬಂದಿ ಕೊರತೆ ಇದೆ. ಅದನ್ನು ಸರಿಪಡಿಸುವ ಸವಾಲೂ ಇದೆ. ವೈದ್ಯರು, ಸ್ಪೆಷಲಿಸ್ಟ್ ಗಳು ಗ್ರಾಮೀಣ ಭಾಗಗಳಿಗೆ, ದೂರ ದೂರ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗುವುದಿಲ್ಲ. ಟೆಕ್ನಿಷಿಯನ್‌ಗಳೂ ಹೋಗುವುದಿಲ್ಲ. ಕೇಳಿದರೂ ಸಿಬ್ಬಂದಿ ಸಿಗದ ಸ್ಥಿತಿಯಿದೆ. ಯಾರೂ ಮುಂದೆ ಬರುವುದಿಲ್ಲ. ಇಂಥ ಪ್ರಾಯೋಗಿಕ ಸಮಸ್ಯೆಗಳಿವೆ. ಅದನ್ನೆಲ್ಲ ಹಂತಹಂತವಾಗಿ ಬಗೆಹರಿಸಿಕೊಂಡು ಹೋಗಬೇಕು.

► ದಿಲ್ಲಿಯಲ್ಲಿ ಮೊಹಲ್ಲಾ ಕ್ಲಿನಿಕ್ ಮಾಡಿದ್ದಾರೆ. ಹತ್ತಿರದಲ್ಲಿ ಆರೋಗ್ಯ ಸೇವೆ ಸಿಗ ಬೇಕೆಂದರೆ ಈ ಥರದ ಯೋಜನೆ ಅಗತ್ಯವಿದೆ ಎನ್ನಿಸುತ್ತದೆಯೆ?

ನಗರ ಪ್ರದೇಶದಲ್ಲಿ ಅಂಥದನ್ನು ಮಾಡುವುದು ಒಳ್ಳೆಯದೇ. ಅದು ಸರಿಯಾಗಿ ಅನುಷ್ಠಾನಗೊಳ್ಳಬೇಕು. ‘ನಮ್ಮ ಕ್ಲಿನಿಕ್’ ಎಂದು ಮಾಡಿರುವುದರ ಅನುಷ್ಠಾನ ಸರಿಯಾಗಿ ಆಗಬೇಕು. ಜನರು ಅಲ್ಲಿಗೆ ಹೋದಾಗ ವೈದ್ಯರೆಲ್ಲ ಇರಬೇಕಿರುವುದು ಅಗತ್ಯ. ಜನಸಾಮಾನ್ಯರು, ಕಾರ್ಮಿಕರು ಕ್ಲಿನಿಕ್‌ಗೆ ಹೋಗುವುದು ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ. ಬೇರೆ ಸಮಯದಲ್ಲಿ ಅವರಿಗೆ ಕೆಲಸವಿರುತ್ತದೆ. ಆ ಸಮಯದಲ್ಲಿ ಕ್ಲಿನಿಕ್‌ಗಳು ಸರಿಯಾಗಿ ನಡೆಯಬೇಕು.

ನಮ್ಮ ಕ್ಲಿನಿಕ್ ಅನ್ನು ಪೂರ್ತಿಯಾಗಿ ನಾನು ಪರಿಶೀಲನೆ ಮಾಡುತ್ತಿದ್ದೇನೆ. ಅದನ್ನು ಉತ್ತಮಪಡಿಸುವುದಕ್ಕೆ ಬಿಬಿಎಂಪಿ ಜೊತೆ ಸೇರಿ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ತೀರ್ಮಾನ ಮಾಡಬೇಕಿದೆ.

► ನೀವು ಹೊಸ ಯೋಜನೆ ತರಬೇಕೆಂದರೆ ಹೆಚ್ಚು ಹಣಕಾಸಿನ ಅಗತ್ಯವಿದೆ. ನಿಮ್ಮ ಬೇಡಿಕೆಯೇನು?

