ಚಾರ್ಮಾಡಿ: ಟಿಟಿ, ತರಕಾರಿ ಸಾಗಾಟದ ವಾಹನ ಪಲ್ಟಿ

Update: 2023-06-10 14:33 GMT

ಬೆಳ್ತಂಗಡಿ: ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ ಮತ್ತು ತರಕಾರಿ ಸಾಗಾಟದ ವಾಹನಗಳೆರಡು ಚಾರ್ಮಾಡಿ ಪೇಟೆಯಲ್ಲಿ ಪಲ್ಟಿಯಾದ ಘಟನೆ ಶನಿವಾರ ಮಧ್ಯಾಹ್ನ ನಡೆಯಿತು.

ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಪೇಟೆ ಪ್ರದೇಶದ ಅಂಗಡಿಯೊಂದರ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿತ್ತು. ಟಿಟಿ ವಾಹನ ಅಂಗಡಿಯಿಂದ ಅನತಿ ದೂರದಲ್ಲಿ ಪಲ್ಟಿಯಾದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ. ಈ ಘಟನೆ ನಡೆದ ಕೊಂಚ ಹೊತ್ತಿನಲ್ಲಿ ಇಲ್ಲಿಂದ 100ಮೀ. ಮುಂಭಾಗದಲ್ಲಿ ತರಕಾರಿ ಸಾಗಾಟದ ವಾಹನ ರಸ್ತೆ ಬದಿಗೆ ಜಾರಿ ಚರಂಡಿಗೆ ಬಿದ್ದಿದೆ. ಎರಡು ಘಟನೆಗಳಲ್ಲಿ ಯಾರಿಗೂ ಹೆಚ್ಚಿನ ಗಾಯಗಳಿಲ್ಲ ಎಂದು ತಿಳಿದುಬಂದಿದೆ.

ಚಾರ್ಮಾಡಿ ಒಂದನೇ ತಿರುವಿನಿಂದ ಚಾರ್ಮಾಡಿ ಹಳ್ಳದವರೆಗಿನ 3 ಕಿಮೀ ವ್ಯಾಪ್ತಿಯ ರಸ್ತೆ  ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಈ 3 ಕಿಮೀ. ವ್ಯಾಪ್ತಿಯಲ್ಲಿ ಹಾಕಲಾಗಿರುವ ಡಾಮರು ವಿಪರೀತ ನಯವಾಗಿದ್ದು ಮಳೆಯ ಸಮಯ ಇಲ್ಲಿ ವಾಹನಗಳು ಚಾಲಕರ ಹತೋಟಿಗೆ ಸಿಗದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಕಳೆದ ವರ್ಷವೂ ಇಲ್ಲಿ ಹಲವು ಅಪಘಾತಗಳು ಸಂಭವಿಸಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಶನಿವಾರ ಕೂಡ ಪರಿಸರದಲ್ಲಿ ಮಳೆ ಇದ್ದು ವಾಹನಗಳು ಉರುಳಿ ಬೀಳಲು ಕಾರಣವಾಗಿದೆ.

Similar News