ಆರೋಗ್ಯ ಇಲಾಖೆ ಬಹಳ ಪ್ರಮುಖ ಇಲಾಖೆ. ಆದ್ದರಿಂದ ಇದಕ್ಕೆ ಹೆಚ್ಚು ಮಹತ್ವ ಕೊಡಬೇಕು. ಜಿಡಿಪಿಯ ಶೇ. 7ರಷ್ಟು ಅನುದಾನ ಆರೋಗ್ಯ ಇಲಾಖೆಗೆ ಕೊಡಬೇಕು ಎಂಬ ಮಾನದಂಡ ಇದೆ. ಹೆಚ್ಚು ಮಾಡುವ ಪ್ರಯತ್ನ ಆಗುತ್ತದೆ. ಸರಕಾರ ಮಾತ್ರವಲ್ಲ, ಖಾಸಗಿ ಕ್ಷೇತ್ರದವರನ್ನೂ ಸೇರಿಸಿಕೊಂಡು, ಅವರಿಂದ ಹೂಡಿಕೆ ಬರುವಂತೆ ಪ್ರಯತ್ನ ಮಾಡಬೇಕೆಂದಿದ್ದೇವೆ. ಒಂದು ಸಮಾಜಕ್ಕೆ ಆರೋಗ್ಯ ಮತ್ತು ಶಿಕ್ಷಣ ಬಹಳ ಮುಖ್ಯ. ನಮ್ಮ ಪ್ರಣಾಳಿಕೆಯಲ್ಲಿಯೂ ಆರೋಗ್ಯ ಇಲಾಖೆಗೆ ಹೆಚ್ಚು ಅನುದಾನ ಒದಗಿಸುವ ಮಾತು ಹೇಳಿದ್ದೇವೆ. ಜನರ ಮುಂದೆ ಏನು ಹೇಳಿದ್ದೇವೆಯೊ ಅದನ್ನು ಅನುಷ್ಠಾನ ಮಾಡಲು ಖಂಡಿತವಾಗಿಯೂ ಪ್ರಯತ್ನವಿರುತ್ತದೆ.

► ಒಂದು ಅಂದಾಜಿನ ಪ್ರಕಾರ ಜನ ತಮ್ಮ ದುಡಿಮೆಯ ಶೇ. 60ರಷ್ಟನ್ನು ಆರೋಗ್ಯದ ಮೇಲೆ ಖರ್ಚು ಮಾಡುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಅದನ್ನು ತಪ್ಪಿಸಲು ಏನು ಕ್ರಮ?

ಸರಕಾರಿ ಆಸ್ಪತ್ರೆಗಳು ಚೆನ್ನಾಗಿಯೇ ನಡೆಯುತ್ತಿವೆ. ಕೆಲವಂತೂ ಒಳ್ಳೆಯ ಹೆಸರನ್ನೂ ಗಳಿಸಿವೆ. ರಾಷ್ಟ್ರಮಟ್ಟದಲ್ಲಿಯೂ ಹೆಸರು ಮಾಡಿವೆ. ಬೆಂಗಳೂರು ನಗರದಲ್ಲಿ ಜಯದೇವ, ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ಬೌರಿಂಗ್ ಇವೆಲ್ಲ ಚೆನ್ನಾಗಿಯೇ ಇವೆ. ಅನೇಕ ಮಂದಿ ಸರಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಆದ್ಯತೆ ಕೊಡುತ್ತಾರೆ. ಸರಕಾರಿ ಆಸ್ಪತ್ರೆಯೆಂದರೆ ಚೆನ್ನಾಗಿರುವುದಿಲ್ಲ ಎಂಬ ಏನೋ ಒಂದು ಭಾವನೆ ಮಧ್ಯಮ ವರ್ಗದವರಲ್ಲಿ ಜಾಸ್ತಿಯಿದೆ. ನಾವು ಅದನ್ನು ಉತ್ತಮಪಡಿಸಬೇಕು. ಈ ಆಸ್ಪತ್ರೆಗಳ ಆಡಳಿತ ಚೆನ್ನಾಗಿ ಇರಬೇಕು. ಅಲ್ಲಿರುವ ವೈದ್ಯಾಧಿಕಾರಿ, ಮೇಲ್ವಿಚಾರಕರು ಆಸಕ್ತಿ ತೆಗೆದುಕೊಂಡು ಕೆಲಸ ಮಾಡಿದರೆ ಸಾಕಷ್ಟು ಬದಲಾವಣೆಗಳು ಅವರಿಂದಲೇ ಸಾಧ್ಯ.

► ಅಧಿಕಾರಿಗಳು ಬದಲಾಗ ಬೇಕಾಗುತ್ತದೆಯೆ?

ಇರುವವರಿಂದಲೇ ಕೆಲಸ ಆಗಬೇಕು. ಎಲ್ಲರನ್ನೂ ಸಾರಾ ಸಗಟಾಗಿ ತೆಗೆದುಹಾಕಿ ಹೊಸಬರನ್ನು ನೇಮಿಸಲು ಆಗುವುದಿಲ್ಲ. ಅದು ಪರಿಹಾರವೂ ಅಲ್ಲ. ಇರುವವರಿಗೇ ಪ್ರೇರಣೆಯಾಗುವಂಥ ವಾತಾವರಣ ನಿರ್ಮಿಸುವುದು, ಅವರನ್ನು ಗುರುತಿಸುವುದು, ಒಳ್ಳೆಯ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುವುದು ಇಂಥ ಕ್ರಮಗಳು ಆಗಬೇಕು. ತಾವು ಇಂಥಲ್ಲಿಯೇ ಹೋಗಬೇಕು ಎಂಬದರಲ್ಲಿಯೇ ಅಧಿಕಾರಿಗಳು ಕಾಲ ಕಳೆದರೆ ಸಂಸ್ಥೆಯನ್ನು ಬೆಳೆಸಲು ಆಗುವುದಿಲ್ಲ. ಜಯದೇವ ಆಸ್ಪತ್ರೆಯನ್ನು ಡಾ.ಮಂಜುನಾಥ್ ನೋಡಿಕೊಳ್ಳುತ್ತಿರುವ ರೀತಿಯಲ್ಲಿ ಎಲ್ಲಡೆಯೂ ಅವರವರ ಕೆಲಸದ ಸ್ಥಳದಲ್ಲಿ ಹಾಗೆ ಉತ್ತಮಪಡಿಸಬಹುದು. ಮಾನವ ಸಂಪನ್ಮೂಲವನ್ನು ಸಶಕ್ತ ಮಾಡುವುದು ಮುಖ್ಯ.

► ಕರ್ನಾಟಕದ ಮಟ್ಟಿಗೆ ಆರೋಗ್ಯ, ಶಿಕ್ಷಣ ಇಲಾಖೆಯಲ್ಲಿ ನೆನಪಿಟ್ಟು ಕೊಳ್ಳುವಂಥ ಹೆಸರುಗಳು ಬಹಳ ಕಡಿಮೆ. ಶಿಕ್ಷಣ ಇಲಾಖೆಯಲ್ಲಿ ಗೋವಿಂದೇಗೌಡರೊಬ್ಬರ ಹೆಸರು ಮಾತ್ರವೇ. ನೀವು ಅಂಥದೊಂದು ಕೆಲಸ ಮಾಡಬಹುದೆ?

ಈಗಲೇ ಹೇಳುವುದಿಲ್ಲ. ಬಹುಶಃ ಒಂದು ವರ್ಷದ ನಂತರ ಮಾತನಾಡಿದರೆ ಆಗೊಂದು ಮೌಲ್ಯಮಾಪನ ಮಾಡಬಹುದು. ಯಾರೇ ಬಂದರೂ ಕೆಲಸ ಚೆನ್ನಾಗಿ ಮಾಡಬೇಕೆಂಬ ಆಸಕ್ತಿ, ಬದಲಾವಣೆ ತರುವ, ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಆಸೆ ಇದ್ದೇ ಇರುತ್ತದೆ. ನನಗೂ ಅಂಥ ಇಚ್ಛೆ ಇದೆ. ಮಾಡಿ ತೋರಿಸಬೇಕೇ ಹೊರತು ಮಾತನಾಡುವುದರಿಂದ ಪ್ರಯೋಜನವಿಲ್ಲ.

► ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊ ಪ್ರಕಾರ ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದು ಬಹಳ ದೊಡ್ಡ ಸಮಸ್ಯೆ. ಕೊರೋನ ಬಳಿಕವಂತೂ ಮಾನಸಿಕ ಖಿನ್ನತೆ ದೊಡ್ಡ ಮಟ್ಟದಲ್ಲಿದೆ. ಇವನ್ನೆಲ್ಲ ನಿಭಾಯಿಸುವ ನಿಟ್ಟಿನ ಆಲೋಚನೆಗಳು ಏನಾದರೂ ಇವೆಯೆ?

ನಿಮ್ಹಾನ್ಸ್ ಸಂಸ್ಥೆಯಿದೆ. ಎರಡು ಕಡೆ ಮಾಡಿದ್ದೇವೆ. ಮಾನಸಿಕ ಖಿನ್ನತೆ ಆಧುನಿಕ ಕಾಯಿಲೆಯೇ ಆಗಿದೆ. ಬಹಳ ವ್ಯಾಪಕವಾಗಿದೆ. ಅದನ್ನೂ ಆದ್ಯತೆಯಿಂದ ನೋಡಬೇಕಾಗಿದೆ. ಆತ್ಮಹತ್ಯೆ ಮಾತ್ರವಲ್ಲ, ಖಿನ್ನತೆಯಿಂದ ಬದುಕನ್ನೇ ಹಾಳುಮಾಡಿಕೊಳ್ಳುವವರಿದ್ದಾರೆ. ಕೆಲಸ ಮಾಡದೆ, ಅಡಿಕ್ಷನ್‌ಗೆ ಒಳಗಾಗಿ ಬದುಕು, ಆರೋಗ್ಯ ಎಲ್ಲ ಕೆಡಿಸಿಕೊಳ್ಳುತ್ತಾರೆ. ಹೇಗೆ ಅದರ ಬಗ್ಗೆ ಜಾಗೃತಿ ಮೂಡಿಸಬಹುದು ಎಂಬ ನಿಟ್ಟಿನಲ್ಲಿ ಕೆಲಸವಾಗಬೇಕು. ನಿಯಮಿತ ಆರೋಗ್ಯ ತಪಾಸಣೆ ಎಲ್ಲ ಕಡೆ ಆಗುವಂತಾಗಬೇಕು. ಬಡವರು, ಜನಸಾಮಾನ್ಯರು ತಾವಾಗಿಯೇ ತಪಾಸಣೆಗೆ ಹೋಗುವುದಿಲ್ಲ. ಕಾಯಿಲೆ ಇದ್ದರೂ ಗೊತ್ತಿರುವುದಿಲ್ಲ. ಜೀವನ ಸಾಗಿಸುತ್ತಿರುತ್ತಾರೆ. ಹಾಗಾಗಿ ಕಾಯಿಲೆ ಗಂಭೀರ ಮಟ್ಟಕ್ಕೆ ಹೋಗುವ ಮುನ್ನವೇ ತಮ್ಮ ತೊಂದರೆಯ ಬಗ್ಗೆ ತಿಳಿಯುವಂತಾಗಲು ದೊಡ್ಡ ಮಟ್ಟದ ಕಾರ್ಯಕ್ರಮ ಜಾರಿಗೆ ತರುವ ಉದ್ದೇಶವಿದೆ. ಗ್ರಾಮಾಂತರ ಭಾಗದಲ್ಲಿ ಜನರ ಬಳಿಗೆ ಹೋಗಿ ತಪಾಸಣೆ ನಡೆಸಿ, ಕಾಯಿಲೆಯಿದ್ದರೆ ಬೇಗ ಅವರಿಗೆ ಚಿಕಿತ್ಸೆ ಆರಂಭಿಸಲು ಇದು ನೆರವಾಗಲಿದೆ.

► ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಇವನ್ನು ಬಡವರ, ಜನಸಾಮಾನ್ಯರ ಬಳಿಗೆ ಕೊಂಡೊಯ್ಯಲು ಖಾಸಗಿ ವ್ಯವಸ್ಥೆ ಬಿಡುವುದಿಲ್ಲ. ಅದೊಂದು ಮಾಫಿಯಾ. ಇದನ್ನು ಹೇಗೆ ನಿಭಾಯಿಸುತ್ತೀರಿ?

ಎಲ್ಲಾ ಕ್ಷೇತ್ರಗಳಲ್ಲೂ ಅವರವರ ಹಿತಾಸಕ್ತಿಗಾಗಿ ಕೆಲಸ ಮಾಡುವ ಜನ ಇದ್ದೇ ಇದ್ದಾರೆ. ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ. ನನ್ನ ಆದ್ಯತೆ ನಮ್ಮ ಜನರಿಗೆ ಅನುಕೂಲ ಮಾಡಿಕೊಡುವುದು. ಕಡಿಮೆ ಬೆಲೆಯಲ್ಲಿ ಔಷಧ ಅಥವಾ ಗುಣಮಟ್ಟದ ಚಿಕಿತ್ಸೆ ಕೊಡಿಸುವುದು. ಯಾರೋ ಒಬ್ಬರಿಗೆ ಸಹಾಯ ಮಾಡುವುದು, ಮತ್ತೊಬ್ಬರಿಗೆ ಮಾಡದಿರುವುದಲ್ಲ. ಆಗ ವ್ಯವಸ್ಥೆ ತಾನಾಗಿಯೇ ಸರಿಹೋಗುತ್ತದೆ.

► ಕೋವಿಡ್ ಕಾಲದಲ್ಲಿನ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ದೊಡ್ಡ ಆರೋಪ ಮಾಡಿತು. ಈಗ ನೀವು ಮಂತ್ರಿಯಾಗಿದ್ದೀರಿ. ತನಿಖೆ ಮಾಡಿಸುತ್ತೀರಾ?

ಅವೆಲ್ಲದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಅದನ್ನು ನೋಡಿದ ಬಳಿಕ ಏನು ಮಾಡಬೇಕೆಂಬುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ.

► ಚಾಮರಾಜನಗರ ದುರಂತ ಎಲ್ಲರಿಗೂ ನೆನಪಿದೆ. ಅಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ಕೇಳಿದ್ದೀರಿ. ತನಿಖೆಗೂ ಆಗ್ರಹ ಮಾಡಿದ್ದೀರಿ?.

ಸರಕಾರದ ಮಟ್ಟದಿಂದ ಅವರಿಗೆ ಪರಿಹಾರ ಕೊಟ್ಟಿರಬೇಕೆನ್ನಿಸುತ್ತದೆ. ಅದರ ಬಗ್ಗೆ ವಿಚಾರಿಸುತ್ತೇನೆ. ಆದರೆ ಆ ದುರಂತಕ್ಕೆ ಏನು ಕಾರಣ ಎಂಬುದರ ಮರುತನಿಖೆ ಮಾಡಬೇಕೆಂದು ನಾನು ಅಂದುಕೊಂಡಿದ್ದೇನೆ. ಹಿಂದಿನ ಸರಕಾರದಲ್ಲಿ ಸರಿಯಾದ ತನಿಖೆ ಆಗಿಲ್ಲ. ಮೇಲ್ನೋಟಕ್ಕೆ ಯಾರು ತಪ್ಪಿತಸ್ಥರಾಗಿದ್ದಾರೋ ಅವರ ಮೇಲೆಯೂ ಕ್ರಮ ಆಗಿಲ್ಲ. ಯಾರೋ ಸಣ್ಣವರ ಮೇಲೆ ಕ್ರಮ ತೆಗೆದುಕೊಂಡು ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಹಾಗಾಗಿ ಅದರ ಮರುತನಿಖೆಗೆ ನಾನು ಆದೇಶ ಮಾಡಲಿದ್ದೇನೆ.

► ನ್ಯಾಷನಲ್ ರೂರಲ್ ಹೆಲ್ತ್ ಮಿಷನ್ ಅಡಿಯಲ್ಲಿ ಇರುವ ಸಿಬ್ಬಂದಿ ಬಹಳ ವರ್ಷಗಳಿಂದ ಖಾಯಮಾತಿಗೆ ಕೇಳುತ್ತಿದ್ದಾರೆ. ಅದರ ಬಗ್ಗೆ?

ಖಂಡಿತ ಯೋಚನೆ ಮಾಡುತ್ತೇವೆ. ಆರ್ಥಿಕ ಇಲಾಖೆಯಿಂದ ತೀರ್ಮಾನ ಆಗಬೇಕು. ಸರಕಾರದ ಮೇಲೆ ಎಷ್ಟು ಹೊರೆಯಾಗಲಿದೆ ಎಂಬುದರ ಬಗ್ಗೆ ಯೋಚನೆ ಮಾಡಬೇಕು. ಈಗಾಗಲೇ ಹದಗೆಟ್ಟಿರುವ ಕಡೆಗಳಲ್ಲಿ ಮೊದಲು ಸರಿಪಡಿಸಬೇಕಿದೆ. ಡಯಾಲಿಸಿಸ್ ಕೇಂದ್ರಗಳು, ಆ್ಯಂಬುಲೆನ್ಸ್ ವ್ಯವಸ್ಥೆ, ಕಾಲ್ ಸೆಂಟರ್‌ಗಳು ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಅವನ್ನೆಲ್ಲ ಸರಿಯಾದ ದಾರಿಗೆ ತರಬೇಕಾಗಿದೆ.

► ಐದು ಗ್ಯಾರಂಟಿಗಳ ಜಾರಿಗಾಗಿ ಹೆಚ್ಚು ಹಣ ಹೋಗುತ್ತದೆ. ಈ ಹಂತದಲ್ಲಿ ನಿಮ್ಮ ಇಲಾಖೆಗೆ ಹೆಚ್ಚು ಹಣ ಸಿಗಬಹುದು ಎಂಬ ನಿರೀಕ್ಷೆ ಇದೆಯೆ?

ಅದನ್ನು ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಜನರಿಗಂತೂ ಅನುಕೂಲ ಆಗಿಯೇ ಆಗುತ್ತದೆ. ಜನರ ಸಾಮಾಜಿಕ ಬದುಕು ಸರಿಯಾದರೆ ಸಹಜವಾಗಿಯೇ ಅವರ ಆರೋಗ್ಯವೂ ಚೆನ್ನಾಗಿಯೇ ಇರುತ್ತದೆ. ಗ್ಯಾರಂಟಿ ಯೋಜನೆಗಳಿಗಾಗಿ ಹಣವಿಡುವ ಒತ್ತಡ ಇದ್ದೇ ಇದೆ. ಅದರ ನಡುವೆಯೂ ಆರೋಗ್ಯ ಇಲಾಖೆಗೆ ಹೆಚ್ಚು ತರುವುದು ಸಾಧ್ಯವಾಗಬಹುದು, ನೋಡೋಣ.

► ಗ್ಯಾರಂಟಿ ಯೋಜನೆಗಳಿಗಾಗಿ ಈಗ ಷರತ್ತುಗಳನ್ನು ಹಾಕುತ್ತಿದ್ದೀರಿ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಇದಕ್ಕೇನು ಹೇಳುತ್ತೀರಿ?

ನಾವು ಏನೇ ಮಾಡಿದರೂ ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಿಯೇ ಹುಡುಕುತ್ತವೆ. ಗೃಹಲಕ್ಷ್ಮೀ, ಮಹಿಳೆಯರ ಉಚಿತ್ ಬಸ್ ಸಂಚಾರ, ಅನ್ನಭಾಗ್ಯ, ಯುವನಿಧಿ ಈ ಯಾವ ಯೋಜನೆಗಳಿಗೂ ಸಮಸ್ಯೆಗಳಿಲ್ಲ. ಈಗ ಅವರು ತಕರಾರೆತ್ತುತ್ತಿರುವುದು ಗೃಹಜ್ಯೋತಿ ವಿಚಾರದಲ್ಲಿ. ಅಗತ್ಯವಿಲ್ಲದಿದ್ದರೂ ಉಚಿತ ಎಂಬ ಕಾರಣಕ್ಕೆ ಬಳಸುವಂತಾಗಬಾರದು. ಅದರಿಂದ ಪರಿಸರ, ನಮ್ಮ ವಿತರಣಾ ವ್ಯವಸ್ಥೆ ಎಲ್ಲದರ ಮೇಲೂ ಪರಿಣಾಮವಾಗುತ್ತದೆ. ದಾರಿ ತಪ್ಪಿಸುತ್ತಿದ್ದೇವೆ, ಸುಳ್ಳು ಹೇಳಿದ್ದೇವೆ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಇಂಥ ತೀರ್ಮಾನವನ್ನು ಯಾವ ಸರಕಾರವೂ ಮಾಡಿಲ್ಲ. ಅದರ ಬಗ್ಗೆ ಹೇಳಬೇಕೇ ಹೊರತು, ಏನೋ ತಪ್ಪು ಹುಡುಕುವುದರಲ್ಲಿ ನ್ಯಾಯ ಇಲ್ಲ.

► ದ್ವೇಷದ ರಾಜಕೀಯ ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ತಾವು ತಂದ ಗೋಹತ್ಯೆ ನಿಷೇಧ ಕಾಯ್ದೆ, ತಾವು ಮಾಡಿದ ಪುಸ್ತಕ ಪರಿಷ್ಕರಣೆ ಇವನ್ನು ಮರುಪರಿಶೀಲಿಸುವುದಕ್ಕೆ ಹೊರಟಿದ್ದೀರಿ ಎಂಬ ಆರೋಪಕ್ಕೆ ಏನೆನ್ನುತ್ತೀರಿ?

ಪಠ್ಯ ಪರಿಷ್ಕರಣೆ ಮಾಡಲೇಬೇಕು. ಯಾಕೆಂದರೆ, ಮಕ್ಕಳಿಗೆ ಇತಿಹಾಸಕ್ಕೆ ಸಂಬಂಧಿಸಿ ಬಹಳ ಮುಖ್ಯವಾದ ವಿಷಯಗಳನ್ನೆಲ್ಲ ತಿರುಚಿ, ಇವರ ಸಿದ್ಧಾಂತಕ್ಕೆ ಅನುಕೂಲವಾಗುವ ವಿಚಾರಗಳನ್ನೆಲ್ಲ ಹಾಕಿರುವುದನ್ನು ಖಂಡಿತವಾಗಿಯೂ ಬದಲಿಸಲೇಬೇಕು. ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಆಗಬಾರದು. ಶಿಕ್ಷಣ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ಬೆಳೆಸುವುದಕ್ಕೆ ಆಗಬೇಕೇ ಹೊರತು ಒಂದು ಸಿದ್ಧಾಂತಕ್ಕೆ ಒಳಗಾಗುವಂತಾಗಬಾರದು.

ಗೋಹತ್ಯೆ ನಿಷೇಧ ವಿಚಾರ 1964ರಲ್ಲಿಯೇ ಮಾಡಿದ್ದೇವೆ. ಅದು ನಮ್ಮ ಸಂವಿಧಾನದಲ್ಲಿಯೇ ಇದೆ. ಸಂವಿಧಾನಕ್ಕೆ ಸೇರಿಸುವಾಗ ಇದ್ದಿದ್ದು ಕಾಂಗ್ರೆಸ್‌ನವರೇ ಅಲ್ಲವೇ? ಪ್ರಶ್ನೆಯಿರುವುದು ಇವರು ತಂದ ತಿದ್ದುಪಡಿಗಳು ಬೇಕೋ ಬೇಡವೋ ಎಂಬುದು ಅಷ್ಟೆ. ಮತಾಂತರ ನಿಷೇಧ ಕಾಯ್ದೆ ದ್ವೇಷದ ರಾಜಕಾರಣ. ಅವರು ಮಾಡಿರುವ ದ್ವೇಷದ ರಾಜಕಾರಣ ನಾವು ಮಾಡುತ್ತಿಲ್ಲ. ಜನರಿಗೆ ತೊಂದರೆ ಕೊಡುವಂಥ ಕಾನೂನುಗಳನ್ನು ಮಾಡುವುದು ಬಹಳ ಸುಲಭ. ಅಂಥ ಉದ್ದೇಶ ಸರಕಾರದ್ದಾಗಬಾರದು. ನಿಜವಾಗಿಯೂ ಅನ್ಯಾಯವಾಗುತ್ತಿದ್ದರೆ, ಕಾನೂನು ಬಾಹಿರ ರೀತಿಯಲ್ಲಿ ಮತಾಂತರ ಆಗುತ್ತಿದ್ದರೆ ಅದಕ್ಕಾಗಿ ಈಗಾಗಲೇ ಕಾನೂನು ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕೇ ಹೊರತು ಭಯ ಸೃಷ್ಟಿಸುವುದು, ಎಲ್ಲರನ್ನೂ ಸಂಶಯದಿಂದ ನೋಡುವುದು ಸರಿಯಲ್ಲ. ಒಂದು ಸಮುದಾಯವನ್ನು ಅನುಮಾನಿಸುವುದು ಸರಿಯಲ್ಲ. ನಾವು ಪ್ರಗತಿಪರರಾಗಿ ಇರಬೇಕು. ಪ್ರಗತಿಪರ ಚಿಂತನೆಗಳಿರಬೇಕು. ಅದನ್ನು ಬಿಟ್ಟು ಹಿಂದಕ್ಕೇ ಹೋಗುತ್ತೇವೆ ಎಂಬುದು ಸರಿಯಲ್ಲ.

Similar News